ಜನಸ್ಪಂದನ ನ್ಯೂಸ್, ಬೆಂಗಳೂರು : ತನಗಿಂತ ದೊಡ್ಡವಳಾದ ಮಹಿಳೆಯೊಂದಿಗೆ ಅಷ್ಟೊಂದು ಸಲುಗೆಯಿಂದ ಇರಬೇಡ ಅಂತ ಪೊಷಕರು ಬುದ್ದಿವಾದ ಹೇಳಿದ ಹಿನ್ನಲೆಯಲ್ಲಿ 15 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.
ಬೆಂಗಳೂರು (Bengaluru) ಸಮೀಪದ ಬಿಡದಿ (Bidadi) ಯಲ್ಲಿ ಮನಕಲಕುವ ಘಟನೆ ನಡೆದಿದೆ. 26 ವರ್ಷದ ಮಹಿಳೆಯೊಂದಿಗೆ ಆಪ್ತ ಸ್ನೇಹ (Love) ಹೊಂದಿದ್ದ 15 ವರ್ಷದ ಬಾಲಕ, ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಮೃತ ಬಾಲಕನನ್ನು ಆರ್. ತನ್ಮಯ್ ಎಂದು ಗುರುತಿಸಲಾಗಿದ್ದು, ಆತ ಬಿಡದಿಯ ಖಾಸಗಿ ಶಾಲೆಯ ವಿದ್ಯಾರ್ಥಿಯಾಗಿದ್ದನು. ತನ್ಮಯ್ ಎಂಬ ಬಾಲಕನಿಗೆ ಶೋಭಾ ಎಂಬ 26 ವರ್ಷದ ಮಹಿಳೆಯೊಂದಿಗೆ ಆಪ್ತ ಸಂಪರ್ಕ ಬೆಳೆದಿತ್ತು ಎನ್ನಲಾಗಿದೆ. ಈ ವಿಷಯ ತಿಳಿದ ಬಳಿಕ ಬಾಲಕನ ಪೋಷಕರು ಆತನಿಗೆ ಬುದ್ಧಿವಾದ ಹೇಳಿ, ಆಕೆಯನ್ನು ಭೇಟಿಯಾಗಬಾರದು ಎಂದು ಎಚ್ಚರಿಸಿದ್ದರು.
ಈ ಕುರಿತು ಪೋಷಕರು ಈಗಾಗಲೇ ಮಾರ್ಚ್ ತಿಂಗಳಲ್ಲಿ ಬಿಡದಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮಹಿಳೆಯನ್ನು ಕರೆಸಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಆದರೂ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಇನ್‌ಸ್ಟಾಗ್ರಾಂ ಮೂಲಕ ಇಬ್ಬರೂ ಸಂಪರ್ಕದಲ್ಲಿದ್ದರು ಎಂದು ಆರೋಪಿಸಲಾಗಿದೆ.
ಇದನ್ನು ಓದಿ : ಪೋಕ್ಸೋ ಭಯ: ಠಾಣೆಯಲ್ಲೇ ಲಾಕರ್ ಕೀ ನುಂಗಿದ ಆರೋಪಿ; 10ಕೆಜಿ ಬಾಳೆಹಣ್ಣು ತಿನ್ನಿಸಿದ ಪೊಲೀಸರು.
ಪೋಷಕರು ಆಕೆಯೊಂದಿಗೆ ಎಲ್ಲಾ ಸಂಪರ್ಕ ಕಡಿತಗೊಳಿಸುವಂತೆ ಹೇಳಿದ ಬಳಿಕ, ತನ್ಮಯ್ ಮನೆ ಬಿಟ್ಟು ಸ್ನೇಹಿತನ ಮನೆಯಲ್ಲಿ ವಾಸಿಸುತ್ತಿದ್ದನು. “ಆಕೆಯನ್ನು ಮದುವೆಯಾಗಬೇಕು, ಇಲ್ಲದಿದ್ದರೆ ಬದುಕುವುದಿಲ್ಲ” ಎಂದು ಆತ ಪೊಷಕರಿಗೆ ಹೇಳಿದ್ದಾನೆ ಎನ್ನಲಾಗಿದೆ.
ಚಿಕಿತ್ಸೆ ಫಲಕಾರಿಯಾಗದೆ ಸಾವು :
ಯುವತಿ ಜೊತೆ ಇದೇ ವಿಚಾರಕ್ಕೆ ಗಲಾಟೆ ಮಾಡಿಕೊಂಡ ಹಿನ್ನೆಲೆಯಲ್ಲಿ ಏಪ್ರಿಲ್ 29ರಂದು ಬಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
ತಕ್ಷಣ ಸ್ನೇಹಿತರು ಆತನನ್ನು ಚನ್ನಪಟ್ಟಣ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು (Bengaluru) ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಚಿಕಿತ್ಸೆ ವೇಳೆ ಶೋಭಾ ಜೊತೆ ಜಗಳವಾದ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಬಾಲಕ ತನ್ನ ಪೋಷಕರಿಗೆ ಹೇಳಿದ್ದಾನೆ ಎಂದು ವರದಿಯಾಗಿದೆ. ಬಾಲಕ ಆತ್ಮಹತ್ಯೆ ಸಂಬಂಧ ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಚನ್ನಪಟ್ಟಣ ಗ್ರಾಮೀಣ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ (Abetment to Suicide) ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.
ಸಂಪಾದಕೀಯ :
ಅಪ್ರಾಪ್ತ ವಯಸ್ಸು (Minor Age) ಜೀವನದ ಅತ್ಯಂತ ಸೂಕ್ಷ್ಮ ಹಂತವಾಗಿದೆ. ಈ ವಯಸ್ಸಿನಲ್ಲಿ ತೆಗೆದುಕೊಳ್ಳುವ ಭಾವನಾತ್ಮಕ ನಿರ್ಧಾರಗಳು ಕೆಲವೊಮ್ಮೆ ಭವಿಷ್ಯಕ್ಕೂ ದೊಡ್ಡ ಪರಿಣಾಮ ಬೀರುತ್ತವೆ.
ಸ್ನೇಹ, ಪ್ರೀತಿ ಅಥವಾ ಆಕರ್ಷಣೆ ಸಹಜವಾದರೂ, ಜೀವನಕ್ಕಿಂತ ಯಾವ ಸಂಬಂಧವೂ ದೊಡ್ಡದಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಸಮಸ್ಯೆಗಳು ಬಂದಾಗ ಆತ್ಮಹತ್ಯೆ ಅಥವಾ ತಪ್ಪು ನಿರ್ಧಾರಗಳ ಬಗ್ಗೆ ಯೋಚಿಸದೇ, ಪೋಷಕರು, ಶಿಕ್ಷಕರು ಅಥವಾ ಆತ್ಮೀಯರ ಜೊತೆ ಮಾತನಾಡುವುದು ಬಹಳ ಮುಖ್ಯ.
ಇಂದಿನ ಎಲ್ಲಾ ತಾಜಾ ಸುದ್ದಿಗಳನ್ನು ಇಲ್ಲಿ ಓದಿ
ಸಾಮಾಜಿಕ ಜಾಲತಾಣಗಳು ಮತ್ತು ಮೊಬೈಲ್ ಬಳಕೆಯಲ್ಲಿ ಎಚ್ಚರಿಕೆ ಇರಬೇಕು. ಅಪ್ರಾಪ್ತರು ತಮ್ಮ ಶಿಕ್ಷಣ, ಕನಸುಗಳು ಮತ್ತು ಭವಿಷ್ಯದ ಗುರಿಗಳತ್ತ ಹೆಚ್ಚು ಗಮನ ಹರಿಸಬೇಕು. ಯಾವುದೇ ಒತ್ತಡ ಅಥವಾ ಮಾನಸಿಕ ಸಮಸ್ಯೆ ಎದುರಾದರೆ ಸಹಾಯ ಕೇಳುವುದು ದುರ್ಬಲತೆ ಅಲ್ಲ, ಅದು ಧೈರ್ಯದ ಹೆಜ್ಜೆ. ಬದುಕು ಅಮೂಲ್ಯ, ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ.
Disclaimer: ಈ ಸುದ್ದಿ (ಬಾಲಕ ಆತ್ಮಹತ್ಯೆ) ಲಭ್ಯ ಮಾಹಿತಿಗಳು ಮತ್ತು ಪೊಲೀಸ್ ಮೂಲಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಅಂತಿಮ ಸತ್ಯಾಂಶ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.




