ನಿವೃತ್ತ ಶಿಕ್ಷಕ ಆರ್.ಡಿ. ಪತ್ತಾರರಿಗೆ ಅದ್ಧೂರಿ ಸನ್ಮಾನ

ಗಣೇಶವಾಡಿಯಲ್ಲಿ ನಿವೃತ್ತ ಶಿಕ್ಷಕ ಆರ್.ಡಿ. ಪತ್ತಾರರಿಗೆ ಅದ್ಧೂರಿ ಸನ್ಮಾನ; ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ಗ್ರಾಮ.

ಘಟಪ್ರಭಾ (ಗೋಕಾಕ) : ಗ್ರಾಮದ ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ ನಿವೃತ್ತ ಶಿಕ್ಷಕರಾದ ಆರ್.ಡಿ. ಪತ್ತಾರ ಅವರ ಸನ್ಮಾನ ಕಾರ್ಯಕ್ರಮವು ಗೋಕಾಕ ತಾಲೂಕಿನ ಗಣೇಶವಾಡಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಇದೇ ಶನಿವಾರ ಶಾಲಾ ಆವರಣದಲ್ಲಿ ನಡೆಯಿತು.

ಗ್ರಾಮಸ್ಥರು, ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳು ಹಾಗೂ ಬಂಧು-ಬಳಗದವರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮವು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಯಿತು.

ಸಾರೋಟದಲ್ಲಿ ಮೆರವಣಿಗೆ, ಸನ್ಮಾನ :

ಕಾರ್ಯಕ್ರಮದ ಅಂಗವಾಗಿ ಆರ್.ಡಿ. ಪತ್ತಾರ ಹಾಗೂ ಅವರ ಪತ್ನಿಯವರನ್ನು ರಥ-ಸಾರೋಟದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯ ಮೂಲಕ ಕರೆತರಲಾಯಿತು. ವಾದ್ಯಮೇಳಗಳು ಹಾಗೂ ಸಂಭ್ರಮದ ವಾತಾವರಣದ ನಡುವೆ ನಡೆದ ಮೆರವಣಿಗೆಗೆ ಗ್ರಾಮಸ್ಥರು ಹರ್ಷೋದ್ಗಾರದಿಂದ ಸ್ವಾಗತ ಕೋರಿದರು.

ಸ್ವಾಗತ, ಉದ್ಘಾಟನೆ ಹಾಗೂ ಅಭಿನಂದನಾ ಕಾರ್ಯಕ್ರಮಗಳು ಜರುಗಿದವು. ಈ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಊರಿನ ಹಿರಿಯರಾದ ಹಾಗೂ ಪ್ರಭಾಸ್ ಶುಗರ್ ನಿರ್ದೇಶಕರಾದ ಶಿವಲಿಂಗ ಪೂಜಾರಿ ಹಾಗು ವಕೀಲರಾದ ಸುರೇಶ್ ಜಾದವ ಮತ್ತು ಬಾಳೇಶ್ ಜಾದವ ಅವರು ನಿವೃತ ಶಿಕ್ಷಕರಾದ ರಾಮಚಂದ್ರ ಪತ್ತಾರ ಬಗ್ಗೆ ಮಾತನಾಡಿದರು.

ಈ ಸುದ್ದಿಯನ್ನು ಓದಿ : ಮೊಬೈಲ್ ಕದ್ದ ಮರಿ ಕೋತಿ; ತಾಯಿ ಕೋತಿ ಮಾಡಿದ ಕೆಲಸ ವೈರಲ್.

ಇದೇ ವೇಳೆ ಪತ್ತಾರ ಗುರುಗಳ ಶಿಕ್ಷಣ ಸೇವೆ, ವ್ಯಕ್ತಿತ್ವ ಹಾಗೂ ವಿದ್ಯಾರ್ಥಿಗಳ ಮೇಲಿನ ಅವರ ಪ್ರಭಾವದ ಕುರಿತು ಹಲವರು ಹೃದಯಸ್ಪರ್ಶಿ ಮಾತುಗಳನ್ನಾಡಿದರು.

27 ವರ್ಷಗಳ ಅಮೋಘ ಸೇವೆ :

ಸುಮಾರು 27 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪತ್ತಾರ ಗುರುಗಳ ಕಾರ್ಯವನ್ನು ಸ್ಮರಿಸಿ ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ನೃತ್ಯ-ಗೀತೆಯ ಮೂಲಕ ಗೌರವ ನಮನ ಸಲ್ಲಿಸಿದರು.

ಇದೇ ವೇಳೆ ನಿವೃತ ಶಿಕ್ಷಕ ಪತ್ತಾರ ಅವರಿಗೆ ಗ್ರಾಮಸ್ಥರು, ಸಹೋದ್ಯೋಗಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ಆಪ್ತರಿಂದ ನೂರಾರು ಸನ್ಮಾನಗಳು ನಡೆದವು.

ಈ ವೇಳೆ ಮಾತನಾಡಿದ ಸತ್ಕಾರ ಮೂರ್ತಿಯಾದ  ಆರ್.ಡಿ. ಪತ್ತಾರ ಅವರು ತಮ್ಮ ಸೇವಾ ಅವಧಿಯ ನೆನಪುಗಳನ್ನು ಹಂಚಿಕೊಂಡು, ತಮ್ಮನ್ನು ಗೌರವಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು. ಅವರ ಭಾವನಾತ್ಮಕ ಮಾತುಗಳು ಹಲವರ ಮನಸ್ಸನ್ನು ತಟ್ಟಿದವು.

ganeshwadi pattar teacher felicitation ceremony 1
ಆರ್.ಡಿ. ಪತ್ತಾರ ಹಾಗೂ ಅವರ ಪತ್ನಿ

ಹೋಳಿಗೆ ಊಟ :

ಕಾರ್ಯಕ್ರಮದ ಬಳಿಕ ಗ್ರಾಮಸ್ಥರಿಂದ ಎಲ್ಲರಿಗೂ ಹೋಳಿಗೆ, ಮಾವಿನ ಹಣ್ಣಿನ ಶೀಕರಣೆ, ಅನ್ನ, ಸಾಂಬಾರು ಸೇರಿದಂತೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಗಣೇಶವಾಡಿ (Ganeshawadi) ಗ್ರಾಮದ ಸರ್ವ ಮಹಾಜನರು, ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ಅಪಾರ ಶಿಷ್ಯ ಬಳಗದ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಆರ್.ಡಿ. ಪತ್ತಾರ ಅವರ ದೀರ್ಘಕಾಲದ ಶಿಕ್ಷಣ ಸೇವೆಗೆ ಸಂದ ಗೌರವವಾಗಿ ಈ ಸನ್ಮಾನ ಕಾರ್ಯಕ್ರಮ ಗ್ರಾಮದಲ್ಲಿ ವಿಶೇಷ ಮೆರುಗು ಮೂಡಿಸಿತು.

ಇದನ್ನು ಓದಿ : ಗೋಕಾಕ್‌ನಲ್ಲಿ ವ್ಯಕ್ತಿ ಆತ್ಮಹತ್ಯೆ: ಡೆತ್‌ನೋಟ್‌ನಲ್ಲಿ ಪೊಲೀಸ್ ಅಧಿಕಾರಿಗಳ ಹೆಸರು.

ಕಾರ್ಯಕ್ರಮವನ್ನು ಶಿಕ್ಷಕ ಶಿವಾನಂದ ಕವಲೂರ ನಿರೂಪಿಸಿದರು, ಪ್ರಾಸ್ತಾವಿಕವಾಗಿ ಪ್ರಭಾರಿ ಪ್ರಧಾನ ಗುರುಗಳಾದ ಅರವಿಂದ್ ಚೌಡಣ್ಣನವರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಮಂಜು ಶಿಗದಡ್ಡಿ ಸ್ವಾಗತಿಸಿದರೆ, ಶಿಕ್ಷಕರಾದ ಅನಿಲ್ ಭಂಡಾರಿ ಹಾಗೂ ವಿಲಾಸ್ ಪಾಟೀಲ್ ಸತ್ಕಾರ ಕಾರ್ಯಕ್ರಮ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಶ್ರೀಪತಿ ಗಣೇಶವಾಡಿ, ಅಪ್ಪಯ್ಯ ಮಾಳ್ಯಾಗೋಳ, ಸಿದ್ರಾಮ ಮೂಲಿಮನಿ, ಯಲಗೌಡ್ ಪಾಟೀಲ್, ಬರಮ ಗೌಡ ಪಾಟೀಲ್, ಅಲ್ಲಪ್ಪ ಸನದಿ, ಲಕ್ಷ್ಮಣ್ ತುಕಾರೆ, ರಮೇಶ್ ಪೂಜೇರಿ, ಅಪ್ಪಯ್ಯ ಮೂಲಿಮನಿ, ವೀರೇಂದ್ರ ಪತ್ತಾರ ಹಾಗೂ ಊರಿನ ಎಲ್ಲ ಹಿರಿಯರು ರಾಜಪುರ ಕ್ಲಸ್ಟರ್ ನ ಎಲ್ಲಾ ಪ್ರಧಾನ ಗುರುಗಳು ಹಾಗೂ ಸಹ ಶಿಕ್ಷಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ನಿವೃತ ಶಿಕ್ಷಕ ಆರ್.ಡಿ.ಪತ್ತಾರ :

ಶಿಕ್ಷಕರಾದ ಆರ್. ಡಿ. ಪತ್ತಾರ ಅವರು ಗಣೇಶವಾಡಿ ಶಾಲೆಯಲ್ಲಿ ಸುಮಾರು 27 ವರ್ಷಗಳ ಕಾಲ ಸುದೀರ್ಘ ಶಿಕ್ಷಣ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ನಿವೃತ್ತಿಯ ಮುನ್ನದ ಎರಡು ವರ್ಷಗಳಲ್ಲಿ ಪ್ರಭಾರಿ ಪ್ರಧಾನ ಗುರುಗಳಾಗಿ ಕಾರ್ಯನಿರ್ವಹಿಸಿದ ಅವರು ಶಾಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದರು. ದಾನಿಗಳು ಮತ್ತು ಸಮಾಜದ ಸಹಕಾರದ ಮೂಲಕ ಸುಮಾರು ₹10 ಲಕ್ಷ ಮೌಲ್ಯದ ವಿವಿಧ ಶೈಕ್ಷಣಿಕ ಮತ್ತು ಮೂಲಸೌಕರ್ಯ ಸೌಲಭ್ಯಗಳನ್ನು ಶಾಲೆಗೆ ಒದಗಿಸುವಲ್ಲಿ ಯಶಸ್ವಿಯಾಗಿದ್ದರು.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಷ್ಟೇ ಅಲ್ಲದೆ, ತಮ್ಮ ವೈಯಕ್ತಿಕ ಸಂಪನ್ಮೂಲಗಳಿಂದ ಸುಮಾರು ₹2 ಲಕ್ಷ ವೆಚ್ಚದಲ್ಲಿ ತೆರೆದ ರಂಗವೇದಿಕೆಯನ್ನು ನಿರ್ಮಿಸಿ ಶಾಲೆಗೆ ಕೊಡುಗೆಯಾಗಿ ನೀಡಿರುವುದು ಅವರ ಶಿಕ್ಷಣ ಪ್ರೇಮ ಮತ್ತು ಸಮಾಜಮುಖಿ ಚಿಂತನೆಗೆ ಸಾಕ್ಷಿಯಾಗಿದೆ.

ವಿದ್ಯಾರ್ಥಿ ಹಾಗೂ ಶಾಲೆಯ ಹಿತಾಸಕ್ತಿಗಾಗಿ ಹಗಲಿರುಳು ಶ್ರಮಿಸಿದ ಅವರ ಸೇವೆ ಇತರ ಶಿಕ್ಷಕರಿಗೂ ಪ್ರೇರಣೆಯಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಅನುಕರಣೀಯ ಮಾದರಿಯಾಗಿ ಗುರುತಿಸಿಕೊಂಡಿದೆ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top