ಸೋಮವಾರ, ಫೆಬ್ರವರಿ 2, 2026

Janaspandhan News

Home Blog Page 6

ರಾಜ್ಯಾದ್ಯಂತ 4.50 ಲಕ್ಷ ಅನರ್ಹ BPL ಕಾರ್ಡ್ ರದ್ದು; ಗೃಹಲಕ್ಷ್ಮಿಯೂ ಸ್ಥಗಿತ?

0

ಜನಸ್ಪಂದನ ನ್ಯೂಸ್‌, ಬೆಂಗಳೂರು : ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ರಾಜ್ಯಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಬರೋಬ್ಬರಿ 7,76,206 ಅನುಮಾನಾಸ್ಪದ ರೇಷನ್ ಕಾರ್ಡ್‌ಗಳನ್ನು ಪತ್ತೆಹಚ್ಚಿದ್ದು, ಈ ಪೈಕಿ 4.50 ಲಕ್ಷ ಅನರ್ಹ BPL ಕಾರ್ಡ್‌ (ಬಿಪಿಎಲ್) ಗಳನ್ನು ರದ್ದುಪಡಿಸಲಾಗಿದೆ. ಅನರ್ಹ ವ್ಯಕ್ತಿಗಳು ಬಿಪಿಎಲ್ ಸೌಲಭ್ಯ ಪಡೆಯುತ್ತಿರುವುದು ಇಲಾಖೆಯ ಪರಿಶೀಲನೆಯಲ್ಲಿ ಬಹಿರಂಗವಾಗಿದೆ.

ಆಹಾರ ಇಲಾಖೆಯ ಮಾಹಿತಿ ಪ್ರಕಾರ, ಹೆಚ್ಚಿನ ಆದಾಯ ಹೊಂದಿದ್ದರೂ, ಆದಾಯ ತೆರಿಗೆ ಪಾವತಿದಾರರಾಗಿದ್ದರೂ, ಜಿಎಸ್‌ಟಿ ನೋಂದಾಯಿತ ವ್ಯಾಪಾರಿಗಳಾಗಿದ್ದರೂ ಅನೇಕರು BPL ಕಾರ್ಡ್ ಪಡೆದು ಸರಕಾರದ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ವಿವಿಧ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಪಟ್ಟಿಯಿಂದ ಸುಮಾರು 14.50 ಲಕ್ಷ ಹೆಸರುಗಳನ್ನು ಕೈಬಿಡಲಾಗಿದೆ.

ಪರಿಶೀಲನೆ ವೇಳೆ ಮೃತ ವ್ಯಕ್ತಿಗಳ ಹೆಸರಿನಲ್ಲಿ ಹಾಗೂ ನಕಲಿ ದಾಖಲೆಗಳ ಆಧಾರದ ಮೇಲೆ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಿಂದ ಉಚಿತ ಪಡಿತರ ಪಡೆಯುತ್ತಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ.

ಈ ಕುಟುಂಬಗಳಿಗೆ ನೀಡಲಾಗುತ್ತಿದ್ದ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವೂ ಸ್ಥಗಿತಗೊಳಿಸಲಾಗಿದೆ. ಈ ಒಂದೇ ಯೋಜನೆಯಿಂದ ಸರ್ಕಾರಕ್ಕೆ ಪ್ರತಿ ತಿಂಗಳು ಸುಮಾರು 90 ಕೋಟಿ ರೂಪಾಯಿ ಉಳಿತಾಯವಾಗುತ್ತಿದೆ ಎಂದು ಇಲಾಖೆ ಅಂದಾಜಿಸಿದೆ.

ಈ ಅನರ್ಹ ಫಲಾನುಭವಿಗಳಿಗೆ ತಿಂಗಳಿಗೆ 72.50 ಲಕ್ಷ ಕ್ವಿಂಟಲ್ ಪಡಿತರ ವಿತರಿಸಲಾಗುತ್ತಿತ್ತು, ಇದಕ್ಕೆ ಸರ್ಕಾರಕ್ಕೆ ಸುಮಾರು 22 ಕೋಟಿ ರೂಪಾಯಿ ವೆಚ್ಚವಾಗುತ್ತಿತ್ತು. ಕಾರ್ಡ್‌ಗಳ ರದ್ದತಿಯಿಂದ ಈ ವೆಚ್ಚವೂ ತಪ್ಪಿದೆ.

BPL ಕಾರ್ಡ್ ರದ್ದುಗೊಳಿಸುವ ಪ್ರಮುಖ ಕಾರಣಗಳು :

ಆಹಾರ ಇಲಾಖೆಯು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಕೆಳಕಂಡವರ ವಿರುದ್ಧ ಕ್ರಮ ಕೈಗೊಂಡಿದೆ:

  • ವಾರ್ಷಿಕ 1.20 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಹೊಂದಿರುವವರು.
  • ಜಿಎಸ್‌ಟಿ ಪಾವತಿದಾರರು.
  • ಹೊರ ರಾಜ್ಯಗಳಲ್ಲಿಯೂ ಪಡಿತರ ಚೀಟಿ ಹೊಂದಿರುವವರು.
  • ಒಂದೇ ಕುಟುಂಬಕ್ಕೆ ಎರಡು ಪಡಿತರ ಚೀಟಿ ಹೊಂದಿರುವವರು.
  • 7.5 ಎಕರೆಗಿಂತ ಹೆಚ್ಚು ಕೃಷಿಭೂಮಿ ಹೊಂದಿರುವವರು.
  • ಶತಾಯುಷಿಗಳು.
  • 6ರಿಂದ 12 ತಿಂಗಳ ಅವಧಿಯಲ್ಲಿ ಒಮ್ಮೆಯೂ ಪಡಿತರ ಪಡೆಯದವರು.

ಪ್ರತಿ ಪಡಿತರ ಅಂಗಡಿ ವ್ಯಾಪ್ತಿಯಲ್ಲಿ ಸರಾಸರಿ 10 BPL ಕಾರ್ಡ್‌ಗಳನ್ನು ರದ್ದುಪಡಿಸುವ ಕಾರ್ಯ ನಡೆಯುತ್ತಿದೆ.

ವಾಪಸ್ ಪಡೆಯಲು ಅವಕಾಶ :

ಅರ್ಹತೆ ಇದ್ದರೂ ಆದಾಯದ ಗೊಂದಲ ಅಥವಾ ದಾಖಲೆ ದೋಷದಿಂದ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ, ಸಂಬಂಧಿಸಿದವರು ಅಗತ್ಯ ದಾಖಲೆಗಳೊಂದಿಗೆ ಆಹಾರ ಇಲಾಖೆ ಕಚೇರಿ ಅಥವಾ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಬಹುದು.

ಪರಿಶೀಲನೆಯ ನಂತರ ಅರ್ಹತೆ ಸಾಬೀತಾದಲ್ಲಿ ಬಿಪಿಎಲ್ ಕಾರ್ಡ್ ಮರು ನೀಡಲು ಸರ್ಕಾರ ಸೂಚನೆ ನೀಡಿದೆ. ಜಿಲ್ಲೆಯಲ್ಲಿ ಈಗಾಗಲೇ 84 ಅರ್ಹರಿಗೆ ಬಿಪಿಎಲ್ ಕಾರ್ಡ್ ವಾಪಸ್ ನೀಡಲಾಗಿದೆ.

ಇನ್ನಷ್ಟು ರದ್ದು ಸಾಧ್ಯತೆ :

ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲೇ ಇದುವರೆಗೂ 13,427 BPL ಕಾರ್ಡ್‌ ಗಳನ್ನು ರದ್ದುಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ 3 ಸಾವಿರಕ್ಕೂ ಹೆಚ್ಚು ಕಾರ್ಡ್‌ಗಳು ರದ್ದಾಗುವ ಸಾಧ್ಯತೆ ಇದೆ. ಈ ಪ್ರಕ್ರಿಯೆ ನಿರಂತರವಾಗಿದ್ದು, ಕಾಲಕಾಲಕ್ಕೆ ಪರಿಶೀಲನೆ ಮುಂದುವರಿಯಲಿದೆ.

ಇದನ್ನು ಓದಿ : 3.65 ಲಕ್ಷ ಅನರ್ಹ BPL Ration Card ರದ್ದು ; ನೋಟಿಸ್‌ ನೀಡಲು ಆಹಾರ ಇಲಾಖೆ ಕ್ರಮ.!

ಬಿಪಿಎಲ್ ಕಾರ್ಡ್ ರದ್ದಾದರೆ ಸ್ವಯಂಚಾಲಿತವಾಗಿ ಅನ್ನಭಾಗ್ಯ, ಗೃಹಲಕ್ಷ್ಮಿ ಸೇರಿದಂತೆ ಹಲವು ಸರ್ಕಾರಿ ಯೋಜನೆಗಳ ಸೌಲಭ್ಯಗಳು ನಿಲ್ಲುತ್ತವೆ. ಹೀಗಾಗಿ ಅನರ್ಹ ಫಲಾನುಭವಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಅರ್ಹರಿಗೆ ನ್ಯಾಯ ಒದಗಿಸುವ ದಿಕ್ಕಿನಲ್ಲಿ ಆಹಾರ ಇಲಾಖೆ ಕಟ್ಟುನಿಟ್ಟಿನ ಕ್ರಮ ಮುಂದುವರೆಸಿದೆ.

ಬಿಯರ್ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಕರಗುತ್ತಾ? ವೈದ್ಯರು ಹೇಳೋ ಸತ್ಯವೇನು?

0

ಜನಸ್ಪಂದನ ನ್ಯೂಸ್‌, ಆರೋಗ್ಯ: ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡದ ಕಲ್ಲು (ಕಿಡ್ನಿ ಸ್ಟೋನ್ / Kidney Stone) ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಈ ಸಮಸ್ಯೆ ಎದುರಾದಾಗ ಹಲವರು ಮನೆಯಲ್ಲಿಯೇ ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತಾರೆ. ಅದರಲ್ಲೂ, “ಬಿಯರ್ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಕರಗುತ್ತದೆ” ಎಂಬ ಮಾತು ಜನಸಾಮಾನ್ಯರಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ಆದರೆ ಈ ಮಾತಿನಲ್ಲಿ ಎಷ್ಟು ಸತ್ಯವಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ವೈದ್ಯಕೀಯ ವಿಜ್ಞಾನದ ಪ್ರಕಾರ, ಬಿಯರ್ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ತಜ್ಞರ ಅಭಿಪ್ರಾಯದಂತೆ, ಬಿಯರ್ ಕಲ್ಲುಗಳನ್ನು ಕರಗಿಸುವುದಕ್ಕಿಂತಲೂ ಮೂತ್ರಪಿಂಡಕ್ಕೆ ಹೆಚ್ಚುವರಿ ಹಾನಿ ಉಂಟುಮಾಡುವ ಸಾಧ್ಯತೆ ಹೆಚ್ಚು ಎಂದು ಎಚ್ಚರಿಸಲಾಗಿದೆ.

ತಜ್ಞರ ವಿವರದಂತೆ, ಬಿಯರ್ ಒಂದು ಮೂತ್ರವರ್ಧಕ ಪಾನೀಯ. ಅಂದರೆ, ಬಿಯರ್ ಸೇವಿಸಿದ ನಂತರ ಹೆಚ್ಚು ಬಾರಿ ಮೂತ್ರ ವಿಸರ್ಜನೆ ಆಗುತ್ತದೆ. ಇದರಿಂದ ದೇಹದಲ್ಲಿನ ನೀರಿನ ಪ್ರಮಾಣ ವೇಗವಾಗಿ ಕಡಿಮೆಯಾಗುತ್ತದೆ ಮತ್ತು ನಿರ್ಜಲೀಕರಣ ಉಂಟಾಗುತ್ತದೆ.

ವಾಸ್ತವವಾಗಿ, ಕಿಡ್ನಿ ಸ್ಟೋನ್ ಹೊರಬರಲು ದೇಹದಲ್ಲಿ ಸಾಕಷ್ಟು ನೀರಿರಬೇಕು. ಆದರೆ ಬಿಯರ್ ದೇಹವನ್ನು ನೀರಿಲ್ಲದ ಸ್ಥಿತಿಗೆ ತಳ್ಳುವ ಮೂಲಕ ಕಲ್ಲುಗಳನ್ನು ಇನ್ನಷ್ಟು ಗಟ್ಟಿಯಾಗುವಂತೆ ಮಾಡುತ್ತದೆ.

ಇದಲ್ಲದೆ, ಬಿಯರ್‌ನಲ್ಲಿ ಪ್ಯೂರಿನ್ ಎಂಬ ಅಂಶ ಹೆಚ್ಚಾಗಿ ಇರುವುದರಿಂದ, ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟ ಹೆಚ್ಚಾಗುತ್ತದೆ. ನಿರಂತರವಾಗಿ ಬಿಯರ್ ಸೇವಿಸುವವರಲ್ಲಿ ಈ ಯೂರಿಕ್ ಆಸಿಡ್ ಹೆಚ್ಚಳ ಹೊಸ ಕಲ್ಲುಗಳ ರಚನೆಯನ್ನು ವೇಗಗೊಳಿಸುವ ಸಾಧ್ಯತೆ ಇರುತ್ತದೆ.

ವೈದ್ಯರ ಪ್ರಕಾರ, ಮೂತ್ರಪಿಂಡದ ಕಲ್ಲು 5 ಮಿಲಿಮೀಟರ್‌ಗಿಂತ ದೊಡ್ಡದಾಗಿದ್ದರೆ, ಯಾವುದೇ ಪಾನೀಯವನ್ನು ಕುಡಿಯುವುದರಿಂದ ಅದು ತಾನಾಗಿಯೇ ಹೊರಬರುವುದಿಲ್ಲ. ಬಿಯರ್ ಕುಡಿಯುವುದರಿಂದ ಮೂತ್ರದ ಒತ್ತಡ ಹೆಚ್ಚಾದರೆ, ಕಲ್ಲು ಮೂತ್ರನಾಳದಲ್ಲಿ ಸಿಲುಕಿಕೊಳ್ಳುವ ಅಪಾಯವಿದ್ದು, ಇದು ತೀವ್ರವಾದ ನೋವು ಹಾಗೂ ಸೋಂಕುಗಳಿಗೆ ಕಾರಣವಾಗಬಹುದು.

ತಾತ್ಕಾಲಿಕವಾಗಿ ಹೆಚ್ಚುವರಿ ಮೂತ್ರ ವಿಸರ್ಜನೆಯಿಂದ ಸಮಸ್ಯೆ ಕಡಿಮೆಯಾದಂತೆ ಭಾಸವಾದರೂ, ದೀರ್ಘಾವಧಿಯಲ್ಲಿ ಬಿಯರ್ ಯಕೃತ್ತು ಹಾಗೂ ಮೂತ್ರಪಿಂಡಗಳಿಗೆ ಗಂಭೀರ ಹಾನಿಯನ್ನುಂಟುಮಾಡುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದನ್ನು ಓದಿ : ಎಂದಿಗೂ ನಿರ್ಲಕ್ಷಿಸಬಾರದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು.

ಆದ್ದರಿಂದ, ಕಿಡ್ನಿ ಸ್ಟೋನ್ ಸಮಸ್ಯೆ ಎದುರಾದಾಗ ಸ್ವಯಂ-ಔಷಧಿ ಅಥವಾ ತಪ್ಪು ನಂಬಿಕೆಗಳ ಬದಲು ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸರಿಯಾದ ಚಿಕಿತ್ಸೆ ಪಡೆಯುವುದು ಅತ್ಯಂತ ಅಗತ್ಯ.

ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟಲು ದಿನಕ್ಕೆ ಕನಿಷ್ಠ 3–4 ಲೀಟರ್ ನೀರು ಕುಡಿಯುವುದು, ನಿಂಬೆ ರಸ ಸೇವಿಸುವುದು ಹಾಗೂ ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ.


Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತಿರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.

ಟೈರ್ ಸ್ಪೋಟಗೊಂಡು ಮನೆ ಅಂಗಳಕ್ಕೆ ಹಾರಿ ಬಿದ್ದ ಕಾರು; ಸಿಸಿಟಿವಿ ವಿಡಿಯೋ ವೈರಲ್.

0

ಜನಸ್ಪಂದನ ನ್ಯೂಸ್‌, ಮಂಗಳೂರು: ಏಕಾಏಕಿ ಟೈರ್ ಸ್ಪೋಟಗೊಂಡ ಪರಿಣಾಮ ಕಾರೊಂದು ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್ ಹಾರಿ ಅಂಗಳಕ್ಕೆ ಬಿದ್ದು ಪಲ್ಟಿಯಾದ ಭೀಕರ ಘಟನೆ ಮಂಗಳೂರಿನ ಮರಕಡ ಪ್ರದೇಶದಲ್ಲಿ ಸಂಭವಿಸಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಪಾದ್ರಿಯೊಬ್ಬರು ಪವಾಡದಂತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಗರದ ಕಾವೂರು–ಮರವೂರು ರಸ್ತೆಯ ಮರಕಡ ಎಂಬಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದೆ. ಅಪಘಾತದ ಸಂಪೂರ್ಣ ದೃಶ್ಯ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ಮರಕಡ ಕಾರು ಅಪಘಾತ (Accident) ದ ವೈರಲ್‌ ವಿಡಿಯೋ :

ಈ ಅಪಘಾತದಲ್ಲಿ ಗಾಯದಿಂದ ಪಾರಾದವರನ್ನು ಮಂಗಳೂರಿನ ಬೋಂದೆಲ್‌ನ ಸಂತ ಲಾರೆನ್ಸ್ ಚರ್ಚ್‌ನ ಧರ್ಮಗುರು ಫಾದರ್ ಆಂಡ್ರೂ ಲಿಯೋ ಡಿಸೋಜಾ ಎಂದು ಗುರುತಿಸಲಾಗಿದೆ. ಘಟನೆ ವೇಳೆ ಫಾದರ್ ಆಂಡ್ರೂ ಅವರು ಸ್ವತಃ ಕಾರು ಚಾಲನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಮಾಹಿತಿಯಂತೆ, ಫಾದರ್ ಆಂಡ್ರೂ ಅವರು ನೀರುಡೆಯಲ್ಲಿರುವ ತಮ್ಮ ನಿವಾಸದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಬಳಿಕ ಬಜ್ಪೆ ಮಾರ್ಗವಾಗಿ ಬೋಂದೆಲ್ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಮರಕಡ ಪ್ರದೇಶದ ಬಳಿ ಬರುತ್ತಿದ್ದಾಗ ಕಾರಿನ ಟೈರ್ ಏಕಾಏಕಿ ಬ್ಲಾಸ್ಟ್ ಆಗಿದ್ದು, ಇದರಿಂದ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಗೆ ಜಾರಿಕೊಂಡು ಪಕ್ಕದ ಮನೆಯ ಕಾಂಪೌಂಡ್ ಏರಿ ಗೋಡೆಗೆ ಡಿಕ್ಕಿ ಹೊಡೆದು ಅಂಗಳಕ್ಕೆ ಬಿದ್ದಿದೆ.

ಘಟನೆಯ ಸದ್ದು ಕೇಳಿ ಸ್ಥಳೀಯರು ತಕ್ಷಣ ಧಾವಿಸಿ, ಮಗುಚಿ ಬಿದ್ದ ಕಾರನ್ನು ನೇರವಾಗಿ ನಿಲ್ಲಿಸಿ ಕಾರಿನೊಳಗಿದ್ದ ಫಾದರ್ ಆಂಡ್ರೂ ಅವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಬಳಿಕ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರ ಪ್ರಕಾರ, ಫಾದರ್ ಆಂಡ್ರೂ ಅವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ.

ಘಟನೆಗೆ ಪ್ರತಿಕ್ರಿಯಿಸಿದ ಫಾದರ್ ಆಂಡ್ರೂ, “ದೇವರ ಕೃಪೆಯಿಂದ ನಾನು ಬದುಕಿದ್ದೇನೆ” ಎಂದು ತಿಳಿಸಿದ್ದಾರೆ. ಅಪಘಾತದಿಂದ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.

ಇದನ್ನು ಓದಿ : ಭೀಕರ ಅಪಘಾತ: ಖಾಸಗಿ ಬಸ್–ಲಾರಿ ಡಿಕ್ಕಿ, 9 ಜನ ಸಜೀವ ದಹನ.

ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾರು ಕಾಂಪೌಂಡ್ ಹಾರಿ ಮನೆಯ ಗೋಡೆಗೆ ಡಿಕ್ಕಿ ಹೊಡೆದು ಅಂಗಳಕ್ಕೆ ಬಿದ್ದು ಪಲ್ಟಿಯಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದ್ದು, ನಂತರ ಸ್ಥಳೀಯರು ಕಾರನ್ನು ಮೇಲಕ್ಕೆತ್ತಿ ಪಾದ್ರಿಯನ್ನು ರಕ್ಷಿಸುವ ದೃಶ್ಯಗಳು ದಾಖಲಾಗಿವೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಗಮನ ಸೆಳೆಯುತ್ತಿದೆ.

ಬೊಲೆರೊ ಮೇಲೆ ಉರುಳಿದ ಟ್ರಕ್; ಚಾಲಕ ಸ್ಥಳದಲ್ಲೇ ಸಾವು, ವಿಡಿಯೋ ವೈರಲ್.

0

ಜನಸ್ಪಂದನ ನ್ಯೂಸ್‌, ಉತ್ತರ ಪ್ರದೇಶ : ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ಭಾನುವಾರ ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಹುಲ್ಲು ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಬೊಲೆರೊ ವಾಹನದ ಮೇಲೆ ಉರುಳಿ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಈ ಅಪಘಾತಕ್ಕೆ ಸಂಬಂಧಿಸಿದ ದೃಶ್ಯಾವಳಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ವಿವರಗಳ ಪ್ರಕಾರ, ರಾಂಪುರ ಜಿಲ್ಲೆಯ ನೈನಿತಾಲ್ ರಾಷ್ಟ್ರೀಯ ಹೆದ್ದಾರಿಯ ಪಹಾಡಿ ಗೇಟ್ ಛೇದಕದ ಬಳಿ ಇರುವ ಸ್ಥಳೀಯ ವಿದ್ಯುತ್ ಉಪಕೇಂದ್ರದ ಸಮೀಪ ಈ ಅಪಘಾತ ಸಂಭವಿಸಿದೆ.

ಬೊಲೆರೊ ಮೇಲೆ ಉರುಳಿದ ಟ್ರಕ್‌ನ ವಿಡಿಯೋ :

Courtesy : Social Media 

ಬಿಲಾಸ್ಪುರ್ ಕಡೆಗೆ ಸಾಗುತ್ತಿದ್ದ ಹುಲ್ಲು ತುಂಬಿದ ಲಾರಿ ರಸ್ತೆ ವಿಭಜಕದ ಮೇಲೆ ಹತ್ತಿದ ಪರಿಣಾಮ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ. ಈ ವೇಳೆ ಪಕ್ಕದಲ್ಲೇ ಚಲಿಸುತ್ತಿದ್ದ ಬೊಲೆರೊ ವಾಹನದ ಮೇಲೆ ಲಾರಿ ಉರುಳಿ ಬಿದ್ದಿದೆ.

ಅಪಘಾತದ ಪರಿಣಾಮ ಬೊಲೆರೊ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದರ ಚಾಲಕ ಫಿರಾಸತ್ (54) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಗುಜರ್ತೋಲಾ ಗ್ರಾಮದ ನಿವಾಸಿ ಎಂದು ಪೊಲೀಸರು ಗುರುತಿಸಿದ್ದಾರೆ.

ಅಪಘಾತಕ್ಕೀಡಾದ ಬೊಲೆರೊ ವಾಹನವು ವಿದ್ಯುತ್ ಇಲಾಖೆಗೆ ಸೇರಿದ್ದು, ಅದರ ಮೇಲೆ “ಉತ್ತರ ಪ್ರದೇಶ ಸರ್ಕಾರ” ಎಂಬ ಬರಹವಿದ್ದುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ದ್ವಿಚಕ್ರ ವಾಹನ ಸವಾರರು ಅಪಾಯದಿಂದ ಪಾರು :

ಅದೇ ಸಮಯದಲ್ಲಿ ಪಕ್ಕದ ರಸ್ತೆಯಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನ ಸವಾರರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಅಪಘಾತದ ಹೊಡೆತಕ್ಕೆ ಅವರ ಬೈಕ್‌ಗೆ ಹಾನಿಯಾಗಿದೆ ಎನ್ನಲಾಗಿದೆ.

ಘಟನೆಯ ಮಾಹಿತಿ ಲಭಿಸಿದ ತಕ್ಷಣ ಪೊಲೀಸರು, ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಜೆಸಿಬಿ ಮತ್ತು ಕ್ರೇನ್ ಸಹಾಯದಿಂದ ಬೊಲೆರೊ ಮೇಲೆ ಉರುಳಿದ್ದ ಲಾರಿಯನ್ನು ಮೇಲಕ್ಕೆ ಎತ್ತಿ, ರಸ್ತೆಯನ್ನು ತೆರವುಗೊಳಿಸಲಾಯಿತು.

ನಂತರ ಮೃತದೇಹವನ್ನು ಹೊರತೆಗೆದು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ರಾಂಪುರ ಪೊಲೀಸ್ ವರಿಷ್ಠಾಧಿಕಾರಿ ವಿದ್ಯಾಸಾಗರ್ ಮಿಶ್ರಾ, ಅಪಘಾತದ ಸ್ಥಳದಲ್ಲಿ ತಕ್ಷಣವೇ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಬೊಲೆರೊ ವಾಹನದೊಳಗೆ ಒಬ್ಬ ವ್ಯಕ್ತಿ ಮಾತ್ರ ಇದ್ದು, ಲಾರಿ ಅಥವಾ ಹುಲ್ಲಿನ ಕೆಳಗೆ ಇನ್ನಾರೂ ಸಿಲುಕಿಲ್ಲ ಎಂಬುದನ್ನು ಅವರು ದೃಢಪಡಿಸಿದ್ದಾರೆ.

ಇದನ್ನು ಓದಿ : Car – KSRTC ಬಸ್ ಭೀಕರ ಅಪಘಾತ ; ಮೂವರು ಯುವಕರ ದುರ್ಮರಣ.

ಪೊಲೀಸ್ ಎಚ್ಚರಿಕೆ :

ಹೆದ್ದಾರಿಗಳಲ್ಲಿ ಹೆಚ್ಚುತ್ತಿರುವ ಭಾರೀ ವಾಹನ ಸಂಚಾರ ಹಾಗೂ ನಿರ್ಲಕ್ಷ್ಯ ಚಾಲನೆ ಗಂಭೀರ ಅಪಾಯಕ್ಕೆ ಕಾರಣವಾಗುತ್ತಿದ್ದು, ಜನನಿಬಿಡ ಪ್ರದೇಶಗಳಲ್ಲಿ ವಾಹನ ಚಾಲಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣಗಳ ಕುರಿತು ತನಿಖೆ ಮುಂದುವರಿದಿದೆ.

ಇದನ್ನು ಓದಿ : Car – KSRTC ಬಸ್ ಭೀಕರ ಅಪಘಾತ ; ಮೂವರು ಯುವಕರ ದುರ್ಮರಣ.


Disclaimer : ಈ ಲೇಖನವು ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಆಧಾರದಲ್ಲಿದೆ. ತನಿಖೆ ಮುಂದುವರಿದಿರುವುದರಿಂದ ಮುಂದಿನ ಮಾಹಿತಿಯಲ್ಲಿ ಬದಲಾವಣೆ ಸಂಭವಿಸುವ ಸಾಧ್ಯತೆ ಇದೆ.

ಮದುವೆ ವೇಳೆ ವರನ ಕೈಗೆ ಮುತ್ತು ಕೊಟ್ಟ ಮಾಜಿ ಪ್ರೇಯಸಿ; ಮುಂದೇನಾಯ್ತು ನೋಡಿ.

0

ಜನಸ್ಪಂದನ ನ್ಯೂಸ್‌, ವೈರಲ್ ವಿಡಿಯೋ : ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಗಳಲ್ಲಿ ನಡೆಯುವ ಅಚ್ಚರಿಯ ಘಟನೆಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿವೆ. ಕೊನೆಕ್ಷಣದಲ್ಲಿ ಮದುವೆ ಮುರಿದು ಬೀಳುವುದು, ಮೊದಲ ಪತ್ನಿ ಅಥವಾ ಹಳೆಯ ಸಂಬಂಧಿಕರು ಬಂದು ಗೊಂದಲ ಸೃಷ್ಟಿಸುವುದು ಈಗ ಹೊಸದೇನಲ್ಲ. ಇದೇ ರೀತಿಯ ಮತ್ತೊಂದು ಘಟನೆ ಇದೀಗ ನೆಟ್ಟಿಗರ ಗಮನ ಸೆಳೆದಿದೆ.

ಆರತಕ್ಷತೆಯ ವೇಳೆ ವಧು-ವರರು ವೇದಿಕೆಯಲ್ಲಿ ನಿಂತಿದ್ದ ಸಮಯದಲ್ಲಿ ವರನ ಮಾಜಿ ಗರ್ಲ್‌ಫ್ರೆಂಡ್ ಏಕಾಏಕಿ ವೇದಿಕೆಗೆ ಬಂದಿದ್ದಾಳೆ.

ಆದರೆ ಆಕೆ ಜಗಳ ಆರಂಭಿಸದೇ, ನೇರವಾಗಿ ವರನ ಪಕ್ಕ ನಿಂತು ಫೋಟೋಗೆ ಪೋಸ್ ನೀಡಿರುವುದು ಅಲ್ಲಿ ಹಾಜರಿದ್ದವರನ್ನೆಲ್ಲ ಅಚ್ಚರಿಗೊಳಿಸಿದೆ. ಇನ್ನೂ ಮುಂದೆ ಹೋಗಿ, ವರನ ಕೈ ಹಿಡಿದು ಮುತ್ತು ಕೊಡಲು ಪ್ರಯತ್ನಿಸಿದಂತಿರುವ ದೃಶ್ಯಗಳು ವಿಡಿಯೋದಲ್ಲಿ ಕಾಣಿಸುತ್ತವೆ.

ಮದುವೆ ವೇಳೆ ವರನ ಕೈಗೆ ಮುತ್ತು ಕೊಟ್ಟ ಮಾಜಿ ಪ್ರೇಯಸಿ ವಿಡಿಯೋ :

 

View this post on Instagram

 

A post shared by The Rakt (@theraktofficial)

Courtesy : Social Media 

ಈ ದೃಶ್ಯ ಕಂಡ ವಧು ಕ್ಷಣಾರ್ಧದಲ್ಲೇ ಕೋಪಗೊಂಡಿದ್ದು, ಯಾವುದೇ ತಡವಿಲ್ಲದೆ ಆಕೆಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾಳೆ. ವಧುವಿನ ಹಠಾತ್ ಪ್ರತಿಕ್ರಿಯೆ ಕಾರ್ಯಕ್ರಮದಲ್ಲಿದ್ದವರನ್ನಷ್ಟೇ ಅಲ್ಲ, ನಂತರ ವಿಡಿಯೋ ನೋಡಿದ ನೆಟ್ಟಿಗರನ್ನೂ ಅಚ್ಚರಿಗೊಳಿಸಿದೆ.

ಈ ಘಟನೆ ನಡೆದಿರುವುದು ಭಾರತದಲ್ಲಿ ಅಲ್ಲ, ಏಷ್ಯಾದ ಮತ್ತೊಂದು ರಾಷ್ಟ್ರವಾದ ಇಂಡೋನೇಷ್ಯಾದಲ್ಲಿ ಎಂಬ ಮಾಹಿತಿ ಲಭ್ಯವಾಗಿದೆ.

ಈ ವಿಡಿಯೋ ವಿವಿಧ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಭಾರೀ ವೈರಲ್ ಆಗುತ್ತಿದೆ. The Rakt ಎಂಬ ಟ್ವಿಟ್ಟರ್ ಪೇಜ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಮದುವೆ ಸಮಾರಂಭವು ಸಾಮಾನ್ಯವಾಗಿ ನಡೆಯುತ್ತಿರುವಾಗ ಫೋಟೋ ಸೆಷನ್ ವೇಳೆ ಈ ಅಸಹಜ ಘಟನೆ ನಡೆದಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.

ವಿಡಿಯೋ ವೈರಲ್ ಆದ ಬಳಿಕ ನೆಟ್ಟಿಗರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ವಧುವಿನ ಪ್ರತಿಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದು, “ಅವಳು ಸರಿಯಾದದ್ದೇ ಮಾಡಿದ್ದಾಳೆ” ಎಂದು ಕಾಮೆಂಟ್ ಮಾಡಿದ್ದಾರೆ.

  • “ಮದುವೆ ದಿನ ವರನ ಮಾಜಿ ಗೆಳತಿ ಇಂಥ ವರ್ತನೆ ತೋರಿಸುವುದು ಅಸಹಜ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು,
  • “ಮಾಜಿ ಗೆಳತಿಯನ್ನು ಮದುವೆಗೆ ಆಹ್ವಾನಿಸುವ ಅಗತ್ಯವೇನು?” ಎಂದು ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ, ಸ್ಮಾರ್ಟ್‌ಫೋನ್ ಮತ್ತು ಸೋಶಿಯಲ್ ಮೀಡಿಯಾ ಯುಗದಲ್ಲಿ ಖಾಸಗಿ ಕ್ಷಣಗಳೂ ಸಾರ್ವಜನಿಕ ಚರ್ಚೆಗೆ ಕಾರಣವಾಗುತ್ತಿವೆ. ಮದುವೆಯಂತಹ ವೈಯಕ್ತಿಕ ಸಮಾರಂಭದಲ್ಲೂ ನಡೆದ ಸಣ್ಣ ಘಟನೆ ಕೂಡ ಕ್ಷಣಾರ್ಧದಲ್ಲೇ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿರುವುದು ಗಮನಾರ್ಹವಾಗಿದೆ.

ಇದನ್ನು ಓದಿ : RRTS ರೈಲಿನಲ್ಲಿ ಜೋಡಿಯ ಅಸಭ್ಯ ವರ್ತನೆ; ವಿಡಿಯೋ ವೈರಲ್.


Disclaimer : ಈ ಲೇಖನವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಆಧಾರದಲ್ಲಿದೆ. ಜನಸ್ಪಂದನ ನ್ಯೂಸ್ ಇದರ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ದೃಢಪಡಿಸುವುದಿಲ್ಲ.

ಎಂದಿಗೂ ನಿರ್ಲಕ್ಷಿಸಬಾರದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು.

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಕ್ಯಾನ್ಸರ್ ಮತ್ತು ಏಡ್ಸ್‌ಂತಹ ಅಪಾಯಕಾರಿ ಕಾಯಿಲೆಗಳು ವಿಶ್ವದಾದ್ಯಂತ ಲಕ್ಷಾಂತರ ಜೀವಗಳನ್ನು ಕಸಿದುಕೊಳ್ಳುತ್ತಿವೆ. ವಿಶೇಷವಾಗಿ ಕ್ಯಾನ್ಸರ್ (Cancer) ಅನ್ನು “ಮೂಕ ಕೊಲೆಗಾರ” ಎಂದು ಕರೆಯಲಾಗುತ್ತದೆ. ಆರಂಭಿಕ ಹಂತದಲ್ಲಿ ಲಕ್ಷಣಗಳು ಸ್ಪಷ್ಟವಾಗದೆ ಇರಬಹುದಾದರೂ, ಕೆಲವು ಸಣ್ಣ ಸೂಚನೆಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿದರೆ ರೋಗದ ಅಪಾಯವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವೆಂದು ವೈದ್ಯಕೀಯ ತಜ್ಞರು ತಿಳಿಸಿದ್ದಾರೆ.

ಹಠಾತ್ ತೂಕ ನಷ್ಟ :

  • ಯಾವುದೇ ಆಹಾರ ನಿಯಂತ್ರಣ ಅಥವಾ ವ್ಯಾಯಾಮವಿಲ್ಲದೆ ಅಚಾನಕ್ ತೂಕ ಕಡಿಮೆಯಾಗುವುದು ಕೆಲವೊಮ್ಮೆ ಕ್ಯಾನ್ಸರ್‌ನ ಆರಂಭಿಕ ಲಕ್ಷಣವಾಗಿರಬಹುದು.
  • ಕ್ಯಾನ್ಸರ್ ಕೋಶಗಳು ದೇಹದ ಚಯಾಪಚಯ ಕ್ರಿಯೆಯನ್ನು ಬದಲಾಯಿಸುವುದರಿಂದ ಇದು ಸಂಭವಿಸಬಹುದು.
  • ಇಂತಹ ವಿವರಿಸಲಾಗದ ತೂಕ ನಷ್ಟ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಅತ್ಯವಶ್ಯಕ.

ನಿರಂತರ ಆಯಾಸ :

ಸಾಕಷ್ಟು ನಿದ್ರೆ ಮತ್ತು ವಿಶ್ರಾಂತಿ ಪಡೆದರೂ ಸಹ ನಿರಂತರವಾಗಿ ದಣಿದ ಭಾವನೆ ಕಾಡುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. ಸಾಮಾನ್ಯ ಆಯಾಸಕ್ಕಿಂತ ವಿಭಿನ್ನವಾಗಿ, ಕ್ಯಾನ್ಸರ್ ಸಂಬಂಧಿತ ಆಯಾಸ ವಿಶ್ರಾಂತಿಯಿಂದ ಕಡಿಮೆಯಾಗುವುದಿಲ್ಲ. ಈ ಲಕ್ಷಣ ಕೆಲವು ಕ್ಯಾನ್ಸರ್ಗಳಿಗೆ ಸೂಚಕವಾಗಿರಬಹುದು.

ಚರ್ಮದ ಬದಲಾವಣೆಗಳು :

ಚರ್ಮದ ಮೇಲೆ ಇರುವ ಮಚ್ಚೆಗಳು ಹಠಾತ್ ಗಾತ್ರ ಅಥವಾ ಬಣ್ಣ ಬದಲಾಯಿಸುವುದು, ರಕ್ತಸ್ರಾವವಾಗುವುದು ಅಥವಾ ಹೊಸ ಮಚ್ಚೆಗಳು ಕಾಣಿಸಿಕೊಳ್ಳುವುದು ಚರ್ಮದ ಕ್ಯಾನ್ಸರ್‌ನ ಸೂಚನೆ ಆಗಿರಬಹುದು. ಇಂತಹ ಬದಲಾವಣೆಗಳನ್ನು ನಿರಂತರವಾಗಿ ಗಮನಿಸುವುದು ಅಗತ್ಯ.

ಬಾಯಿಯಲ್ಲಿ ಗುಣವಾಗದ ಹುಣ್ಣುಗಳು :

ಹಲವಾರು ವಾರಗಳಾದರೂ ಗುಣವಾಗದ ಬಾಯಿಯ ಹುಣ್ಣುಗಳು ಅಥವಾ ಬಾಯಿಯೊಳಗಿನ ಅಸಹಜ ಬದಲಾವಣೆಗಳನ್ನು ಲಘುವಾಗಿ ಪರಿಗಣಿಸಬಾರದು. ಇವು ಕೆಲ ಸಂದರ್ಭಗಳಲ್ಲಿ ಬಾಯಿ ಕ್ಯಾನ್ಸರ್‌ಗೆ ಸಂಬಂಧಿಸಿರಬಹುದು.

ನಿರಂತರ ನೋವು :

ಕಾರಣವಿಲ್ಲದೆ ನಿರಂತರ ತಲೆನೋವು, ಹೊಟ್ಟೆ ನೋವು, ಬೆನ್ನು ನೋವು ಅಥವಾ ದೇಹದ ಯಾವುದೇ ಭಾಗದಲ್ಲಿ ದೀರ್ಘಕಾಲದ ನೋವು ಕಂಡುಬಂದರೆ ವೈದ್ಯಕೀಯ ತಪಾಸಣೆ ಅಗತ್ಯ. ನೋವಿನ ಅವಧಿ ಮತ್ತು ತೀವ್ರತೆಯನ್ನು ಗಮನಿಸುವುದು ಬಹಳ ಮುಖ್ಯ.

ಮಲ ಮತ್ತು ಮೂತ್ರದ ವ್ಯತ್ಯಾಸಗಳು :

ನಿರಂತರ ಮಲಬದ್ಧತೆ ಅಥವಾ ಅತಿಸಾರ, ಮಲ ಅಥವಾ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು, ಮೂತ್ರ ವಿಸರ್ಜನೆಯಲ್ಲಿ ಬದಲಾವಣೆಗಳು ಮತ್ತು ಮಹಿಳೆಯರಲ್ಲಿ ಮುಟ್ಟಿನ ಚಕ್ರದ ಅಸಮಾನತೆಗಳು ಕೆಲ ಕ್ಯಾನ್ಸರ್‌ಗಳ ಸೂಚನೆಯಾಗಿರಬಹುದು.

ದೀರ್ಘಕಾಲದ ಕೆಮ್ಮು ಮತ್ತು ಎದೆಯುರಿ :

ಕೆಲವು ವಾರಗಳಿಗಿಂತ ಹೆಚ್ಚು ಕಾಲ ಇರುವ ನಿರಂತರ ಕೆಮ್ಮು, ನುಂಗಲು ತೊಂದರೆ ಅಥವಾ ಯಾವ ಚಿಕಿತ್ಸೆಯೂ ಕೆಲಸ ಮಾಡದ ಎದೆಯುರಿಯನ್ನು ನಿರ್ಲಕ್ಷಿಸಬಾರದು. ಇವು ಶ್ವಾಸಕೋಶ ಅಥವಾ ಅನ್ನನಾಳ ಸಂಬಂಧಿತ ಕ್ಯಾನ್ಸರ್ಗಳ ಲಕ್ಷಣವಾಗಿರಬಹುದು.

ಸ್ತನದ ಬದಲಾವಣೆಗಳು :

ಸ್ತನದಲ್ಲಿ ಉಂಡೆಗಳು ಕಾಣಿಸಿಕೊಳ್ಳುವುದು, ಒಂದೇ ಸ್ತನದ ಅಸಹಜ ಹಿಗ್ಗುವಿಕೆ, ಚರ್ಮದ ಬಣ್ಣ ಅಥವಾ ರಚನೆಯಲ್ಲಿ ಬದಲಾವಣೆ, ಮೊಲೆತೊಟ್ಟುಗಳಿಂದ ಅಸಹಜ ಸ್ರವಣೆ ಇವು ಸ್ತನ ಕ್ಯಾನ್ಸರ್‌ನ ಆರಂಭಿಕ ಸೂಚನೆಗಳಾಗಿರಬಹುದು. ಸ್ತನ ಸ್ವಯಂ ಪರೀಕ್ಷೆಯನ್ನು ನಿಯಮಿತವಾಗಿ ಮಾಡುವುದರಿಂದ ಈ ರೋಗವನ್ನು ಮೊದಲೇ ಪತ್ತೆಹಚ್ಚಲು ಸಾಧ್ಯ.

ತಜ್ಞರ ಸಲಹೆ :

ಯಾವುದೇ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ಅಥವಾ ದೇಹದಲ್ಲಿ ಅಸಹಜ ಬದಲಾವಣೆಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಆರಂಭಿಕ ಪತ್ತೆಹಚ್ಚುವಿಕೆಯೇ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಅತ್ಯಂತ ಪ್ರಮುಖ ಅಸ್ತ್ರವಾಗಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಇದನ್ನು ಓದಿ : ಆಯುರ್ವೇದವನ್ನು ಕಡೆಗಣಿಸಿದ ಭಾರತೀಯರು; ಚೀನಿಯರ ಆರೋಗ್ಯ ಕಷಾಯ ರಹಸ್ಯ.

ಸಂಬಂಧಿತ ಸುದ್ದಿ : “ಕಾಲಿನ ನೋವಿನ ಜೊತೆ ಈ 5 ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ ; ಅದು Kidney ಫೆಲ್ಯೂರ್‌ನ ಸೂಚನೆ ಆಗಿರಬಹುದು”

Disclaimer : ಈ ಲೇಖನದಲ್ಲಿರುವ ಮಾಹಿತಿ ಸಾರ್ವಜನಿಕ ಆರೋಗ್ಯ ಜಾಗೃತಿ ಉದ್ದೇಶಕ್ಕಾಗಿ ಮಾತ್ರ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ ಆರೋಗ್ಯ ಸಮಸ್ಯೆಗಳು ಅಥವಾ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಅರ್ಹ ವೈದ್ಯರನ್ನು ಅಥವಾ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಅಗತ್ಯ.

ವಿಚ್ಛೇದನ ನೋಟಿಸ್‌ ಕಾರಣಕ್ಕೆ ಪತ್ನಿಯನ್ನು ಗುಂಡಿಕ್ಕಿ ಕೊಲೆ ಮಾಡಿದ ಪತಿ.

0

ಜನಸ್ಪಂದನ ನ್ಯೂಸ್‌, ಬೆಂಗಳೂರು : ಪತ್ನಿಯ ಮೇಲೆ ಗುಂಡು ಹಾರಿಸಿ ಹತ್ಯೆ ನಡೆಸಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯು ಬಳಸಿದ್ದ ಪಿಸ್ತೂಲ್ ಕುರಿತು ಮಾಗಡಿ ರಸ್ತೆ ಠಾಣೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಘಟನೆ ಬಳಿಕ ಆರೋಪಿ ಬಾಲ ಮುರುಗನ್‌ನಿಂದ ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಪಿಸ್ತೂಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದು ಪರವಾನಗಿ ಹೊಂದಿದ ಆಯುಧವೋ ಅಥವಾ ಅನಧಿಕೃತ (ಕಂಟ್ರಿಮೇಡ್) ಪಿಸ್ತೂಲ್ ಆಗಿದೆಯೋ ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಪಿಸ್ತೂಲ್ ಪರವಾನಗಿ ಹೊಂದಿದ್ದಲ್ಲಿ ಅದರ ದಾಖಲಾತಿಗಳ ಪರಿಶೀಲನೆ ನಡೆಯುತ್ತಿದ್ದು, ಅನಧಿಕೃತ ಆಯುಧವಾಗಿದ್ದಲ್ಲಿ ಅದು ಎಲ್ಲಿ ಖರೀದಿಸಲಾಯಿತು, ಯಾರಿಂದ ದೊರಕಿತು ಎಂಬ ಎಲ್ಲ ಅಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಮಂಗಳವಾರ ರಾತ್ರಿಯಿಂದಲೇ ಆರೋಪಿಯನ್ನು ನಿರಂತರವಾಗಿ ವಿಚಾರಣೆಗೆ ಒಳಪಡಿಸಲಾಗಿದ್ದು, ಕೆಲವು ಮಹತ್ವದ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚ್ಛೇದನ (Divorce) ನೋಟಿಸ್‌ :

ವಿಚಾರಣೆ ವೇಳೆ ಆರೋಪಿ, ಪತ್ನಿ ವಿಚ್ಛೇದನಕ್ಕೆ ಸಂಬಂಧಿಸಿದ ನೋಟಿಸ್ ಕಳುಹಿಸಿದ್ದುದೇ ಈ ಕೃತ್ಯಕ್ಕೆ ಕಾರಣ ಎಂದು ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪತ್ನಿಗೆ ಅನೈತಿಕ ಸಂಬಂಧವಿದೆ ಎಂಬ ಅನುಮಾನವನ್ನು ಆರೋಪಿ ಹೊಂದಿದ್ದರಿಂದ ದಂಪತಿ ನಡುವೆ ನಿರಂತರ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.

ಈ ಹಿನ್ನೆಲೆ ಪತ್ನಿ ಕಾನೂನು ಮಾರ್ಗದ ಮೂಲಕ ವಿಚ್ಛೇದನಕ್ಕೆ ಮುಂದಾಗಿದ್ದಳು. ಇದರಿಂದ ಆಕ್ರೋಶಗೊಂಡ ಆರೋಪಿ, ಕೃತ್ಯಕ್ಕೆ ಮುಂದಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಸ್ಥಳ ಮಹಜರು, ಮರಣೋತ್ತರ ಪರೀಕ್ಷೆ :

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳ ಮಹಜರು ನಡೆಸಿ, ಹತ್ಯೆಯಾದ ಭುವನೇಶ್ವರಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ಬಳಿಕ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

ಬಾಲ ಮುರುಗನ್ ಹಾಗೂ ಭುವನೇಶ್ವರಿ ಸುಮಾರು 14 ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ 12 ವರ್ಷದ ಮಗ ಮತ್ತು 4 ವರ್ಷದ ಮಗಳು ಇದ್ದಾರೆ.

ಇದನ್ನು ಓದಿ : ಪೊಲೀಸ್ ವಶದಲ್ಲಿದ್ದ ಆರೋಪಿ ಸಿನಿಮೀಯ ಶೈಲಿಯಲ್ಲಿ ಪರಾರಿ; ವಿಡಿಯೋ ವೈರಲ್.

ಕೌಟುಂಬಿಕ ಕಲಹದ ಹಿನ್ನೆಲೆ :

ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಪತ್ನಿಯ ಮೇಲೆ ನಿರಂತರವಾಗಿ ಅನುಮಾನ ವ್ಯಕ್ತಪಡಿಸುತ್ತಿದ್ದ. ಈ ವಿಚಾರವೇ ದಂಪತಿ ನಡುವೆ ತೀವ್ರ ಕೌಟುಂಬಿಕ ಕಲಹಕ್ಕೆ ಕಾರಣವಾಗಿತ್ತು. ಕಲಹದಿಂದ ಬೇಸತ್ತ ಭುವನೇಶ್ವರಿ, ವಿಚ್ಛೇದನ ಪಡೆಯಲು ತೀರ್ಮಾನಿಸಿ ಕೋರ್ಟ್ ಮೂಲಕ ನೋಟಿಸ್ ಕಳುಹಿಸಿದ್ದರು.

ಆದರೆ ಆರೋಪಿ ಇದಕ್ಕೆ ಒಪ್ಪಿರಲಿಲ್ಲ. ವಾರದ ಹಿಂದೆ ವಿಚ್ಛೇದನ ನೋಟಿಸ್‌ ಬಂದ ಬಳಿಕ, ಆರೋಪಿ ಕೃತ್ಯಕ್ಕೆ ಸಂಚು ರೂಪಿಸಿದ್ದಿರಬಹುದು ಎಂಬ ಪ್ರಾಥಮಿಕ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಘಟನೆ ವಿವರ :

ಪೊಲೀಸರು ನೀಡಿರುವ ಮಾಹಿತಿಯಂತೆ, ಡಿಸೆಂಬರ್ 23, 2025 ರಂದು ಸಂಜೆ ಮಾಗಡಿ ರಸ್ತೆ ಠಾಣೆ ವ್ಯಾಪ್ತಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಭುವನೇಶ್ವರಿ ಅವರ ಮೇಲೆ ಆರೋಪಿ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಸಂಬಂಧಿತ ಸುದ್ದಿ : ಅನೈತಿಕ ಸಂಬಂಧ ಹೊಂದಿದ್ದ ಆರೋಪ ; ತಮ್ಮನನ್ನೇ ಮಣ್ಣಲ್ಲಿ ಹೋತು ಹಾಕಿದ ಅಣ್ಣ.

ಪ್ರಕರಣ ದಾಖಲಿಸಿಕೊಂಡಿರುವ ಮಾಗಡಿ ರಸ್ತೆ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ.


Disclaimer : ಈ ವರದಿ ಪೊಲೀಸ್ ಮೂಲಗಳು ಮತ್ತು ಪ್ರಾಥಮಿಕ ತನಿಖಾ ಮಾಹಿತಿಯ ಆಧಾರದ ಮೇಲೆ ತಯಾರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಅಂತಿಮವೆಂದು ಪರಿಗಣಿಸಬಾರದು.

ಅಂತರ್ಜಾತಿ ಪ್ರೀತಿಗಾಗಿ 19 ವರ್ಷದ ತಂಗಿಯ Murder ; ಸಹೋದರ, ಸ್ನೇಹಿತನ ಬಂಧನ.

0

ಜನಸ್ಫಂದನ ನ್ಯೂಸ್‌, ಹರಿಯಾಣ : ಹರಿಯಾಣದಲ್ಲಿ ಅಂತರ್ಜಾತಿ ಪ್ರೀತಿಯ ವಿಷಯವಾಗಿ 19 ವರ್ಷದ ಯುವತಿಯ ಹತ್ಯೆ (Murder) ಸಂಭವಿಸಿದ್ದು, ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸುದ್ದಿ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ತನಿಖೆಯಲ್ಲಿ, 28 ವರ್ಷದ ಯುವ ಸಹೋದರ ತನ್ನ 30 ವರ್ಷದ ಸ್ನೇಹಿತನಿಗೆ ಕೊಲೆಗೆ ಸುಪಾರಿ ನೀಡಿದ ಬಗ್ಗೆ ವಿವರಗಳು ಹೊರಬಂದಿವೆ.

ಈ ವೇಳೆ ಆರೋಪಿಯು, ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆಗೈದಿದ್ದು, ಹತ್ಯೆಗೆ ಸಂಬಂಧಿಸಿದ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಅಂತರ್ಜಾತಿ ಪ್ರೀತಿಗೆ ಸಂಬಂಧಿಸಿದ ಯುವತಿಯ Murder :

ತನಿಖಾಧಿಕಾರಿಗಳ ಪ್ರಕಾರ, ಉತ್ತರ ಪ್ರದೇಶದ ಎಟಾ ಮೂಲದ ಈ ಸಹೋದರ–ಸಹೋದರಿ ಕಳೆದ ಸುಮಾರು ಆರು ವರ್ಷಗಳಿಂದ ಹರಿಯಾಣದ ಮಾನೇಸರ್‌ನಲ್ಲಿ ವಾಸಿಸುತ್ತಿದ್ದರು.

ಸಹೋದರಿ ಬೇರೆ ಸಮುದಾಯದ 24 ವರ್ಷದ ಯುವಕನೊಂದಿಗೆ ಸಂಬಂಧ ಹೊಂದಿದ್ದಾಳೆ ಮತ್ತು ಆತನೊಂದಿಗೆ ಮದುವೆಯಾಗಲು ನಿರ್ಧರಿಸಿದ್ದಾಳೆ ಎಂದು ಸಹೋದರಿಗೆ ತಿಳಿಯಿತು. ಈ ಕಾರಣದಿಂದ, ನವೆಂಬರ್ 15ರಂದು ಸಹೋದರ ತನ್ನ ತಂಗಿಯನ್ನು ಎಟಾದಲ್ಲಿರುವ ಅವರ ಕುಟುಂಬದ ಮನೆಗೆ ಕಳುಹಿಸಿದ್ದಾನೆ.

ಆದರೆ, ಯುವತಿ ನವೆಂಬರ್ 22ರಂದು ತನ್ನ ಗೆಳೆಯನೊಂದಿಗೆ ಸೇರಲು ಮಾನೇಸರ್‌ಗೆ ಪುನಃ ಹಿಂತಿರುಗಿದ್ದಳು ಎಂದು ಸಹಾಯಕ ಪೊಲೀಸ್ ಆಯುಕ್ತ ವೀರೇಂದ್ರ ಸೈನಿ ತಿಳಿಸಿದ್ದಾರೆ.

ಸಹೋದರ ಹತ್ಯೆಯ ಯೋಜನೆ ರೂಪಿಸಿ ಸ್ನೇಹಿತನಿಗೆ ತನ್ನ ತಂಗಿಯನ್ನು ಸಂಪರ್ಕಿಸುವಂತೆ ಸೂಚಿಸಿದ್ದಾನೆ. ಆಗ ಸ್ನೇಹಿತನು ಯುವತಿಯನ್ನು ಸಂಪರ್ಕಿಸಿ, ಗೆಳೆಯನೊಂದಿಗೆ ಮದುವೆ ಮಾಡಲು ಸಹಾಯ ಮಾಡುವಂತೆ ನಾಟಕವಾಡಿ ಭೇಟಿಗೆ ಕೇಳಿಕೊಂಡಿದ್ದಾನೆ.

ಯುವತಿ ಡಿಸೆಂಬರ್ 10ರಂದು ರಾತ್ರಿ ರಾಂಪುರ ಚೌಕ್ ಬಳಿ ಆತನನ್ನು ಭೇಟಿಯಾಗಲು ಒಪ್ಪಿಕೊಂಡಳು. ಆದರೆ ಆತ ಆಕೆಗೆ ಸಹಾಯ ಮಾಡುವ ಬದಲು, ಆಕೆಯನ್ನು ಗ್ವಾಲಿಯರ್‌ನ ನಿರ್ಜನ ಪ್ರದೇಶಕ್ಕೆ ಕರೆದೊಯ್ಯುವ ಮೂಲಕ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಯುವತಿ ವಿರೋಧಿಸಿದಾಗ ಹಲ್ಲೆ ನಡೆಸಿ, ಕೊನೆಗೆ ಆಕೆಯ ಸ್ಕಾರ್ಫ್‌ನಿಂದ ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಆಕೆಯ ಶವವನ್ನು ಹೊಲವೊಂದರಲ್ಲಿ ಮರೆಮಾಡಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಅಪರಾಧದ ನಂತರ, ಇಬ್ಬರೂ ಆರೋಪಿಗಳು ತಮ್ಮ ಊರುಗಳಿಗೆ ಪರಾರಿಯಾಗಿದ್ದರು. ಸಹೋದರನು, ತನ್ನ ತಂಗಿಯ ಗೆಳೆಯನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಲು ಯತ್ನಿಸಿದ್ದರೂ, ತುರ್ತು ತನಿಖೆಯಲ್ಲಿ ಆತನೂ ಮತ್ತು ಸ್ನೇಹಿತನೂ ಅಪರಾಧ ಸ್ಥಳದಲ್ಲಿದ್ದ ದೃಢ ಸಾಕ್ಷ್ಯಗಳು ದೊರೆತಿವೆ.

ಪೊಲೀಸರು, ಇಬ್ಬರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆಂದು ತಿಳಿಸಿದ್ದಾರೆ. ಸಹೋದರ ತನ್ನ ತಂಗಿಯ ಮೇಲೆ ಸೇಡು ತೀರಿಸಿಕೊಳ್ಳಲು ಗೆಳೆಯನನ್ನು ಕೊಲೆ ಮಾಡುವಂತೆ ಸುಪಾರಿ ನೀಡಿದ್ದರೆ, ಸ್ನೇಹಿತನು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದಾನೆ ಎಂದು ಒಪ್ಪಿಕೊಂಡಿದ್ದಾರೆ.

ಸಂಬಂಧಿತ ಸುದ್ದಿ : Murder :ವಿವಾಹಿತೆ ಮತ್ತು ಆಕೆಯ ಪ್ರೇಮಿಯನ್ನು ಕೊಂದು ಬಾವಿಗೆ ಎಸೆದ ಕುಟುಂಬ.!

ಕಾನೂನು ಕ್ರಮ ಮತ್ತು ತನಿಖೆ :

ಪೊಲೀಸರು ಇಬ್ಬರೂ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ವಿವಿಧ ಸೆಕ್ಷನ್‌ಗಳಡಿ (ಕೊಲೆ, ಕ್ರಿಮಿನಲ್ ಪಿತೂರಿ) FIR ದಾಖಲಿಸಿದ್ದಾರೆ.

  • DNA ಪರೀಕ್ಷೆ: ಪ್ರಕರಣದ ದೃಢೀಕರಣಕ್ಕೆ ಡಿಎನ್ಎ ಮತ್ತು ಮರಣೋತ್ತರ ಪರೀಕ್ಷೆ ವರದಿಗಳನ್ನು ಬಳಸಿಕೊಳ್ಳಲಾಗುತ್ತಿದೆ.
  • ಆರೋಪಿಗಳ ಬಂಧನ: ಸದ್ಯ ಇಬ್ಬರೂ ಪೊಲೀಸ್ ವಶದಲ್ಲಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

ಅನೈತಿಕ ಸಂಬಂಧ ಅಥವಾ ಅಂತರ್ಜಾತಿ ವಿವಾಹದ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ‘ಗೌರವ ಹತ್ಯೆ’ಗಳು (Honor Killing) ಸಮಾಜದಲ್ಲಿ ಆತಂಕ ಮೂಡಿಸಿವೆ.

ಇನ್ನೊಂದು ಪ್ರಕರಣ : ಅಕ್ರಮ ಸಂಬಂಧದ ಅನುಮಾನ : ಯುವಕನನ್ನು ರಸ್ತೆಗೆ ಎಳೆದೊಯ್ದು ಥಳಿಸಿ Murder. 


Disclaimer : ಈ ಲೇಖನದಲ್ಲಿ ಉಲ್ಲೇಖಿತ ವಿಷಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಮೂಲಗಳ ಆಧಾರದಲ್ಲಿವೆ. ಯಾವುದೇ ಆರೋಪ ಅಥವಾ ಘಟನೆಯ ದೃಢತೆಯನ್ನು ಜನಸ್ಪಂದನ ನ್ಯೂಸ್ ಪರಿಶೀಲಿಸಿಲ್ಲ.

ಭೀಕರ ಅಪಘಾತ: ಖಾಸಗಿ ಬಸ್–ಲಾರಿ ಡಿಕ್ಕಿ, 9 ಜನ ಸಜೀವ ದಹನ.

0

ಜನಸ್ಪಂದನ ನ್ಯೂಸ್‌, ಚಿತ್ರದುರ್ಗ : ರಾಜ್ಯವನ್ನೇ ಬೆಚ್ಚಿಬೀಳಿಸುವಂತಹ ಭೀಕರ ರಸ್ತೆ ಅಪಘಾತವೊಂದು ಚಿತ್ರದುರ್ಗ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ‘ಸೀ ಬರ್ಡ್’ (Sea Bird) ಖಾಸಗಿ ಬಸ್, ವಿರುದ್ಧ ದಿಕ್ಕಿನಿಂದ ಬಂದ ಲಾರಿಯೊಂದಿಗೆ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾದ ಪರಿಣಾಮ 9 ಪ್ರಯಾಣಿಕರು ಮೃತಪಟ್ಟಿದ್ದಾರೆ.

ಈ ದುರ್ಘಟನೆ ಗುರುವಾರ ಮುಂಜಾನೆ ನಡೆದಿದೆ. ಬೆಂಗಳೂರು ನಗರದಿಂದ ರಾತ್ರಿ ಸುಮಾರು 8.30ಕ್ಕೆ ಹೊರಟಿದ್ದ ಕೆಎ 01–ಎಇ 5217 ಸಂಖ್ಯೆಯ ಸೀ ಬರ್ಡ್ ಬಸ್, ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಲಾರಿಯೊಂದು ಬಸ್‌ನ ಡೀಸೆಲ್ ಟ್ಯಾಂಕ್ ಭಾಗಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ತೀವ್ರತೆಯಿಂದ ಮೊದಲು ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬಸ್‌ಗೂ ಬೆಂಕಿ ಆವರಿಸಿದೆ.

ಬೆಂಕಿಗೆ ಸಿಲುಕಿದ ಪ್ರಯಾಣಿಕರು :

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಅಪಘಾತದ ವೇಳೆ ಬಸ್‌ನಲ್ಲಿ ಒಟ್ಟು 29 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಡೀಸೆಲ್ ಟ್ಯಾಂಕ್ ಬಳಿ ಲಾರಿ ಡಿಕ್ಕಿ ಹೊಡೆದ ಕಾರಣ ಬೆಂಕಿ ವೇಗವಾಗಿ ಹರಡಿದ್ದು, ನಿದ್ರೆಯಲ್ಲಿದ್ದ ಕೆಲ ಪ್ರಯಾಣಿಕರಿಗೆ ತಕ್ಷಣ ಹೊರಬರಲು ಸಾಧ್ಯವಾಗಿಲ್ಲ. ಈ ಪೈಕಿ 9 ಮಂದಿ ಬಸ್ ಒಳಗಡೆಯೇ ಮೃತಪಟ್ಟಿದ್ದಾರೆ.

ಉಳಿದ 18 ಪ್ರಯಾಣಿಕರು ಕಿಟಕಿಗಳು ಮತ್ತು ಎಮರ್ಜೆನ್ಸಿ ದ್ವಾರಗಳ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರನ್ನು ಸಮೀಪದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಯಾಣಿಕರ ವಿವರ :

32 ಆಸನ ಸಾಮರ್ಥ್ಯದ ಬಸ್‌ನಲ್ಲಿ 29 ಮಂದಿ ಪ್ರಯಾಣಿಸುತ್ತಿದ್ದರು. ಅವರಲ್ಲಿ 15 ಮಹಿಳೆಯರು ಮತ್ತು 14 ಪುರುಷರು ಸೇರಿದ್ದಾರೆ. ಹೆಚ್ಚಿನ ಪ್ರಯಾಣಿಕರು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮೂಲದವರಾಗಿದ್ದು, ಉಳಿದವರು ಕುಮಟಾ ಮತ್ತು ಶಿವಮೊಗ್ಗ ಮೂಲದವರಾಗಿದ್ದಾರೆ.

ಬಸ್ ಚಾಲಕ ಮತ್ತು ನಿರ್ವಾಹಕ ಸೇರಿ ಕೆಲವರು ಸಮಯಪ್ರಜ್ಞೆಯಿಂದ ಬಸ್‌ನಿಂದ ಹೊರ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್ ಸಂಸ್ಥೆಯ ಮಾಲೀಕರ ಹೇಳಿಕೆ :

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸೀ ಬರ್ಡ್ ಸಂಸ್ಥೆಯ ಮಾಲೀಕರು, ಬಸ್‌ನಲ್ಲಿ ಅಗತ್ಯವಿರುವ ಎಲ್ಲಾ ಸುರಕ್ಷತಾ ಕ್ರಮಗಳು ಮತ್ತು ಎರಡು ಎಮರ್ಜೆನ್ಸಿ ದ್ವಾರಗಳು ಇದ್ದವು ಎಂದು ತಿಳಿಸಿದ್ದಾರೆ. ಲಾರಿ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಸಂಸ್ಥೆಯ ಮಾಲೀಕರು ಆರೋಪಿಸಿದ್ದಾರೆ.

ಅಪಘಾತದ ಸಮಯದಲ್ಲಿ ಮೊಹಮ್ಮದ್ ರಫೀಕ್ ಬಸ್ ಚಾಲನೆ ಮಾಡುತ್ತಿದ್ದರು ಎಂದು ಸಂಸ್ಥೆಯು ಮಾಹಿತಿ ನೀಡಿದೆ.

ಪ್ರಯಾಣಿಕರ ಪಟ್ಟಿ ಬಿಡುಗಡೆ :

ಈ ಪಟ್ಟಿ ಅಪಘಾತದ ವೇಳೆ ಬಸ್‌ನಲ್ಲಿ ಇದ್ದ ಎಲ್ಲಾ ಪ್ರಯಾಣಿಕರ ವಿವರಗಳನ್ನು ಒಳಗೊಂಡಿದೆ. ಮೃತಪಟ್ಟವರು ಮತ್ತು ಗಾಯಗೊಂಡವರ ಗುರುತು ಪತ್ತೆ ಪ್ರಕ್ರಿಯೆ ಮುಂದುವರಿದಿದೆ. ಬಸ್‌ನ 28 ಸೀಟುಗಳು ಆನ್‌ಲೈನ್ ಮೂಲಕ ಬುಕ್ ಆಗಿದ್ದು, ರೆಡ್ ಬಸ್ ಮೂಲಕ 19 ಮತ್ತು ಅಭಿ ಬಸ್ ಮೂಲಕ 9 ಸೀಟುಗಳನ್ನು ಬುಕ್ ಮಾಡಲಾಗಿತ್ತು.

ಇದನ್ನು ಓದಿ : Car – KSRTC ಬಸ್ ಭೀಕರ ಅಪಘಾತ ; ಮೂವರು ಯುವಕರ ದುರ್ಮರಣ.

ಗೋಕರ್ಣಕ್ಕೆ ತೆರಳುತ್ತಿದ್ದವರು (24 ಜನ) :

  • ಮಂಜುನಾಥ್, ಸಂಧ್ಯಾ ಎಚ್, ಶಶಾಂಕ್ ಹೆಚ್ ವಿ, ದಿಲೀಪ್, ಪ್ರೀತಿಸ್ವರನ್, ಬಿಂದು ವಿ, ಕವಿತಾ ಕೆ, ಅನಿರುದ್ಧ್ ಬ್ಯಾನರ್ಜಿ, ಅಮೃತಾ, ಈಶಾ, ಶಶಿಕಾಂತ್ ಎಂ, ನವ್ಯಾ, ಅಭಿಷೇಕ್, ಕಿರಣ್ ಪಾಲ್ ಎಚ್, ಕೀರ್ತನ್ ಎಂ, ನಂದಿತಾ ಜಿ ಬಿ, ದೇವಿಕಾ ಎಚ್, ಗಗನಶ್ರೀ ಎಸ್, ರಸ್ಮಿ ಮಹಲೆ, ರಕ್ಷಿತಾ ಆರ್, ಸೂರಜ್, ಮಾನಸ, ಮಲ್ಲಣ್ಣ ಮತ್ತು ಹೇಮರಾಜ್ ಕುಮಾರ್.

ಕುಮಟಾಕ್ಕೆ ತೆರಳುತ್ತಿದ್ದವರು (2 ಜನ) :

  • ಮೇಘರಾಜ್, ವಿಜಯ್ ಭಂಡಾರಿ.

ಶಿವಮೊಗ್ಗಕ್ಕೆ ತೆರಳುತ್ತಿದ್ದವರು (2 ಜನ) :

  • ಮಸ್ರತುನ್ನಿಸಾ ಎಸ್ ಎನ್, ಸೈಯದ್ ಜಮೀರ್ ಗೌಸ್.

ಸಂಬಂಧಿತ ಸುದ್ದಿ : Belagavi : ನಿಪ್ಪಾಣಿ-ಮುಧೋಳ ಹೆದ್ದಾರಿಯಲ್ಲಿ ಬಸ್–ಲಾರಿ ನಡುವೆ ಭೀಕರ ಅಪಘಾತ.!

ತನಿಖೆ ಮುಂದುವರಿಕೆ :

ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಮೃತರ ಗುರುತು ಪತ್ತೆ ಕಾರ್ಯ ಪ್ರಗತಿಯಲ್ಲಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕನ ಪಾತ್ರ ಸೇರಿದಂತೆ ಎಲ್ಲಾ ಅಂಶಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Courtesy : Suvarna News


Disclaimer : ಈ ವರದಿ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳ ಆಧಾರದ ಮೇಲೆ ತಯಾರಿಸಲಾಗಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ಆರೋಪಗಳನ್ನು ಅಂತಿಮವೆಂದು ಪರಿಗಣಿಸಬಾರದು.

ಆಯುರ್ವೇದವನ್ನು ಕಡೆಗಣಿಸಿದ ಭಾರತೀಯರು; ಚೀನಿಯರ ಆರೋಗ್ಯ ಕಷಾಯ ರಹಸ್ಯ.

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಭಾರತ, ಆಯುರ್ವೇದ (Ayurveda) ದ ತವರೂರು ಎನ್ನಿಸಿಕೊಂಡಿದ್ದರೂ, ಇತ್ತೀಚಿನ ದಿನಗಳಲ್ಲಿ ಅನೇಕರು ಸಹಜ ಚಿಕಿತ್ಸಾ ಪದ್ಧತಿಗಳಿಗಿಂತ ಮಾತ್ರೆಗಳ ಮೇಲೆಯೇ ಹೆಚ್ಚಿನ ಅವಲಂಬನೆ ಇಡುತ್ತಿದ್ದಾರೆ.

ಆದರೆ ಇನ್ನೊಂದು ಕಡೆ, ಚೀನಾದಲ್ಲಿ ಕೆಲವು ಸಮುದಾಯಗಳಲ್ಲಿ ತಮ್ಮ ದೈನಂದಿನ ಜೀವನದಲ್ಲಿ ಸಹಜ ಆಹಾರ ಪದಾರ್ಥಗಳಿಂದ ತಯಾರಿಸುವ ಕಷಾಯಗಳ ಮೂಲಕ ಆರೋಗ್ಯ ಕಾಪಾಡಿಕೊಳ್ಳುತ್ತಿರುವುದು ಗಮನ ಸೆಳೆಯುವ ವಿಚಾರವಾಗಿದೆ.

ಚೀನಾದಲ್ಲಿ ಆರೋಗ್ಯದ ಕುರಿತು ವಿಶೇಷ ಜಾಗ್ರತೆ ಕಂಡುಬರುತ್ತದೆ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವುದು, ಋತುಬದಲಾವಣೆಯಿಂದ ಉಂಟಾಗುವ ಸಮಸ್ಯೆಗಳಿಂದ ದೂರ ಉಳಿಯುವುದು ಮತ್ತು ಸಾಮಾನ್ಯ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಅವರು ಮನೆಯಲ್ಲಿಯೇ ತಯಾರಿಸಬಹುದಾದ ಪಾನೀಯಗಳು ಹಾಗೂ ಕಷಾಯಗಳನ್ನು ಸೇವಿಸುತ್ತಾರೆ ಎನ್ನಲಾಗಿದೆ.

ಚೀನಾದಲ್ಲಿ ಜನಪ್ರಿಯವಾಗಿರುವ ಕಷಾಯ ಯಾವುದು?

ಚೀನಾದಲ್ಲಿ ಜನಪ್ರಿಯವಾಗಿದೆ ಎನ್ನಲಾಗುತ್ತಿರುವ ಈ ಕಷಾಯಕ್ಕೆ ಬೇಕಾಗುವ ಪದಾರ್ಥಗಳು ನಮ್ಮ ಅಡುಗೆಮನೆಯಲ್ಲಿಯೇ ಸುಲಭವಾಗಿ ಸಿಗುವಂತಹವುಗಳೇ ಆಗಿವೆ. ಇದಕ್ಕೆ ಬಳಸುವ ಪ್ರಮುಖ ಪದಾರ್ಥಗಳು ಹೀಗಿವೆ:

  • ಲಿಂಬೆಹಣ್ಣು
  • ಈರುಳ್ಳಿ
  • ಶುಂಠಿ
  • ಆರೆಂಜ್
  • ಬೆಳ್ಳುಳ್ಳಿ
  • ಚಕ್ಕೆ (ದಾಲ್ಚಿನ್ನಿ)

Note : ಈ ಕಷಾಯದ ಪದಾರ್ಥಗಳು ವಿವಿಧ ಮೂಲಗಳಲ್ಲಿ ಉಲ್ಲೇಖವಾಗಿರುವುದರಿಂದ, ಎಲ್ಲರೂ ಒಂದೇ ರೀತಿಯಲ್ಲಿ ತಯಾರಿಸುತ್ತಾರೆ ಎಂಬುದು ಕಡ್ಡಾಯವಲ್ಲ.

ಕಷಾಯವನ್ನು ತಯಾರಿಸುವ ವಿಧಾನ :

ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಂಡು ಸಣ್ಣ ತುಂಡುಗಳಾಗಿ ಕತ್ತರಿಸಬೇಕು. ನಂತರ ಅವುಗಳನ್ನು ಒಂದು ಪಾತ್ರೆಯಲ್ಲಿ ನೀರಿನೊಂದಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ಕಷಾಯ ಸ್ವಲ್ಪ ಗಾಢವಾಗುವವರೆಗೆ ಕುದಿಸಿದ ಬಳಿಕ, ಅದನ್ನು ಸೋಸಿ ಸೇವಿಸಬಹುದು.

ಈ ಪಾನೀಯವನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸುವ ಅಭ್ಯಾಸವಿದೆ ಎಂದು ತಿಳಿದುಬಂದಿದೆ.

ಈ ಪದಾರ್ಥಗಳು ಏಕೆ ಉಪಯುಕ್ತ?

ಲಿಂಬೆಹಣ್ಣು, ಶುಂಠಿ, ಬೆಳ್ಳುಳ್ಳಿ, ಚಕ್ಕೆ ಮುಂತಾದ ಪದಾರ್ಥಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇವುಗಳಲ್ಲಿ ಸಹಜವಾಗಿ ವಿಟಮಿನ್‌ಗಳು, ಖನಿಜಗಳು ಮತ್ತು ಆಂಟಿ-ಆಕ್ಸಿಡೆಂಟ್‌ಗಳು ಇರುವುದರಿಂದ, ದೇಹದ ಸಾಮಾನ್ಯ ಆರೋಗ್ಯ ಕಾಪಾಡಿಕೊಳ್ಳಲು ಸಹಾಯವಾಗಬಹುದು ಎನ್ನಲಾಗುತ್ತದೆ. ಇದಕ್ಕಾಗಿಯೇ ಇಂತಹ ಪಾನೀಯಗಳು ವಿವಿಧ ದೇಶಗಳಲ್ಲಿ ಜನಪ್ರಿಯವಾಗಿವೆ.

ಇದನ್ನು ಓದಿ : Iron content ಕೊರತೆಯ ಲಕ್ಷಣಗಳು : ಮಕ್ಕಳ ಮತ್ತು ವಯಸ್ಕರ ಆರೋಗ್ಯಕ್ಕೆ ಅಪಾಯ.

ಆಯುರ್ವೇದ ಮತ್ತು ಸಹಜ ಜೀವನಶೈಲಿ ಕುರಿತು ಚರ್ಚೆ :

ಆಯುರ್ವೇದ ಮತ್ತು ಸಹಜ ಚಿಕಿತ್ಸಾ ವಿಧಾನಗಳು ಶತಮಾನಗಳಿಂದ ಬಳಕೆಯಲ್ಲಿದ್ದರೂ, ಇಂದಿನ ವೇಗದ ಜೀವನಶೈಲಿಯಲ್ಲಿ ಅನೇಕರು ಅವುಗಳನ್ನು ಕಡೆಗಣಿಸುತ್ತಿದ್ದಾರೆ.

ಆದರೆ ಚೀನಿಯರಂತಹ ಕೆಲವು ರಾಷ್ಟ್ರಗಳು ಸಹಜ ಆಹಾರ ಪದಾರ್ಥಗಳು ಮತ್ತು ಪರಂಪರಾಗತ ಪದ್ಧತಿಗಳನ್ನು ತಮ್ಮ ಜೀವನದ ಭಾಗವನ್ನಾಗಿಸಿಕೊಂಡು ಆರೋಗ್ಯದತ್ತ ಗಮನ ಹರಿಸುತ್ತಿರುವುದು ಗಮನಾರ್ಹವಾಗಿದೆ.

ಸಂಬಂಧಿತ ಸುದ್ದಿ : ಸರ್ವ ಆರೋಗ್ಯಕ್ಕೂ ವರದಾನ ಈ Black Seed ; ತಿಂದ್ರೆ ಯಾವ ರೋಗಗಳೂ ನಿಮ್ಮ ಹತ್ತಿರ ಸುಳಿಯಲ್ಲ

ವೈದ್ಯರ ಸಲಹೆ ಅಗತ್ಯ :

ಈ ರೀತಿಯ ಕಷಾಯಗಳು ಸಾಮಾನ್ಯ ಆರೋಗ್ಯ ಪಾನೀಯಗಳಾಗಿ ಪರಿಗಣಿಸಲ್ಪಟ್ಟರೂ, ಯಾವುದೇ ನಿರ್ದಿಷ್ಟ ಆರೋಗ್ಯ ಸಮಸ್ಯೆ ಇದ್ದಲ್ಲಿ ವೈದ್ಯರ ಸಲಹೆ ಪಡೆಯುವುದು ಅಗತ್ಯ. ಎಲ್ಲರ ದೇಹದ ಸ್ಥಿತಿಯೂ ಒಂದೇ ರೀತಿಯಲ್ಲಿರುವುದಿಲ್ಲ ಎಂಬುದನ್ನು ಗಮನದಲ್ಲಿಡಬೇಕು.


Disclaimer : ಈ ಲೇಖನವು ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿ ಮಾತ್ರವಾಗಿದೆ. ಇಲ್ಲಿ ಉಲ್ಲೇಖಿಸಲಾದ ಆಹಾರ ಪದಾರ್ಥಗಳು ಯಾವುದೇ ರೋಗಕ್ಕೆ ಚಿಕಿತ್ಸೆ ನೀಡುತ್ತವೆ ಎಂಬ ಉದ್ದೇಶದಿಂದ ಈ ವರದಿಯನ್ನು ತಯಾರಿಸಲಾಗಿಲ್ಲ. ಆರೋಗ್ಯ ಸಂಬಂಧಿತ ಯಾವುದೇ ಸಮಸ್ಯೆ ಇದ್ದಲ್ಲಿ ಅರ್ಹ ವೈದ್ಯರ ಸಲಹೆ ಪಡೆಯುವುದು ಸೂಕ್ತ.