ಜನಸ್ಪಂದನ ನ್ಯೂಸ್, ಬೆಂಗಳೂರು : ಮೇ 20 ರಂದು KSRTC ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ಇದಕ್ಕೆ ಸರ್ಕಾರ ಖಡಕ್ ಎಚ್ಚರಿಕೆ ನೀಡಿ ‘ನೋ ವರ್ಕ್, ನೋ ಪೇ’ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಮೇ 20ರಿಂದ ಸಾರಿಗೆ ನೌಕರರು (Transport Employees Strike) ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರಲ್ಲಿ ಆತಂಕ ಹೆಚ್ಚಾಗಿದೆ.
ಮುಷ್ಕರದ ಹಿನ್ನೆಲೆ ಕೆಎಸ್ಆರ್ಟಿಸಿ (KSRTC) ಆಡಳಿತ ಮಂಡಳಿ ನೌಕರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಮುಷ್ಕರದಲ್ಲಿ ಭಾಗಿಯಾಗದಂತೆ ಹಾಗೂ ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಎಚ್ಚರಿಕೆ ನೀಡಿದೆ.
ಅನಿರ್ದಿಷ್ಟಾವಧಿ ಮುಷ್ಕರ :
ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ’ ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದೆ. ಈ ಹಿನ್ನೆಲೆ ರಾಜ್ಯಾದ್ಯಂತ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ಸುದ್ದಿಯನ್ನು ಓದಿ : ರಾಜಧಾನಿ ಎಕ್ಸ್ಪ್ರೆಸ್ ರೈಲಿನ ಬೋಗಿಗೆ ಬೆಂಕಿ; 68 ಪ್ರಯಾಣಿಕರ ಸುರಕ್ಷಿತ ರಕ್ಷಣೆ.
ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ (MD) ಅಕ್ರಂಪಾಷಾ ಅವರು ಎಲ್ಲಾ ವಿಭಾಗಾಧಿಕಾರಿಗಳಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಬುಧವಾರ ಯಾವುದೇ ನೌಕರರು ಮುಷ್ಕರದಲ್ಲಿ ಭಾಗಿಯಾಗಬಾರದು ಹಾಗೂ ಮುಷ್ಕರಕ್ಕೆ ಬೆಂಬಲ ಸೂಚಿಸಬಾರದು ಎಂದು ಸ್ಪಷ್ಟ ನಿರ್ದೇಶನ ನೀಡಲಾಗಿದೆ.
ನೋ ವರ್ಕ್, ನೋ ಪೇ :
ಕೆಲಸಕ್ಕೆ ಗೈರಾಗುವ ಸಿಬ್ಬಂದಿಗೆ ‘ನೋ ವರ್ಕ್, ನೋ ಪೇ’ (No Work No Pay) ನಿಯಮ ಅನ್ವಯವಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಇದೇ ವೇಳೆ, ಅನಿವಾರ್ಯ ಪರಿಸ್ಥಿತಿ ಹೊರತುಪಡಿಸಿ ಯಾವುದೇ ಸಿಬ್ಬಂದಿಗೆ ರಜೆ ಮಂಜೂರು ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಅಗತ್ಯವಿದ್ದರೆ ವಾರದ ರಜೆ ರದ್ದುಪಡಿಸಿ ಕರ್ತವ್ಯಕ್ಕೆ ನಿಯೋಜಿಸುವಂತೆ ಕೂಡ ಆದೇಶಿಸಲಾಗಿದೆ. ಮುಷ್ಕರದ ದಿನ ಗೈರುಹಾಜರಾಗುವ ನೌಕರರ ವಿರುದ್ಧ ಶಿಸ್ತು ಕ್ರಮ (Disciplinary Action) ಕೈಗೊಳ್ಳುವುದಾಗಿ ನಿಗಮ ತಿಳಿಸಿದೆ.
ಸಾರಿಗೆ ಇಲಾಖೆಯ ಪ್ರಕಾರ, ಕಾರ್ಮಿಕ ಸಂಘಟನೆಗಳು ನೀಡಿರುವ ಮುಷ್ಕರ ನೋಟಿಸ್ ವಿಚಾರವು ಈಗಾಗಲೇ ರಾಜ್ಯ ಕಾರ್ಮಿಕ ಆಯುಕ್ತರ ಮುಂದೆ ರಾಜಿ ಸಂಧಾನ ಹಂತದಲ್ಲಿದೆ.
ಇದನ್ನು ಓದಿ : ಇಂದಿನ ರಾಶಿ ಭವಿಷ್ಯ: ಮೇ 18, 2026 ಸೋಮವಾರದ ದ್ವಾದಶ ರಾಶಿಗಳ ಫಲಗಳು.!
ಕೈಗಾರಿಕಾ ವಿವಾದಗಳ ಕಾಯಿದೆ-1947 (Industrial Disputes Act) ಅನ್ವಯ ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆಗಳ ನೌಕರರು ಸಂಧಾನ ಪ್ರಕ್ರಿಯೆ ನಡೆಯುತ್ತಿರುವ ವೇಳೆ ಮುಷ್ಕರ ನಡೆಸುವಂತಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಇನ್ನೊಂದೆಡೆ, ಸಾರಿಗೆ ನೌಕರರ ಸಂಘಟನೆಗಳು ಸರ್ಕಾರಕ್ಕೆ ಮೇ 19ರವರೆಗೆ ಗಡುವು ನೀಡಿವೆ. ಆ ಬಳಿಕ ನಡೆಯುವ ಯಾವುದೇ ಮಾತುಕತೆಗೆ ಬರುವುದಿಲ್ಲ ಎಂದು ಜಂಟಿ ಕ್ರಿಯಾ ಸಮಿತಿ ಹೇಳಿದೆ. ಪ್ರತಿ ಬಾರಿ ಕೊನೆಯ ಕ್ಷಣದಲ್ಲಿ ಮಾತುಕತೆ ನಡೆಸುವ ಸರ್ಕಾರದ ಕ್ರಮಕ್ಕೆ ಈ ಬಾರಿ ಅವಕಾಶ ನೀಡುವುದಿಲ್ಲ ಎಂದು ಸಂಘಟನೆಗಳು ಖಡಕ್ ಸಂದೇಶ ರವಾನಿಸಿವೆ.
KSRTC ನೌಕರರ ಪ್ರಮುಖ ಬೇಡಿಕೆ :
ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳಲ್ಲಿ 25% ವೇತನ ಪರಿಷ್ಕರಣೆ, 2024 ಜನವರಿ 1ರಿಂದ ಪರಿಷ್ಕೃತ ವೇತನ ಜಾರಿ ಹಾಗೂ ವಿವಿಧ ಭತ್ಯೆಗಳ ಹೆಚ್ಚಳ ಸೇರಿವೆ. ಆದರೆ ಸರ್ಕಾರ ಈಗಾಗಲೇ ಘೋಷಿಸಿರುವ 12.50% ವೇತನ ಪರಿಷ್ಕರಣೆಯೇ ಅಂತಿಮ ಎಂದು ಹೇಳಿದ್ದು, ಹೆಚ್ಚುವರಿ ಹೆಚ್ಚಳ ಸದ್ಯ ಅಸಾಧ್ಯ ಎಂಬ ನಿಲುವು ವ್ಯಕ್ತಪಡಿಸಿದೆ.
ಇಂದಿನ ಎಲ್ಲಾ ತಾಜಾ ಸುದ್ದಿಗಳನ್ನು ಇಲ್ಲಿ ಓದಿ
ಈ ಹಿನ್ನಲೆಯಲ್ಲಿ ಸರ್ಕಾರ ಮತ್ತು ಸಾರಿಗೆ ನೌಕರರ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ. ಮುಷ್ಕರ ನಡೆದರೆ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ಬಸ್ ಸಂಚಾರಕ್ಕೆ ದೊಡ್ಡ ಮಟ್ಟದ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಸಾರ್ವಜನಿಕರು ಪರ್ಯಾಯ ಪ್ರಯಾಣ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
Disclaimer: ಮೇಲಿನ ಮಾಹಿತಿ (KSRTC) ವಿವಿಧ ಮಾಧ್ಯಮ ವರದಿಗಳು ಹಾಗೂ ಲಭ್ಯ ಮಾಹಿತಿಗಳ ಆಧಾರದಲ್ಲಿ ಸಿದ್ಧಪಡಿಸಲಾಗಿದೆ. ಮುಷ್ಕರ, ಬಸ್ ಸಂಚಾರ ಹಾಗೂ ಸರ್ಕಾರಿ ಆದೇಶಗಳಿಗೆ ಸಂಬಂಧಿಸಿದ ಅಂತಿಮ ಮಾಹಿತಿಗಾಗಿ ಅಧಿಕೃತ ಪ್ರಕಟಣೆಗಳನ್ನು ಪರಿಶೀಲಿಸುವುದು ಸೂಕ್ತ.




