ಜನಸ್ಪಂದನ ನ್ಯೂಸ್, ನವದೆಹಲಿ : ದೇಶದ ರಾಜಧಾನಿ ನವದೆಹಲಿಯ ಈಸ್ಟ್ ಆಫ್ ಕೈಲಾಶ್ ಪ್ರದೇಶದಲ್ಲಿ 22 ವರ್ಷದ ಐಐಟಿ ಪದವೀಧರೆಯ ಮೇಲೆ ಅತ್ಯಾಚಾರ ನಂತರ ಭೀಕರ ಹತ್ಯೆಯ ಪ್ರಕರಣ ಬೆಳಕಿಗೆ ಬಂದಿದೆ. ಹಿರಿಯ ಅಧಿಕಾರಿಯ ಪುತ್ರಿಯಾಗಿದ್ದ ಈ ಯುವತಿಯ ಸಾವಿನ ಘಟನೆ ನಗರವನ್ನು ಶೋಕ ಮತ್ತು ಆಘಾತಕ್ಕೆ ತಳ್ಳಿದೆ.
ಮೃತ ಯುವತಿ ದೆಹಲಿಯ ಪ್ರತಿಷ್ಠಿತ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ನಂತರ ಐಐಟಿ ದೆಹಲಿಯಲ್ಲಿ ಪದವಿ ಪೂರ್ಣಗೊಳಿಸಿದ್ದರು. ಪ್ರಸ್ತುತ ಅವರು ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಜೊತೆಗೆ ಅವರು ಉತ್ತಮ ನೃತ್ಯಗಾರ್ತಿಯಾಗಿದ್ದು, ಹಲವು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದ್ದರು.
ಘಟನೆ ನಡೆದ ಸಮಯದಲ್ಲಿ ಯುವತಿ ಮನೆಯಲ್ಲಿ ಒಬ್ಬರೇ ಇದ್ದರು ಎನ್ನಲಾಗಿದೆ. ಬೆಳಿಗ್ಗೆ ಕುಟುಂಬ ಸದಸ್ಯರು ಮನೆಗೆ ಮರಳಿದಾಗ, ಅವರು ಶವವಾಗಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಅವರ ಮೇಲೆ ಹಿಂಸಾತ್ಮಕ ದಾಳಿ ನಡೆದಿದ್ದು, ನಂತರ ಕತ್ತು ಬಿಗಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಪೊಲೀಸರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಬೆಳಗ್ಗೆ ಸುಮಾರು 7:20ರ ಸಮಯದಲ್ಲಿ ಒಬ್ಬ ವ್ಯಕ್ತಿ ಮನೆಯಿಂದ ಹೊರಬರುತ್ತಿರುವುದು ದೃಶ್ಯದಲ್ಲಿ ಕಾಣಿಸಿಕೊಂಡಿದೆ.
ಇದನು ಓದಿ : ಬಳ್ಳಾರಿ: ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಹೋಟೆಲ್ ಸಂಪೂರ್ಣ ನಾಶ, ಬಾಲಕನಿಗೆ ಗಾಯ.
ಇದರ ಆಧಾರದ ಮೇಲೆ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ದ್ವಾರಕಾ ಪ್ರದೇಶದ ಹೋಟೆಲ್‌ನಲ್ಲಿ ಅಡಗಿದ್ದ 19 ವರ್ಷದ ರಾಹುಲ್ ಮೀನಾ (Rahul Meena) ಎಂಬಾತನನ್ನು ಬಂಧಿಸಿದ್ದಾರೆ.
ರಾಹುಲ್ ಮೀನಾ ಈತ ಬೆಳಿಗ್ಗೆ 6:30 ಕ್ಕೆ ಕಾಲೋನಿಗೆ ಪ್ರವೇಶಿಸಿ, 6:39 ಕ್ಕೆ ಮನೆಗೆ ಪ್ರವೇಶ ಪಡೆದಿದ್ದಾನೆ. ನಂತರ ಬೆಳಿಗ್ಗೆ 7:20 ರ ಸುಮಾರಿಗೆ ಹೊರಟುಹೋಗಿದ್ದಾನೆ. ಅಂದರೆ ಅವನು ಸುಮಾರು 41 ನಿಮಿಷಗಳ ಕಾಲ ಮನೆಯೊಳಗೆ ಇದ್ದ.
ಆರೋಪಿ ರಾಹುಲ್ ಈ ಹಿಂದೆ ಅದೇ ಮನೆಯಲ್ಲಿ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ. ಆನ್‌ಲೈನ್ ಗೇಮ್‌ಗಳ ವ್ಯಸನ ಹಾಗೂ ಹಣಕಾಸು ಸಂಬಂಧಿತ ಸಮಸ್ಯೆಗಳ ಹಿನ್ನೆಲೆ ಅವನ ಮೇಲೆ ಸಾಲದ ಒತ್ತಡ ಇದ್ದದ್ದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಕಾರಣದಿಂದ ಒಂದು ತಿಂಗಳ ಹಿಂದೆ ಅವನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು ಎಂದು ವರದಿಯಾಗಿದೆ.
ಆರೋಪಿಯ ಹಿನ್ನಲೆ :
ಆರೋಪಿ ವಿರುದ್ಧ ರಾಜಸ್ಥಾನದ ಅಲ್ವಾರ್ ಪ್ರದೇಶದಲ್ಲಿ ಹಿಂದೆಯೂ ಅಂದರೆ ಈ ಘಟನೆಯ ಒಂದು ದಿನದ ಹಿಂದೆ ರಾಜಸ್ಥಾನದ ಅಲ್ವಾರ್‌ನಲ್ಲಿ ಓರ್ವ ಗೃಹಿಣಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ. ಘಟನೆ ನಡೆದ ರಾತ್ರಿ ಆತ ದೆಹಲಿಗೆ ಬಂದಿದ್ದು, ಹಳೆಯ ಮನೆಯ ಕೀ ಬಳಸಿ ಒಳನುಗ್ಗಿದ್ದಾನೆ ಎಂಬ ಶಂಕೆಯೂ ವ್ಯಕ್ತವಾಗಿದೆ.
ಪೊಲೀಸರು ಆರೋಪಿಯ ಹಿನ್ನೆಲೆ ಹಾಗೂ ಘಟನೆಗೆ ಕಾರಣವಾದ ಅಂಶಗಳನ್ನು ಆಳವಾಗಿ ಪರಿಶೀಲಿಸುತ್ತಿದ್ದಾರೆ. ಹೆಚ್ಚಿನ ಸಾಕ್ಷ್ಯ ಸಂಗ್ರಹಕ್ಕಾಗಿ ವಿಧಿವಿಜ್ಞಾನ ತಂಡವೂ ಸ್ಥಳ ಪರಿಶೀಲನೆ ನಡೆಸುತ್ತಿದೆ. ಈ ಘಟನೆ ನಗರದಲ್ಲಿ ಭದ್ರತೆ ಮತ್ತು ಗೃಹ ಸಹಾಯಕರ ಹಿನ್ನೆಲೆ ಪರಿಶೀಲನೆ ಕುರಿತಂತೆ ಮತ್ತೆ ಚರ್ಚೆ ಹುಟ್ಟಿಸಿದೆ.
ಪೊಲೀಸರು ಮುಂದಿನ ಕ್ರಮಗಳನ್ನು ಕೈಗೊಂಡಿದ್ದು, ಪ್ರಕರಣದ ಸಂಪೂರ್ಣ ಸತ್ಯಾಂಶವನ್ನು ಶೀಘ್ರದಲ್ಲೇ ಬಹಿರಂಗಪಡಿಸುವ ನಿರೀಕ್ಷೆಯಿದೆ.
ಹೆಚ್ಚಿನ ಬ್ರೇಕಿಂಗ್ ನ್ಯೂಸ್‌ಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಸಂಪಾದಕೀಯ :
ಈ ರೀತಿಯ ಗಂಭೀರ ಅಪರಾಧಗಳಲ್ಲಿ ತೊಡಗುವವರು ಕಾನೂನಿನ ದೃಷ್ಟಿಯಲ್ಲಿ ಅತ್ಯಂತ ಕಠಿಣ ಶಿಕ್ಷೆಗೆ ಅರ್ಹರಾಗುತ್ತಾರೆ. ಲೈಂಗಿಕ ಹಿಂಸೆ ಮತ್ತು ಅತ್ಯಾಚಾರ (Rape) ವು ಮಾನವೀಯತೆಯ ವಿರುದ್ಧವಾದ ಅಪರಾಧವಾಗಿದ್ದು, ಸಮಾಜದಲ್ಲಿ ಇಂತಹ ಕೃತ್ಯಗಳಿಗೆ ಯಾವುದೇ ರೀತಿಯ ಸಹಿಷ್ಣುತೆ ಇರಬಾರದು.
ಬಲಾತ್ಕಾರಿ (ಅತ್ಯಾಚಾರ) ಗಳಿಗೆ ಕಾನೂನು ಪ್ರಕ್ರಿಯೆಯ ಮೂಲಕ ತ್ವರಿತ ನ್ಯಾಯ ಒದಗಿಸುವುದು ಅಗತ್ಯವಾಗಿದೆ. ಇಂತಹ ಅಪರಾಧಗಳನ್ನು ತಡೆಯಲು ಕಠಿಣ ಕಾನೂನು ಜಾರಿಯ ಜೊತೆಗೆ ಸಮಾಜದಲ್ಲಿ ಜಾಗೃತಿ ಕೂಡ ಮುಖ್ಯವಾಗಿದೆ. ಪ್ರತಿಯೊಬ್ಬರ ಸುರಕ್ಷತೆ ಮತ್ತು ಗೌರವವನ್ನು ಕಾಪಾಡುವುದು ಸರ್ಕಾರ ಹಾಗೂ ಸಮಾಜದ ಸಂಯುಕ್ತ ಜವಾಬ್ದಾರಿಯಾಗಿದೆ.
“ಇಂತಹ ಅತ್ಯಾಚಾರ ಘಟನೆಗಳು ಮರುಕಳಿಸದಂತೆ ತಡೆಯಲು ನಾವು ಕೇವಲ ಕಾನೂನಿನ ಮೇಲಷ್ಟೇ ಅವಲಂಬಿತರಾಗದೆ, ನಮ್ಮ ಸುತ್ತಮುತ್ತಲಿನ ಭದ್ರತೆ ಮತ್ತು ಅಪರಿಚಿತರ ಹಿನ್ನೆಲೆ ಪರಿಶೀಲನೆಯಲ್ಲಿ ಹೆಚ್ಚಿನ ಜಾಗರೂಕತೆ ವಹಿಸಬೇಕಿದೆ.”
Disclaimer : ಈ ಸುದ್ದಿ ಲಭ್ಯವಿರುವ ಪ್ರಾಥಮಿಕ ಪೊಲೀಸ್ ಮಾಹಿತಿ ಮತ್ತು ಮಾಧ್ಯಮ ವರದಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ತನಿಖೆ ಮುಂದುವರಿಯುತ್ತಿರುವುದರಿಂದ ಘಟನೆಯ ವಿವರಗಳು ಮುಂದಿನ ದಿನಗಳಲ್ಲಿ ಬದಲಾಗುವ ಸಾಧ್ಯತೆ ಇದೆ. ಯಾವುದೇ ವ್ಯಕ್ತಿ ಅಥವಾ ಆರೋಪಿಯ ಅಪರಾಧವನ್ನು ನ್ಯಾಯಾಲಯದ ಅಂತಿಮ ತೀರ್ಪಿನವರೆಗೆ ದೃಢಪಡಿಸಿದಂತೆ ಪರಿಗಣಿಸಬಾರದು. ಈ ಲೇಖನದ ಉದ್ದೇಶ ಕೇವಲ ಮಾಹಿತಿ ಹಂಚಿಕೊಳ್ಳುವುದಾಗಿದೆ.





