ಜನಸ್ಪಂದನ ನ್ಯೂಸ್, ಮಂತ್ರಾಲಯ : ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಸಮೀಪ ಗುರುವಾರ ಮುಂಜಾನೆ (ದಿ.16) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕದ ಎಂಟು ಭಕ್ತರು ಮೃತಪಟ್ಟ ದಾರುಣ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಇನ್ನು ಅನೇಕರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಸ್ತೆ ಅಪಘಾತ ಹೇಗೆ ಸಂಭವಿಸಿತು?
ಮಾಹಿತಿಯ ಪ್ರಕಾರ, ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ ಮೂಲದ ಭಕ್ತರು ಬೊಲೆರೋ ವಾಹನದಲ್ಲಿ ಮಂತ್ರಾಲಯಕ್ಕೆ ರಾಘವೇಂದ್ರ ರಾಯರ ದರ್ಶನಕ್ಕಾಗಿ ಪ್ರಯಾಣಿಸುತ್ತಿದ್ದರು.
ಈ ವೇಳೆ ಮಂತ್ರಾಲಯ ತಾಲೂಕಿನ ಕಲ್ಲುದೇವಕುಂಟ ಸಮೀಪ ಎದುರು ದಿಕ್ಕಿನಿಂದ ಬಂದ ಸಿಮೆಂಟ್ ಹಾಗೂ ಜಲ್ಲಿಕಲ್ಲು ತುಂಬಿದ್ದ ಟ್ಯಾಂಕರ್ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಬೊಲೆರೋ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಘಟನಾ ಸ್ಥಳದಲ್ಲೇ ಆರು ಮಂದಿ ಭಕ್ತರು ಸಾವನ್ನಪ್ಪಿದ್ದಾರೆ.
ಆಸ್ಪತ್ರೆಯಲ್ಲಿ ಮತ್ತಿಬ್ಬರ ಸಾವು :
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ತಕ್ಷಣವೇ ಎಮಿಗನೂರು ಹಾಗೂ ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮತ್ತೀಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.
ಈ ಸುದ್ದಿನೂ ಓದಿ : ಹೂ ಕೊಟ್ಟಾಗ ಬಟ್ಟೆ ನೋಡಿ ತಿರಸ್ಕಾರ; ಬೆಂಟ್ಲಿ ಕಾರು ಕಂಡ ಕ್ಷಣ ಆಕೆಯ ರಿಯಾಕ್ಷನ್ ವೈರಲ್!
ಗಾಯಾಳುಗಳಿಗೆ ಚಿಕಿತ್ಸೆ :
ಈ ಅಪಘಾತಕ್ಕೀಡಾದ ವಾಹನದಲ್ಲಿ ಒಟ್ಟು 21 ಮಂದಿ ಪ್ರಯಾಣಿಸುತ್ತಿದದ್ದರೆಂದು ಹೇಳಲಾಗುತ್ತಿದೆ. ಈ ಪೈಕಿ ವಾಹನದಲ್ಲಿ 13 ಮಂದಿ ಗಾಯಗೊಂಡಿದ್ದು, ಅವರಿಗೆ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಇನ್ನು ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮೃತರ ವಿವರ :
ಅಪಘಾತದಲ್ಲಿ ಮೃತಪಟ್ಟವರನ್ನು ಕುಮಾರ್ (50), ವೀಣಾ (42), ಸುನೀಲ್ (40), ಪುಟ್ಟಮ್ಮ (55), ಯಶೋಧಾ (60), ಬಾಲಕಿ ಬೆಳ್ಳಿ (5), ಲೋಲಾಕ್ಷಿ ಹಾಗೂ ದೀಪಿಕಾ ಎಂದು ಗುರುತಿಸಲಾಗಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮನಕಲಕುವಂತಿದೆ.
ತನಿಖೆ ಆರಂಭ :
ಘಟನಾ ಸ್ಥಳಕ್ಕೆ ಮಂತ್ರಾಲಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆಯಲ್ಲಿ ಅಪಘಾತಕ್ಕೊಳಗಾದ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಲಾಗಿದೆ. ಸದ್ಯ ಟ್ಯಾಂಕರ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಸಂಚಾರದಲ್ಲಿ ವ್ಯತ್ಯಯ :
ಈ ಬೊಲೆರೋ ಮತ್ತು ಟ್ಯಾಂಕರ್ ಅಪಘಾತದಿಂದಾಗಿ ಮಂತ್ರಾಲಯ ಮಾರ್ಗದಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಬಳಿಕ ಪೊಲೀಸರು ವಾಹನಗಳನ್ನು ಸ್ಥಳಾಂತರಿಸಿ ವಾಹನ ಸಂಚಾರವನ್ನು ಸುಗಮಗೊಳಿಸಿದ್ದಾರೆ.
ಇದನ್ನು ಓದಿ : ಶಿರಾ ಬಳಿ ಭೀಕರ ಅಪಘಾತ: KSRTC ಬಸ್ ಲಾರಿಗೆ ಡಿಕ್ಕಿ; ಇಬ್ಬರು ಸಾವು, 33 ಮಂದಿಗೆ ಗಾಯ.
ಈ ದುರ್ಘಟನೆ ಭಕ್ತರ ಪ್ರಯಾಣದ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳನ್ನು ಎಬ್ಬಿಸಿದ್ದು, ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವನ್ನು ಒತ್ತಿ ಹೇಳುತ್ತಿದೆ.
Disclaimer: ಈ ಸುದ್ದಿ (ರಸ್ತೆ ಅಪಘಾತ) ವಿವಿಧ ಮೂಲಗಳಿಂದ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಸಿದ್ಧಪಡಿಸಲಾಗಿದೆ. ಘಟನೆಯ ವಿವರಗಳು ಹಾಗೂ ಮೃತರ ಮಾಹಿತಿ ಅಧಿಕೃತ ದೃಢೀಕರಣದ ಮೇರೆಗೆ ಬದಲಾಗುವ ಸಾಧ್ಯತೆ ಇದೆ. ಯಾವುದೇ ರೀತಿಯ ತಪ್ಪು ಮಾಹಿತಿ ನೀಡುವುದು ಉದ್ದೇಶವಲ್ಲ. ಈ ಲೇಖನ ಮಾಹಿತಿ ನೀಡುವ ಉದ್ದೇಶಕ್ಕಾಗಿ ಮಾತ್ರವಾಗಿದ್ದು, ಇದನ್ನು ಅಧಿಕೃತ ಹೇಳಿಕೆ ಅಥವಾ ಅಂತಿಮ ವರದಿಯಾಗಿ ಪರಿಗಣಿಸಬಾರದು.




