ಮೂಡಲಗಿಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ ಪತ್ತೆ

ಮೂಡಲಗಿಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ ಪತ್ತೆ; 4 ಟನ್ ಅಕ್ಕಿ ವಶಕ್ಕೆ.

ಮೂಡಲಗಿ: ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ವಿತರಿಸಲಾಗುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ, ಸುಮಾರು 4 ಟನ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗ್ರಾಮದಲ್ಲಿ ನಡೆದಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ, ಕಾರ್ಯಾಚರಣೆ ವೇಳೆ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ತಡೆದು ಪರಿಶೀಲನೆ ನಡೆಸಲಾಯಿತು. ಈ ವೇಳೆ ವಾಹನದಲ್ಲಿ ದೊಡ್ಡ ಪ್ರಮಾಣದ ಪಡಿತರ ಅಕ್ಕಿ ಪತ್ತೆಯಾಗಿದ್ದು, ಅದರಲ್ಲಿ ಅಂದಾಜು 96 ಸಾವಿರ ರೂಪಾಯಿ ಮೌಲ್ಯದ ಅಕ್ಕಿ ಇದ್ದು ಅದನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕ್ರೈಂ ಸುದ್ದಿ ಓದಿ : ತಂಪು ಪಾನೀಯ ಕುಡಿಸಿ ಮಹಿಳೆ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ಆರೋಪ; 10 ಮಂದಿ ಬಂಧನ.

ಜೊತೆಗೆ ವಾಹನ ಮತ್ತು ಅದರ ಚಾಲಕನನ್ನು ಅಧಿಕಾರಿಗಳು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಮೂಡಲಗಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಎಲ್ಲಿಗೆ ಸಾಗುತ್ತಿದೆ ಪಡಿತರ ಅಕ್ಕಿ :

ವಶಪಡಿಸಿಕೊಂಡ ವಾಹನವು ಬಾಗಲಕೋಟೆ ಜಿಲ್ಲೆಗೆ ಸೇರಿದದ್ದಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ಅಕ್ಕಿಯ ಮೂಲ ಹಾಗೂ ಅದನ್ನು ಎಲ್ಲಿ ಸಾಗಿಸಲಾಗುತ್ತಿತ್ತು ಎಂಬುದರ ಕುರಿತು ಅಧಿಕಾರಿಗಳು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಅದಾಗ್ಯೂ, ಬಾಗಲಕೋಟೆ ಜಿಲ್ಲೆಯಲ್ಲಿ ರಾಜಾರೋಷವಾಗಿ ಬಡವರ ಹೊಟ್ಟೆ ತುಂಬಿಸಬೇಕಿದ್ದ ಅನ್ನ ಭಾಗ್ಯದ ಅಕ್ಕಿ (ಪಡಿತರ ಅಕ್ಕಿ) ವ್ಯವಸ್ಥಿತವಾಗಿ ರಾತ್ರಿ ವೇಳೆ ಬೆಳಗಾವಿ ಜಿಲ್ಲೆಯ ಪ್ರವೇಶಿಸಿ (ಗುರ್ಲಾಪೂರ, ಯಾದವಾಡ-ಘಟಪ್ರಭಾ ಮೂಲಕ ಮತ್ತು ಹಾರೂಗೇರಿ ಕ್ರಾಸ್ ಮೂಲಕ) ರೈಸ್‌ ಮಿಲ್‌ಗಳ ಗೋಡೌನ್‌ ಸೇರುತ್ತಿವೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಅನ್ನಭಾಗ್ಯ ಯೋಜನೆಯಡಿ ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಉಚಿತವಾಗಿ ನೀಡಲಾಗುವ ಅಕ್ಕಿಯನ್ನು ಕೆಲವರು ಕಡಿಮೆ ಬೆಲೆಗೆ ಖರೀದಿಸಿ ಅಕ್ರಮವಾಗಿ ಬೇರೆಡೆ ಸಾಗಾಟ ಮಾಡುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಹಲವು ದೂರುಗಳು ಬಂದಿದ್ದವು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ವಿಶೇಷ ನಿಗಾ ವಹಿಸಿ ಕಾರ್ಯಾಚರಣೆ ನಡೆಸುತ್ತಿದೆ.

ಇದನ್ನು ಓದಿ : ಪಿಒಕೆಯಲ್ಲಿ ಸೇನಾ ಹೆಲಿಕಾಪ್ಟರ್ ಪತನ; 21 ಸಿಬ್ಬಂದಿ ದುರ್ಮರಣ, ತನಿಖೆಗೆ ಆದೇಶ.

ಕೆಲ ಸ್ಥಳೀಯರ ಪ್ರಕಾರ, ಪ್ರತಿ ತಿಂಗಳು ಪಡಿತರ ವಿತರಣೆ ಪೂರ್ಣಗೊಂಡ ಕೆಲವು ದಿನಗಳ ನಂತರ ಕೆಲವು ವ್ಯಕ್ತಿಗಳು ಗ್ರಾಮಗಳಿಗೆ ತೆರಳಿ ಫಲಾನುಭವಿಗಳಿಂದ ಅಕ್ಕಿ ಖರೀದಿಸಲು ಮುಂದಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಆರೋಪಗಳ ಬಗ್ಗೆ ಅಧಿಕೃತ ತನಿಖೆಯ ಬಳಿಕವೇ ಸ್ಪಷ್ಟ ಮಾಹಿತಿ ಹೊರಬರಬೇಕಿದೆ.

ತನಿಖೆ ಮುಂದುವರಿಕೆ :

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆ ಮತ್ತು ಪೊಲೀಸರು ಜಂಟಿಯಾಗಿ ತನಿಖೆ ಮುಂದುವರಿಸಿದ್ದಾರೆ. ಅನ್ನಭಾಗ್ಯ ಯೋಜನೆಯ ಆಹಾರ ಧಾನ್ಯಗಳನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಸಂಪಾದಕೀಯ :

ಸರ್ಕಾರದ ಕಲ್ಯಾಣ ಯೋಜನೆಗಳ ಮೂಲಕ ಬಡ ಕುಟುಂಬಗಳಿಗೆ ತಲುಪಬೇಕಾದ ಆಹಾರ ಧಾನ್ಯಗಳು ಅಕ್ರಮ ಮಾರ್ಗದಲ್ಲಿ ಸಾಗಾಟವಾಗುತ್ತಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ.

ಇಂತಹ ಪ್ರಕರಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಮಾತ್ರ ಯೋಜನೆಯ ನಿಜವಾದ ಪ್ರಯೋಜನವಾಗಲಿದ್ದು, ಆಗ ಮಾತ್ರ ಅರ್ಹ ಫಲಾನುಭವಿಗಳಿಗೆ ತಲುಪಲು ಸಾಧ್ಯವಾಗುತ್ತದೆ. ಸಾರ್ವಜನಿಕರೂ ಸಹ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಇಲಾಖೆಯೊಂದಿಗೆ ಸಹಕರಿಸಬೇಕಾಗಿದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 


Disclaimer: ಈ ಲೇಖನವು ಲಭ್ಯವಿರುವ ಮಾಹಿತಿ ಮತ್ತು ಸ್ಥಳೀಯ ಮೂಲಗಳ ವರದಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಪ್ರಕರಣದ ಕುರಿತು ಅಧಿಕಾರಿಗಳ ತನಿಖೆ ಮುಂದುವರಿದಿದ್ದು, ಅಂತಿಮ ಸತ್ಯಾಂಶ ತನಿಖಾ ವರದಿ ಬಳಿಕವೇ ಸ್ಪಷ್ಟವಾಗಲಿದೆ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top