ಜನಸ್ಪಂದನ ನ್ಯೂಸ್, ಬೆಂಗಳೂರು ಗ್ರಾಮಾಂತರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಎಂ. ಸತ್ಯವರ ಗ್ರಾಮದ ಸಮೀಪ ಶುಕ್ರವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹೊಸಕೋಟೆ–ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಕ್ಸ್‌ಯುವಿ ಕಾರು, ಬೈಕ್ ಹಾಗೂ ಕ್ಯಾಂಟರ್ ವಾಹನಗಳ ನಡುವೆ ನಡೆದ ಸರಣಿ ಡಿಕ್ಕಿಯೇ ಈ ದುರ್ಘಟನೆಗೆ ಕಾರಣವಾಗಿದೆ.
ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ಅತಿವೇಗವೇ ಈ ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಹೊಸಕೋಟೆ ಕಡೆಯಿಂದ ದೇವನಹಳ್ಳಿ ಮಾರ್ಗವಾಗಿ ಸಾಗುತ್ತಿದ್ದ ಎಕ್ಸ್‌ಯುವಿ ಕಾರು ಮೊದಲು ಮುಂದೆ ಸಾಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಭೀಕರ ಸರಣಿ ರಸ್ತೆ ಅಪಘಾತದ ವಿಡಿಯೋ :
VIDEO | Karnataka: Seven people killed in a series of collisions between canter truck, bike and a car on Hoskote-Dabaspet National Highway.#KarnatakaNews
(Source: Third Party)
(Full video available on PTI Videos – https://t.co/n147TvrpG7) pic.twitter.com/ZbZWpo6PxC
— Press Trust of India (@PTI_News) February 13, 2026
ಡಿಕ್ಕಿಯ ರಭಸಕ್ಕೆ ಕಾರು ನಿಯಂತ್ರಣ ತಪ್ಪಿ ಪಕ್ಕದಲ್ಲೇ ಸಾಗುತ್ತಿದ್ದ ಕ್ಯಾಂಟರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಸರಣಿ ಅಪಘಾತ ಸಂಭವಿಸಿದೆ.
ಈ ಸುದ್ದಿ ಓದಿ : ವ್ಯಾಲೆಂಟೈನ್ಸ್ ಡೇಗೂ ಮುನ್ನ ಮಾಲ್‌ಗೆ ಪ್ರೇಯಸಿಯನ್ನು ಕರೆತಂದ ಪ್ರೇಮಿ ; ಪತ್ನಿ ಆಗಮನದಿಂದ ಆಗಿದ್ದೇನು?
ಈ ದುರ್ಘಟನೆಯಲ್ಲಿ ಎಕ್ಸ್‌ಯುವಿ ಕಾರಿನಲ್ಲಿದ್ದ ಆರು ಮಂದಿ ಹಾಗೂ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಹಾಗೂ ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ.
ಕೊತ್ತನೂರು ಮೂಲದ ಕಾಲೇಜು ವಿದ್ಯಾರ್ಥಿಗಳು :
ಮೃತಪಟ್ಟವರಲ್ಲಿ ಆರು ಮಂದಿ ಬೆಂಗಳೂರಿನ ಕೊತ್ತನೂರು ಮೂಲದವರು ಎಂದು ತಿಳಿದುಬಂದಿದೆ. ಎಲ್ಲರೂ ಕಾಲೇಜು ವಿದ್ಯಾರ್ಥಿಗಳು ಎನ್ನಲಾಗಿದ್ದು, ಒಬ್ಬರನ್ನು ಅಶ್ವಿನ್ ಎಂದು ಗುರುತಿಸಲಾಗಿದೆ. ಬೈಕ್ ಸವಾರನನ್ನು ಗಗನ್ ಎಂದು ಗುರುತಿಸಲಾಗಿದೆ. ಉಳಿದ ಮೃತರ ಗುರುತು ಪತ್ತೆ ಮಾಡುವ ಕಾರ್ಯ ಮುಂದುವರಿದಿದೆ.
ಅಪಘಾತಕ್ಕೀಡಾದ ಎಕ್ಸ್‌ಯುವಿ 700 ಕಾರು ಹೊಸಕೋಟೆಯಿಂದ ದೇವನಹಳ್ಳಿ ಮಾರ್ಗವಾಗಿ ಬರುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹೊಸಕೋಟೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಬೆಂಗಳೂರು ಹೊರವಲಯದಲ್ಲಿ ಭೀಕರ ಸರಣಿ ಅಪಘಾತ
ಹೊಸಕೋಟೆ–ದಾಬಸ್ಪೇಟ್ STRR ಮಾರ್ಗದ ಸತ್ಯಾವರ ಸಮೀಪ ನಡೆದ ಅಪಘಾತದಲ್ಲಿ ಏಳು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಒಂದು ಲಾರಿ, ಎರಡು ಎಸ್ಯುವಿಗಳು ಮತ್ತು ಒಂದು ಬೈಕ್ ಒಳಗೊಂಡಿದ್ದವು. ಲಾರಿಯ ಚಾಸಿಸ್ ಕಟ್ ಆಗಿ ವಾಹನ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. #Accident… pic.twitter.com/QGW46NY7IP
— kannadaprabha (@KannadaPrabha) February 13, 2026
ಸ್ಥಳಕ್ಕೆ ಎಸ್‌ಪಿ ಭೇಟಿ, ತನಿಖೆ ಮುಂದುವರಿಕೆ :
ಘಟನೆಯ ಮಾಹಿತಿ ತಿಳಿದ ಕೂಡಲೇ SP ಚಂದ್ರಕಾಂತ್ ಅವರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ರಸ್ತೆ ಅವೈಜ್ಞಾನಿಕ ವಿನ್ಯಾಸದ ಆರೋಪ :
ಈ ಭೀಕರ ಅಪಘಾತಕ್ಕೆ ಕೇವಲ ಚಾಲಕರ ಅತಿವೇಗ ಮಾತ್ರವಲ್ಲ, ರಸ್ತೆಯ ಅವೈಜ್ಞಾನಿಕ ವಿನ್ಯಾಸವೂ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಾಧುಪ್ಪನಹಳ್ಳಿ–ಕಮಳಿಪುರ ಸೇತುವೆ ವರೆಗಿನ ರಾಷ್ಟ್ರೀಯ ಹೆದ್ದಾರಿ ಮಾರ್ಗವನ್ನು ಸರಿಯಾದ ತಾಂತ್ರಿಕ ಮಾನದಂಡಗಳಿಲ್ಲದೆ ನಿರ್ಮಿಸಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ನಿಯಮದ ಪ್ರಕಾರ ಸರ್ವಿಸ್ ರಸ್ತೆ ಕನಿಷ್ಠ 18 ಅಡಿ ಅಗಲ ಇರಬೇಕು. ಆದರೆ ಇಲ್ಲಿ ಕೇವಲ 2.5 ರಿಂದ 3 ಅಡಿ ಮಾತ್ರ ಸರ್ವಿಸ್ ರಸ್ತೆ ಇದ್ದು, ದಿನನಿತ್ಯ ವಾಹನ ಸವಾರರು ಅಪಾಯ ಎದುರಿಸುತ್ತಿದ್ದಾರೆ ಎಂದು ಗ್ರಾಮಸ್ಥ ಮಂಜುನಾಥ್ ಆರೋಪಿಸಿದ್ದಾರೆ. ಈ ಬಗ್ಗೆ ಕಾಮಗಾರಿ ಹಂತದಲ್ಲೇ ಎಂಜಿನಿಯರ್‌ಗಳು ಆಕ್ಷೇಪ ವ್ಯಕ್ತಪಡಿಸಿದ್ದರೂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.
ಇದನ್ನು ಓದಿ : ಎನ್‌ಎಚ್-66ರಲ್ಲಿ ಭೀಕರ ರಸ್ತೆ ಅಪಘಾತ: ಆರು ವಿದ್ಯಾರ್ಥಿಗಳಿದ್ದ ಕಾರು ಪಲ್ಟಿ.
ರಸ್ತೆ ಸುರಕ್ಷತೆ ಬಗ್ಗೆ ಆತಂಕ :
ಈ ದುರಂತ ಮತ್ತೆ ರಾಷ್ಟ್ರೀಯ ಹೆದ್ದಾರಿಗಳ ಸುರಕ್ಷತೆ, ಅತಿವೇಗ ನಿಯಂತ್ರಣ ಹಾಗೂ ರಸ್ತೆ ವಿನ್ಯಾಸದ ಬಗ್ಗೆ ಪ್ರಶ್ನಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳು ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸ್ಥಳೀಯರಿಂದ ಕೇಳಿಬಂದಿದೆ.
Courtesy : Suvarna News
Disclaimer : ಈ ಸುದ್ದಿಯಲ್ಲಿ ಪ್ರಕಟಿಸಲಾದ ಮಾಹಿತಿಯು ಪೊಲೀಸ್ ಇಲಾಖೆ, ಸ್ಥಳೀಯರು ಹಾಗೂ ಪ್ರಾಥಮಿಕ ವರದಿಗಳ ಆಧಾರದ ಮೇಲೆ ಸಂಗ್ರಹಿಸಲಾಗಿದೆ. ತನಿಖೆ ಮುಂದುವರಿದಿರುವುದರಿಂದ ಕೆಲ ವಿವರಗಳಲ್ಲಿ ಬದಲಾವಣೆ ಸಂಭವಿಸುವ ಸಾಧ್ಯತೆ ಇದೆ. ಮೃತರ ಗುರುತು ಹಾಗೂ ಅಪಘಾತಕ್ಕೆ ಸಂಬಂಧಿಸಿದ ಅಂತಿಮ ಮಾಹಿತಿ ಅಧಿಕೃತ ದೃಢೀಕರಣದ ಬಳಿಕವೇ ಖಚಿತವಾಗಲಿದೆ. ಈ ವರದಿಯ ಉದ್ದೇಶ ಸಾರ್ವಜನಿಕರಿಗೆ ಮಾಹಿತಿ ನೀಡುವುದಷ್ಟೇ ಹೊರತು, ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಇಲಾಖೆಯನ್ನು ಅಪರಾಧಿಯಾಗಿ ಚಿತ್ರಿಸುವುದಲ್ಲ.



