ಅಥಣಿ : ಹೆಂಡತಿ ಮೇಲೆ ಅತಿಯಾದ ಸಂಶಯದಿಂದ ಪತಿಯೋರ್ವ ನಿದ್ದೆಯಲ್ಲಿದ್ದ ಪತ್ನಿಯನ್ನು ಕೊಚ್ಚಿ ಕೊಲೆ ಭೀಕರ ಘಟನೆ ಅಥಣಿಯಲ್ಲಿ ನಡೆದಿದ್ದು, ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ದಂಪತಿಗೆ ಇಬ್ಬರು ಪುಟ್ಟ ಮಕ್ಕಳಿದ್ದು, ಈ ದುರ್ಘಟನೆಯಿಂದ ಅವರ ಬದುಕೇ ಅತಂತ್ರವಾಗಿದೆ. ಕೊಲೆ ಪ್ರಕರಣದಲ್ಲಿ ತಂದೆ ಜೈಲು ಪಾಲಾದರೆ, ಶಾಶ್ವತವಾಗಿ ತಾಯಿಯನ್ನು ಕಳೆದುಕೊಂಡಿರುವ ಈ ಮಕ್ಕಳು ಅನಾಥರಂತಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗ್ರಾಮವೊಂದರಲ್ಲಿ ಕುಟುಂಬ ಕಲಹವೊಂದು ಭೀಕರ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ಸದ್ಯ ಬೆಳಕಿಗೆ ಬಂದಿದೆ. ಹೆಂಡತಿಯ ಮೇಲಿನ ಅತಿಯಾದ ಅನುಮಾನ ಮತ್ತು ನಿರಂತರ ಜಗಳದ ಪರಿಣಾಮವಾಗಿ, ಪತಿಯೇ ತನ್ನ ಪತ್ನಿಯನ್ನು ನಿದ್ದೆಯಲ್ಲಿದ್ದ ವೇಳೆ ಮಾರಕಾಸ್ತ್ರದಿಂದ ಹತ್ಯೆ ಮಾಡಿದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕೊಲೆಯಾದ ಮಹಿಳೆಯನ್ನು ಶೋಭಾ (35) ಎಂದು ಗುರುತಿಸಲಾಗಿದ್ದು, ಆರೋಪಿ ಪತಿ ಪರಗೊಂಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ದಂಪತಿ ಮೂಲತಃ ಅಥಣಿ ತಾಲೂಕಿನ ಖವಟಖೊಪ್ಪ ಗ್ರಾಮದ ನಿವಾಸಿಗಳಾಗಿದ್ದು, ಕಳೆದ ಕೆಲವು ತಿಂಗಳಿಂದ ಉದ್ಯೋಗದ ಕಾರಣದಿಂದ ಸ್ಥಳೀಯ ಮಠವೊಂದರಲ್ಲಿ ವಾಸಿಸುತ್ತಿದ್ದರು.
ಕೌಟುಂಬಿಕ ಕಲಹ, ಪತ್ನಿಯನ್ನು ಕೊಚ್ಚಿ ಕೊಲೆ :
ಮೃತ ಶೋಭಾ ಮಠದ ಶಾಲೆಯೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರೆ, ಪತಿ ಪರಗೊಂಡ ಅದೇ ಸ್ಥಳದಲ್ಲಿ ಚಾಲಕನಾಗಿ ಸೇವೆ ನಿರ್ವಹಿಸುತ್ತಿದ್ದನು ಎಂದು ತಿಳಿದುಬಂದಿದೆ. ಈ ಕುಟುಂಬ ಹೊರಗೆ ಸಾಮಾನ್ಯ ಕುಟುಂಬದಂತೆ ಕಾಣುತ್ತಿದ್ದರೂ ಸಹ ಈ ದಂಪತಿಯ ನಡುವೆ ಕಳೆದ ಕೆಲ ದಿನಗಳಿಂದ ತೀವ್ರ ಕಲಹವಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನು ಓದಿ : ದಿಢೀರ್ ಓಪನ್ ಆದ ಚಲಿಸುತ್ತಿದ್ದ ಶಾಲಾ ವ್ಯಾನಿನ ಹಿಂಬಾಗಿಲು ; ರಸ್ತೆಗೆ ಬಿದ್ದ 5 ಮಕ್ಕಳು.
ಪೊಲೀಸರ ಪ್ರಕಾರ, ದಂಪತಿಗಳಿಗೆ ಕಳೆದ 15 ವರ್ಷಗಳ ಹಿಂದೆಯೇ ಮದುವೆಯಾಗಿದ್ದರೂ ಸಹ, ಪತ್ನಿಯ ನಡತೆಯ ಬಗ್ಗೆ ಪತಿ ನಿರಂತರ ಅನುಮಾನ ಪಡುತ್ತಿದ್ದ ಎನ್ನಲಾಗಿದೆ. ಇದೇ ವಿಷಯವಾಗಿ ಪ್ರತಿದಿನ ಇಬ್ಬರ ನಡುವೆ ವಾಗ್ವಾದ ನಡೆಯುತ್ತಿತ್ತು. ಇದೇ ಅನುಮಾನ ಕ್ರಮೇಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕೊನೆಗೆ ಅದು ದುರಂತಕ್ಕೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ.

ಘಟನೆ ನಡೆದ ದಿನ ರಾತ್ರಿ ಶೋಭಾ ಗಾಢ ನಿದ್ರೆಯಲ್ಲಿದ್ದಾಗ, ಆರೋಪಿ ಪತಿ ಮಾರಕಾಸ್ತ್ರಗಳಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ತೀವ್ರ ಗಾಯಗೊಂಡ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಬೆಳಿಗ್ಗೆ ಘಟನೆ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆಯ ಹಿನ್ನಲೆಯಲ್ಲಿ ಕೆಲಕಾಲ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
ಇದನ್ನು ಓದಿ : ಡಿವೈಡರ್ ಗೆ ಡಿಕ್ಕಿ ಹೊಡೆದ BMW : ಡಿಕ್ಕಿ ರಭಸಕ್ಕೆ ಛಿದ್ರವಾಗಿ ಇಬ್ಬರ ಸಾವು.
ಪ್ರಕರಣ ದಾಖಲು :
ಮಾಹಿತಿ ತಿಳಿಯುತ್ತಿದ್ದಂತೆ ಅಥಣಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಸಾಮಾಜಿಕ ತಜ್ಞರ ಅಭಿಪ್ರಾಯದಂತೆ, ದಾಂಪತ್ಯ ಜೀವನದಲ್ಲಿ ಪರಸ್ಪರ ನಂಬಿಕೆ ಕೊರತೆ ಮತ್ತು ಅನುಮಾನ ಹೆಚ್ಚಾದರೆ ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಕುಟುಂಬ ಕಲಹಗಳು ಸಂವಾದದ ಮೂಲಕ ಬಗೆಹರಿಯಬೇಕು, ಹಿಂಸೆಗೆ ಅವಕಾಶ ಕೊಡಬಾರದು ಎಂಬ ಮಾತು ಮತ್ತೆ ಚರ್ಚೆಗೆ ಬಂದಿದೆ.
ಇತ್ತೀಚಿನ ಎಲ್ಲಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಓದಿ







