ಜನಸ್ಪಂದನ ನ್ಯೂಸ್, ಶಿಮ್ಲಾ : ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಭರ್ಮೌರ್ ಪ್ರದೇಶದಲ್ಲಿ ನಡೆದ ಮನಕಲಕುವ ಘಟನೆಯೊಂದು ದೇಶಾದ್ಯಂತ ಗಮನ ಸೆಳೆದಿದೆ. ದಟ್ಟ ಹಿಮಪಾತದ ಮಧ್ಯೆ ಮೃತಪಟ್ಟ ತನ್ನ ಮಾಲೀಕನ ಮೃತದೇಹವನ್ನು ಪಿಟ್‌ಬುಲ್ ಜಾತಿಯ ಶ್ವಾನವೊಂದು ನಿರಂತರವಾಗಿ ನಾಲ್ಕು ದಿನಗಳ ಕಾಲ ಕಾವಲು ಕಾಯ್ದ ಘಟನೆ ಪ್ರಾಣಿ ನಿಷ್ಠೆಯ ಅಪರೂಪದ ಉದಾಹರಣೆಯಾಗಿ ಹೊರಹೊಮ್ಮಿದೆ.
ಘಟನೆ ಜನವರಿ 22ರಂದು ನಡೆದಿದೆ. ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್ ಮಾಡುವ ಉದ್ದೇಶದಿಂದ ವಿಕ್ಷಿತ್ ರಾಣಾ (19) ಮತ್ತು ಅವರ ಸಂಬಂಧಿ ಆಯುಷ್ (13) ಭರ್ಮಣಿ ದೇವಾಲಯದ ಸಮೀಪದ ಎತ್ತರದ ಬೆಟ್ಟ ಪ್ರದೇಶಕ್ಕೆ ತೆರಳಿದ್ದರು. ವಿಕ್ಷಿತ್ ಅವರೊಂದಿಗೆ ಅವರ ಪೋಷ್ಯದ ಪಿಟ್‌ಬುಲ್ ನಾಯಿ ಸಹ ಇತ್ತು.
ಮಾಲೀಕನ ಶವ ಕಾವಲು ಕಾಯ್ದ ನಾಯಿ ವಿಡಿಯೋ :
A heart-wrenching incident of loyalty has emerged from Bharmour in Himachal Pradesh’s #Chamba, where a pet dog guarded its deceased owner’s body for 4 days amid severe freezing temperatures and heavy snowfall#himachalpradesh #petdog #dogs #heavysnowfall #doglovers #coldwaves pic.twitter.com/iPabWvTQVG
— Manchh (@Manchh_Official) January 27, 2026
ಈ ನಡುವೆ ಹವಾಮಾನ ಇಲಾಖೆ ಈ ಪ್ರದೇಶದಲ್ಲಿ ಭಾರೀ ಹಿಮಪಾತ ಸಂಭವಿಸುವ ಕುರಿತು ಯೆಲ್ಲೋ ಅಲರ್ಟ್ ನೀಡಿತ್ತು. ಆದರೂ ಮುನ್ನೆಚ್ಚರಿಕೆ ವಹಿಸದೆ ಅವರು ಆ ಭಾಗಕ್ಕೆ ತೆರಳಿದ್ದರು. ಸಂಜೆ ವೇಳೆಗೆ ಹವಾಮಾನ ತೀವ್ರವಾಗಿ ಹದಗೆಟ್ಟ ಪರಿಣಾಮ, ಇಬ್ಬರೂ ಯುವಕರು ಹಾಗೂ ನಾಯಿ ಹಿಮದ ಮಧ್ಯೆ ಸಿಲುಕಿಕೊಂಡರು.
ಈ ವೈರಲ್ ವಿಡಿಯೋ ಸುದ್ದಿ ಓದಿ : ಮಾಲೀಕನ ಸಾವು ; ಬಿಕ್ಕಿ ಬಿಕ್ಕಿ ಅತ್ತ ನಾಯಿಯ ಭಾವುಕ ದೃಶ್ಯ ವೈರಲ್.
ಅಪಾಯವನ್ನು ಅರಿತ ವಿಕ್ಷಿತ್ ತಮ್ಮ ಕುಟುಂಬಕ್ಕೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಜಿಲ್ಲಾಡಳಿತಕ್ಕೆ ವಿಷಯ ತಿಳಿಸಲಾಗಿ ರಕ್ಷಣಾ ಪಡೆಗಳು ಹುಡುಕಾಟ ಆರಂಭಿಸಿತು. ಆದರೆ ವ್ಯಾಪಕ ಹಿಮಪಾತ ಮತ್ತು ತೀವ್ರ ಚಳಿಯಿಂದಾಗಿ ಸ್ಥಳಕ್ಕೆ ತಲುಪುವುದು ಅಸಾಧ್ಯವಾಯಿತು.
ಮೂರು ದಿನಗಳ ಬಳಿಕ ಹೆಲಿಕಾಪ್ಟರ್ ಮೂಲಕ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ದಟ್ಟ ಹಿಮದ ನಡುವೆ ನಿಂತಿರುವ ಪಿಟ್‌ಬುಲ್ ನಾಯಿಯು ಭದ್ರತಾ ಸಿಬ್ಬಂದಿಯ ಗಮನ ಸೆಳೆಯಿತು. ಸ್ಥಳಕ್ಕೆ ಇಳಿದು ಪರಿಶೀಲಿಸಿದಾಗ ವಿಕ್ಷಿತ್ ರಾಣಾ ಅವರ ಮೃತದೇಹದ ಬಳಿಯೇ ನಾಯಿ ನಿಂತಿದ್ದುದನ್ನು ಕಂಡು ಅಧಿಕಾರಿಗಳು ಅಚ್ಚರಿಗೊಂಡರು.
Pet dog guards body of owner for 4 days amid snow in Himachal Pradesh’s Chamba pic.twitter.com/HlYo5B2ddG
— NDTV (@ndtv) January 27, 2026
ಮೃತದೇಹವನ್ನು ಕೊಂಡೊಯ್ಯಲು ಮುಂದಾದಾಗ, ನಾಯಿ ಅಪರಿಚಿತರನ್ನು ಕಂಡು ಬೊಗಳುತ್ತಾ ಶವದ ಬಳಿಗೆ ಯಾರನ್ನೂ ಹತ್ತಿರ ಬಿಡಲಿಲ್ಲ. ತೀವ್ರ ಚಳಿ ಮತ್ತು ಹಸಿವಿನಲ್ಲಿದ್ದರೂ ತನ್ನ ಮಾಲೀಕನನ್ನು ಕಾಪಾಡುವ ನಿಷ್ಠೆ ತೋರಿಸಿತು.
ಬಳಿಕ ರಕ್ಷಣಾ ಸಿಬ್ಬಂದಿ ಸುಮಾರು ಒಂದು ಗಂಟೆ ಕಾಲ ಶ್ವಾನವನ್ನು ಪ್ರೀತಿಯಿಂದ ಸಮಾಧಾನಪಡಿಸಿದ ನಂತರವೇ ಶವವನ್ನು ಸ್ಥಳಾಂತರಿಸಲು ಸಾಧ್ಯವಾಯಿತು.
ಇದನ್ನು ಓದಿ : ಆಟಿಕೆ ಗನ್‌ನಿಂದ ಶೂಟ್ ಮಾಡಿದ ಪುಟಾಣಿ; ದಪ್ಪೆಂದು ಬಿದ್ದ ಮರಿಯಾನೆ, ವಿಡಿಯೋ ವೈರಲ್
ನಂತರ ವಿಕ್ಷಿತ್ ಹಾಗೂ ಆಯುಷ್ ಅವರ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದ್ದು, ಪಿಟ್‌ಬುಲ್ ನಾಯಿಯನ್ನು ಕೂಡ ವಿಕ್ಷಿತ್ ಕುಟುಂಬಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ಕು ದಿನಗಳ ಕಾಲ ಹಿಮದ ನಡುವೆ ನಿಂತು ಮಾಲೀಕನ ಶವವನ್ನು ರಕ್ಷಿಸಿದ ಈ ಪಿಟ್‌ಬುಲ್ ನಾಯಿ ತೋರಿದ ನಿಷ್ಠೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಾಣಿಗಳಲ್ಲೂ ಅಳಿಸಲಾರದ ಪ್ರೀತಿ ಮತ್ತು ನಿಷ್ಠೆ ಅಡಗಿದೆ ಎಂಬುದಕ್ಕೆ ಈ ಘಟನೆ ಜೀವಂತ ಸಾಕ್ಷಿಯಾಗಿದೆ.
Video Courtesy : Social Media (Twitter)
Disclaimer: ಈ ವರದಿಯಲ್ಲಿರುವ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿರುವ ಸುದ್ದಿಗಳು ಹಾಗೂ ಅಧಿಕೃತ ಮೂಲಗಳ ಆಧಾರಿತವಾಗಿದೆ. ವಿಡಿಯೋ ಅಥವಾ ಚಿತ್ರಗಳು ಸಾಮಾಜಿಕ ಜಾಲತಾಣಗಳಿಂದ ಪಡೆಯಲಾಗಿದ್ದು, ಅವುಗಳ ನಿಖರತೆಗೆ ಜನಸ್ಪಂದನ ನ್ಯೂಸ್ ಹೊಣೆವಹಿಸುವುದಿಲ್ಲ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದ ಮಾತ್ರ ಈ ಸುದ್ದಿ ಪ್ರಕಟಿಸಲಾಗಿದೆ.





