ಗದಗ : ಮಗುವನ್ನು ಬೈಕ್‌ನ ಸೈಡ್ ಬ್ಯಾಗ್‌ನಲ್ಲಿ ಕೂರಿಸಿ ಕರೆದುಕೊಂಡು ಹೋದ ತಂದೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸದ್ಯ ಘಟನೆಯ ಫೋಟೋ ನೋಡಿದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಮಗುವಿನ ಸುರಕ್ಷತೆಯೊಂದಿಗೆ ಈ ರೀತಿಯ ನಿರ್ಲಕ್ಷ್ಯ ತೋರಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. Update ಆಗುತ್ತಿದೆ…..
ಗದಗ ಜಿಲ್ಲೆಯಲ್ಲಿ ತಂದೆಯೊಬ್ಬನ ನಿರ್ಲಕ್ಷ್ಯಭರಿತ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿರುವ ಘಟನೆ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಪೋಷಕರಿಗೆ ಮಕ್ಕಳ ಸುರಕ್ಷತೆ ಮೊದಲ ಆದ್ಯತೆಯಾಗಿರುತ್ತದೆ.
ತಮ್ಮ ಮಕ್ಕಳಿಗಾಗಿ ಯಾವುದೇ ಕಷ್ಟವನ್ನಾದರೂ ಸಹಿಸುವ ಪೋಷಕರು, ಅವರ ಸುರಕ್ಷತೆಯಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಆದರೆ ಇಲ್ಲೋಬ್ಬ ತಂದೆ ಮಾಡಿದ ಕೆಲಸ ನೋಡಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೈಕ್‌ನ ಸೈಡ್ ಬ್ಯಾಗ್‌ನಲ್ಲಿ ಮಗು :
ಗದಗ ನಗರದ ಸರ್ಕಲ್ ಒಂದರಿಂದ ಜಿಲ್ಲಾಧಿಕಾರಿ ಕಚೇರಿ ಕಡೆಗೆ ಸಾಗುತ್ತಿದ್ದ ಬೈಕ್ ಸವಾರನೊಬ್ಬ, ತನ್ನ ಪುಟ್ಟ ಮಗುವನ್ನು ಬೈಕ್‌ನಲ್ಲಿ ಸಾಮಾನ್ಯವಾಗಿ ಕೂರಿಸುವ ಬದಲು, ಬೈಕ್‌ನ ಸೈಡ್ ಬ್ಯಾಗ್‌ನಲ್ಲಿ ಕೂರಿಸಿಕೊಂಡು ಪ್ರಯಾಣಿಸುತ್ತಿದ್ದ ದೃಶ್ಯ ಕಂಡುಬಂದಿದೆ.
ಈ ಸುದ್ದಿಯನ್ನು ಓದಿ : PUC ಪಾಸಾದವರಿಗೆ ಭರ್ಜರಿ ಅವಕಾಶ; KSPಯಲ್ಲಿ 1600 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ.
ಮಗುವನ್ನು ಹೀಗೆ ಬೈಕ್‌ನ ಸೈಡ್ ಬ್ಯಾಗ್‌ನಲ್ಲಿ ಇಕ್ಕಟ್ಟಾಗಿ ಕೂರಿಸಲಾಗಿದ್ದು, ಮಗುವಿನ ತಲೆ ಮಾತ್ರ ಹೊರಗೆ ಕಾಣಿಸುತ್ತಿತ್ತು. ಈ ಅಪಾಯಕಾರಿ ದೃಶ್ಯವನ್ನು ಗಮನಿಸಿದ ದಾರಿಹೋಕರು ತಕ್ಷಣವೇ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫೋಟೋ :
ಬೈಕ್ ಸವಾರನ ಈ ಬೇಜವಾಬ್ದಾರಿ ನಡೆ ಕ್ಷಣಾರ್ಧದಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಗುವಿನ ಸುರಕ್ಷತೆಯ ಜೊತೆ ಚೆಲ್ಲಾಟವಾಡಿದ ತಂದೆಯ ನಡೆಗೆ ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಸಣ್ಣ ಆಯತಪ್ಪಿದರೂ ಮಗುವಿನ ಜೀವಕ್ಕೆ ದೊಡ್ಡ ಅಪಾಯ ಉಂಟಾಗಬಹುದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಪೊಲೀಸರ ತನಿಖೆ ಆರಂಭ :
ಘಟನೆಯ ಫೋಟೋ ವೈರಲ್ ಆಗುತ್ತಿದ್ದಂತೆಯೇ ಗದಗ ಪೊಲೀಸರು ಕಾರ್ಯಪ್ರವರ್ತರಾಗಿ ಫೋಟೋದಲ್ಲಿದ್ದ ಬೈಕ್ ಸಂಖ್ಯೆಯ ಆಧಾರದ ಮೇಲೆ ಸಂಬಂಧಿಸಿದ ವ್ಯಕ್ತಿಯನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಪೇಟೆಗೆ ತೆರಳಿ ವಾಪಸ್ ಬರುತ್ತಿದ್ದ ವೇಳೆ ಈ ರೀತಿಯಾಗಿ ಮಗುವನ್ನು ಬೈಕ್‌ನ ಸೈಡ್ ಬ್ಯಾಗ್‌ನಲ್ಲಿ ಕೂರಿಸಿಕೊಂಡು ಬಂದಿದ್ದಾಗಿ ತಂದೆ ಸಮರ್ಥನೆ ನೀಡಿದ್ದಾರೆ ಎನ್ನಲಾಗಿದೆ.
ದಂಡ ವಿಧಿಸಿ ಕಠಿಣ ಎಚ್ಚರಿಕೆ :
ಮಗುವಿನ ಜೀವವನ್ನು ಅಪಾಯಕ್ಕೆ ತಳ್ಳಿದ ಕಾರಣಕ್ಕೆ ಪೊಲೀಸರು ಆತನಿಗೆ ದಂಡ ವಿಧಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಕೃತ್ಯ ಪುನರಾವರ್ತನೆ ಮಾಡಬಾರದು ಎಂದು ಕಟ್ಟುನಿಟ್ಟಿನ ಎಚ್ಚರಿಕೆಯನ್ನೂ ನೀಡಿದ್ದಾರೆ.
ಇದನ್ನು ಓದಿ : ಆಕಾಶದಲ್ಲೇ ಏರ್ ಬಲೂನ್‌ಗೆ ಬೆಂಕಿ; ದುರಂತದಲ್ಲಿ 8 ಮಂದಿ ಪ್ರವಾಸಿಗರ ಸಾವು, 13 ಜನರ ರಕ್ಷಣೆ.
ಮೋಟಾರು ವಾಹನ ಕಾಯ್ದೆ (Motor Vehicle Act) ಪ್ರಕಾರ ಮಾತ್ರವಲ್ಲದೆ, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದಲೂ ಇಂತಹ ವರ್ತನೆ ಗಂಭೀರ ನಿರ್ಲಕ್ಷ್ಯವೆಂದು ಪರಿಗಣಿಸಲಾಗುತ್ತದೆ.
ಈ ಘಟನೆ ಬಳಿಕ ರಸ್ತೆ ಸುರಕ್ಷತೆ ಹಾಗೂ ಮಕ್ಕಳ ರಕ್ಷಣೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ. ಪೋಷಕರು ಮಕ್ಕಳನ್ನು ಕರೆದುಕೊಂಡು ಹೋಗುವಾಗ ಯಾವುದೇ ಸಂದರ್ಭದಲ್ಲೂ ಸುರಕ್ಷತೆಯಲ್ಲಿ ರಾಜಿ ಮಾಡಿಕೊಳ್ಳಬಾರದು ಎಂಬ ಸಂದೇಶವನ್ನು ಈ ಘಟನೆ ಸ್ಪಷ್ಟಪಡಿಸಿದೆ.
ಸಂಪಾದಕೀಯ :
ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪೋಷಕರು ಯಾವುದೇ ಕಾರಣಕ್ಕೂ ಹೀಗೆ ನಿರ್ಲಕ್ಷ್ಯ ತೋರಬಾರದು. ಬೈಕ್‌ನ ಲಗೇಜ್ ಬ್ಯಾಗ್ ಅಥವಾ ಸುರಕ್ಷಿತವಲ್ಲದ ಜಾಗದಲ್ಲಿ ಮಗುವನ್ನು ಕೂರಿಸಿಕೊಂಡು ಪ್ರಯಾಣಿಸುವುದು ದೊಡ್ಡ ಅಪಾಯಕ್ಕೆ ಕಾರಣವಾಗಬಹುದು.
ಮೂಗಿನ ಆಕಾರ ನೋಡಿ ನಿಮ್ಮ ವ್ಯಕ್ತಿತ್ವ ಮತ್ತು ಸ್ವಭಾವ ತಿಳಿಯಬಹುದೇ?
ಸಣ್ಣದೊಂದು ಬ್ರೇಕ್, ರಸ್ತೆ ಗುಂಡಿ ಅಥವಾ ವಾಹನ ನಿಯಂತ್ರಣ ತಪ್ಪಿದರೂ ಮಗುವಿಗೆ ಗಂಭೀರ ಗಾಯವಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಇಂತಹ ನಡೆಗಳು ಕೇವಲ ಸಂಚಾರ ನಿಯಮ ಉಲ್ಲಂಘನೆ ಮಾತ್ರವಲ್ಲ, ಮಗುವಿನ ಜೀವದ ಜೊತೆ ಆಟವಾಡಿದಂತೆಯೇ ಆಗುತ್ತದೆ.
ಪ್ರತಿಯೊಬ್ಬ ಪೋಷಕರೂ ಮಕ್ಕಳನ್ನು ವಾಹನದಲ್ಲಿ ಕರೆದೊಯ್ಯುವಾಗ ಸುರಕ್ಷತಾ ಕ್ರಮಗಳಿಗೆ ಮೊದಲ ಆದ್ಯತೆ ನೀಡಬೇಕು. ಒಂದು ಕ್ಷಣದ ನಿರ್ಲಕ್ಷ್ಯ ಜೀವಿತಾವಧಿಯ ಪಶ್ಚಾತ್ತಾಪಕ್ಕೆ ಕಾರಣವಾಗಬಹುದು.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ







