ಸೋಮವಾರ, ಫೆಬ್ರವರಿ 16, 2026

Janaspandhan News

HomeCrime Newsಜಿಂದಾಲ್ ಬಳಿ KSRTC ಬಸ್-ಕಾರ್ ಡಿಕ್ಕಿ: 5 ವಿದ್ಯಾರ್ಥಿಗಳ ದುರ್ಮರಣ.!
spot_img
spot_img

ಜಿಂದಾಲ್ ಬಳಿ KSRTC ಬಸ್-ಕಾರ್ ಡಿಕ್ಕಿ: 5 ವಿದ್ಯಾರ್ಥಿಗಳ ದುರ್ಮರಣ.!

ಜನಸ್ಪಂದನ ನ್ಯೂಸ್‌, ನೆಲಮಂಗಲ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಜಿಂದಾಲ್ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿ ಐವರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. KSRTC ಬಸ್ ಮತ್ತು ಇಂಡಿಕಾ ಕಾರಿನ ನಡುವೆ ನಡೆದ ಭಾರೀ ಡಿಕ್ಕಿಯಲ್ಲಿ ಕಾರಿನಲ್ಲಿದ್ದ 5 ವಿದ್ಯಾರ್ಥಿಗಳ ದುರ್ಮರಣ ಆಗಿದೆ.

ಡಿವೈಡರ್ ಜಂಪ್ ಮಾಡಿದ ಕಾರು ಬಸ್‌ಗೆ ಡಿಕ್ಕಿ :

ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ತುಮಕೂರು ದಿಕ್ಕಿನಿಂದ ಬೆಂಗಳೂರಿನತ್ತ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಜಂಪ್ ಮಾಡಿ ಎದುರಿಗೆ ಬರುತ್ತಿದ್ದ KSRTC ಬಸ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್ ಮುಂಭಾಗಕ್ಕೂ ಹಾನಿಯಾಗಿದೆ.

ಅಪಘಾತದ ತೀವ್ರತೆಗೆ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಕಾರು ಚಾಲಕನನ್ನು ತಕ್ಷಣವೇ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತನು ಸಹ ಪ್ರಾಣ ಬಿಟ್ಟಿದ್ದಾನೆ. ಈ ಮೂಲಕ ಒಟ್ಟು ಐವರು ಮೃತಪಟ್ಟಿರುವುದು ದೃಢಪಟ್ಟಿದೆ.

ಮೃತರಲ್ಲಿ ವಿದ್ಯಾರ್ಥಿ ಸೇರಿ ಇಬ್ಬರ ಗುರುತು ಪತ್ತೆ :

ಮೃತರಲ್ಲಿ ದೊಡ್ಡಬಳ್ಳಾಪುರ ಮೂಲದ ಹರ್ಷಿತ್ ಮತ್ತು ನಿಖಿತ್ ಎಂಬವರನ್ನು ಗುರುತಿಸಲಾಗಿದೆ. ಹರ್ಷಿತ್ ರಾಜನಕುಂಟೆಯ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಎನ್ನಲಾಗಿದೆ. ಉಳಿದ ಮೂವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಘಟನೆಯ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಈ ಅಪಘಾತ ಸುದ್ದಿ ಓದಿ : ಎನ್‌ಎಚ್-66ರಲ್ಲಿ ಭೀಕರ ರಸ್ತೆ ಅಪಘಾತ: ಆರು ವಿದ್ಯಾರ್ಥಿಗಳಿದ್ದ ಕಾರು ಪಲ್ಟಿ.

ಬಸ್‌ನಲ್ಲಿದ್ದ 43 ಪ್ರಯಾಣಿಕರಿಗೆ ಸಣ್ಣ ಗಾಯ :

ಅಪಘಾತದ ಬಗ್ಗೆ KSRTC ಬಸ್ ಚಾಲಕ ಕೆಂಪರಾಜು, “ಕಾರು ಅತಿ ವೇಗದಲ್ಲಿ ಡಿವೈಡರ್ ಹಾರಿ ಬಸ್‌ಗೆ ಡಿಕ್ಕಿ ಹೊಡೆದಾಗ ಭಾರೀ ಸದ್ದು ಕೇಳಿಸಿಕೊಂಡಿತು” ಎಂದಿದ್ದಾರೆ.

ಅಪಘಾತದ ನಂತರ ಪ್ರಯಾಣಿಕರನ್ನು ಹುಬ್ಬಳ್ಳಿಗೆ ತೆರಳುತ್ತಿದ್ದ ಸಂಸ್ಥೆಯ ಬೇರೆ ಬಸ್‌ಗಳಲ್ಲಿ ಕಳುಹಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ. ಕಾರು ಹೊಡೆತಕ್ಕೆ ಬಸ್‌ನ ಗಾಜುಗಳು ಒಡೆದು ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬಸ್‌ನಲ್ಲಿ ಒಟ್ಟು 43 ಪ್ರಯಾಣಿಕರಿದ್ದು, ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂಬುದು ತಿಳಿದುಬಂದಿದೆ.

5 ವಿದ್ಯಾರ್ಥಿಗಳ ದುರ್ಮರಣ ; ಕುಟುಂಬದವರ ಆಕ್ರಂದನ :

ಮೃತ ಹರ್ಷಿತ್ ರಾತ್ರಿ 8.30ರವರೆಗೆ ಮನೆಯಲ್ಲಿ ಇದ್ದು, ಬಳಿಕ ಸ್ನೇಹಿತನನ್ನು ಭೇಟಿ ಮಾಡಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಅಪಘಾತದ ಸುದ್ದಿ ತಿಳಿದು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ ಕುಟುಂಬದವರ ಆಕ್ರಂದನ ಮನಕಲಕುವಂತಿತ್ತು. ಮಗನ ಮೃತದೇಹವನ್ನು ತಬ್ಬಿಕೊಂಡ ತಾಯಿಯ ಗೋಳಾಟ ಅಲ್ಲಿದ್ದವರ ಕಣ್ಣೀರನ್ನು ತರಿಸಿತು.

ಇತ್ತೀಚಿನ ಮತ್ತೊಂದು ಅಪಘಾತದ ಬೆನ್ನಲ್ಲೇ ಮತ್ತೊಂದು ದುರಂತ :

ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಎಂ. ಸತ್ಯವರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ (National Highway) ಯಲ್ಲಿ ನಡೆದ ಸರಣಿ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದರು. ಆ ಘಟನೆ ಮಾಸುವ ಮುನ್ನವೇ ಇದೀಗ ನೆಲಮಂಗಲದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಇದನ್ನು ಓದಿ : ಭೀಕರ ಸರಣಿ ರಸ್ತೆ ಅಪಘಾತ: 6 ಕಾಲೇಜು ವಿದ್ಯಾರ್ಥಿಗಳು ಸೇರಿ 7 ಮಂದಿ ಸ್ಥಳದಲ್ಲೇ ಸಾವು.!

ರಸ್ತೆ ಸುರಕ್ಷತೆ ಬಗ್ಗೆ ಪ್ರಶ್ನೆಗಳು :

ಪುನಃ ಪುನಃ ಸಂಭವಿಸುತ್ತಿರುವ ರಸ್ತೆ ಅಪಘಾತಗಳು ವೇಗ ನಿಯಂತ್ರಣ, ಸುರಕ್ಷತಾ ನಿಯಮಗಳ ಪಾಲನೆ ಮತ್ತು ಚಾಲನಾ ಎಚ್ಚರಿಕೆಯ ಮಹತ್ವವನ್ನು ಮತ್ತೆ ಒಮ್ಮೆ ನೆನಪಿಸುತ್ತಿವೆ. ಪೊಲೀಸರು ಪ್ರಕರಣದ ನಿಖರ ಕಾರಣವನ್ನು ಪತ್ತೆಹಚ್ಚಲು ಮುಂದಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.


Disclaimer : ಈ ಸುದ್ದಿ ಲಭ್ಯವಾದ ಪ್ರಾಥಮಿಕ ಮಾಹಿತಿಯ ಆಧಾರದಲ್ಲಿ ಸಂಗ್ರಹಿಸಲಾಗಿದ್ದು, ಹೆಚ್ಚಿನ ವಿವರಗಳು ನಂತರ ಲಭ್ಯವಾಗಬಹುದು.

Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments