ಜನಸ್ಪಂದನ ನ್ಯೂಸ್, ಡೆಸ್ಕ್ : 2026ರ ಜನವರಿಯಲ್ಲಿ ದಾಖಲೆಯ ಮಟ್ಟ ತಲುಪಿದ್ದ ಚಿನ್ನದ ಬೆಲೆ ಈಗ ದಿಢೀರ್ ಇಳಿಕೆಯಾಗುತ್ತಿರುವುದು ಮಾರುಕಟ್ಟೆಯಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಕೆಲವು ವಾರಗಳ ಹಿಂದಷ್ಟೇ ಪ್ರತಿ 10 ಗ್ರಾಂ ಚಿನ್ನದ ಬೆಲೆ 1.80 ಲಕ್ಷ ರೂಪಾಯಿಯ ಗಡಿಯನ್ನು ತಲುಪಿ ಇತಿಹಾಸ ನಿರ್ಮಿಸಿತ್ತು.
ಆದರೆ ಫೆಬ್ರವರಿ ಮಧ್ಯಭಾಗಕ್ಕೆ ಬರುವಷ್ಟರಲ್ಲಿ ಬೆಲೆ ಸುಮಾರು 1.50 ಲಕ್ಷ ರೂಪಾಯಿಯ ಮಟ್ಟಕ್ಕೆ ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿತವಾಗುವ ಸಾಧ್ಯತೆ ಇದೆ ಎಂದು ಜಾಗತಿಕ ಮಾರುಕಟ್ಟೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಆರ್ಥಿಕ ಬೆಳವಣಿಗೆಗಳ ಪರಿಣಾಮವಾಗಿ ಚಿನ್ನದ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆ ಸಂಭವಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ವಿಶೇಷವಾಗಿ ಅಮೆರಿಕ ಮತ್ತು ರಷ್ಯಾ ನಡುವಿನ ಹೊಸ ಆರ್ಥಿಕ ಸಂಬಂಧಗಳ ಬಗ್ಗೆ ಹೊರಬಿದ್ದ ಮಾಹಿತಿ ಚಿನ್ನದ ದರದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ.
ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ Bloomberg ನೀಡಿದ ವರದಿಯ ಪ್ರಕಾರ, ಡಾಲರ್ ವಿರುದ್ಧ ತೊಡೆ ತಟ್ಟಿಕೊಂಡು ನಿಂತಿದ್ದ ರಷ್ಯಾ ಇದೀಗ ಮತ್ತೆ ಅಮೆರಿಕನ್ ಡಾಲರ್ ವ್ಯವಸ್ಥೆಯತ್ತ ಮುಖ ಮಾಡುತ್ತಿದೆ ಎನ್ನಲಾಗಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೇತೃತ್ವದ ಆಡಳಿತ, ಅಮೆರಿಕದೊಂದಿಗೆ ದೊಡ್ಡ ಆರ್ಥಿಕ ಒಪ್ಪಂದಕ್ಕೆ ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಹೊರಬಂದಿದೆ.
ರಷ್ಯಾ ಮತ್ತು ಅಮೆರಿಕ ನಡುವಿನ ಈ ಹೊಸ ಆರ್ಥಿಕ ಸಹಕಾರ ಚಿನ್ನದ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆ ತರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧದ ಬಳಿಕ ಹೊಸ ಆರ್ಥಿಕ ಸಂಬಂಧಗಳಿಗೆ ದಾರಿ ಮಾಡಿಕೊಡುವ ಉದ್ದೇಶದಿಂದ ರಷ್ಯಾ ಮತ್ತೆ ಡಾಲರ್ ಆಧಾರಿತ ವಾಣಿಜ್ಯಕ್ಕೆ ಮರಳುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ.
ಈ ಒಪ್ಪಂದದಲ್ಲಿ ಪಳೆಯುಳಿಕೆ ಇಂಧನ, ನೈಸರ್ಗಿಕ ಅನಿಲ, ಕಚ್ಚಾ ತೈಲ ಸೇರಿದಂತೆ ಹಲವು ಪ್ರಮುಖ ಆರ್ಥಿಕ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆಯಂತೆ. ಈ ಬೆಳವಣಿಗೆಗಳು ಜಾಗತಿಕ ಹಣಕಾಸು ವ್ಯವಸ್ಥೆಯ ಮೇಲೆ ಮಾತ್ರವಲ್ಲ, ಚಿನ್ನದ ಬೆಲೆ ಮೇಲೂ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.
ಇತ್ತೀಚೆಗೆ ಆಕಾಶಕ್ಕೇರಿದ್ದ ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಭೂಮಿಗೆ ಇಳಿಯಬಹುದು ಎಂಬ ಆತಂಕ ಮಾರುಕಟ್ಟೆಯಲ್ಲಿ ಮೂಡಿದೆ.
ಇದಕ್ಕೂ ಮೊದಲು ಬ್ರಿಕ್ಸ್ ಒಕ್ಕೂಟದ ದೇಶಗಳು ಚಿನ್ನದ ಮಾರುಕಟ್ಟೆಯಲ್ಲಿ ಪ್ರಮುಖ ಪಾತ್ರವಹಿಸಿದ್ದವು.
BRICS ಒಕ್ಕೂಟದ ಸದಸ್ಯ ರಾಷ್ಟ್ರಗಳಾದ ರಷ್ಯಾ, ಚೀನಾ, ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಒಂದೆಡೆ ತಮ್ಮ ದೇಶದಲ್ಲಿ ಉತ್ಪಾದನೆಯಾಗುವ ಚಿನ್ನದ ರಫ್ತು ಕಡಿಮೆ ಮಾಡಿದ್ದು, ಇನ್ನೊಂದೆಡೆ ಜಾಗತಿಕ ಮಾರುಕಟ್ಟೆಯಿಂದ ಚಿನ್ನವನ್ನು ಹೆಚ್ಚಾಗಿ ಖರೀದಿಸಿವೆ.
ಇದರಿಂದ ಮಾರುಕಟ್ಟೆಯಲ್ಲಿ ಚಿನ್ನದ ಪೂರೈಕೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿ, ಬೆಲೆ ಗಗನಕ್ಕೇರಲು ಕಾರಣವಾಯಿತು ಎಂದು ತಜ್ಞರು ಹೇಳುತ್ತಾರೆ.
ಕಳೆದ ವರ್ಷ ಆರಂಭದಲ್ಲಿ 76 ಸಾವಿರ ರೂಪಾಯಿ ಇದ್ದ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಹಂತ ಹಂತವಾಗಿ ಏರಿಕೆ ಕಂಡು ಸೆಪ್ಟೆಂಬರ್ ವೇಳೆಗೆ ಒಂದು ಲಕ್ಷ ರೂಪಾಯಿ ದಾಟಿತ್ತು.
2026ರ ಜನವರಿಯಲ್ಲಿ ಒಂದೂವರೆ ಲಕ್ಷ ರೂಪಾಯಿಗೂ ಮೀರಿದ ಚಿನ್ನದ ಬೆಲೆ, ಕಳೆದ ತಿಂಗಳಾಂತ್ಯಕ್ಕೆ 1.80 ಲಕ್ಷ ರೂಪಾಯಿಯ ಸಮೀಪ ತಲುಪಿತ್ತು. ಆದರೆ ಈಗ ಜಾಗತಿಕ ಆರ್ಥಿಕ ಸಮೀಕರಣಗಳು ಬದಲಾಗುತ್ತಿರುವುದರಿಂದ ಚಿನ್ನದ ಬೆಲೆ ಇಳಿಕೆಯಾಗುವ ಹಾದಿಯಲ್ಲಿದೆ.
ಮಾರುಕಟ್ಟೆ ತಜ್ಞರ ಅಭಿಪ್ರಾಯದ ಪ್ರಕಾರ, ರಷ್ಯಾ ಮತ್ತೆ ಡಾಲರ್ ವ್ಯವಸ್ಥೆಗೆ ಮರಳಿದರೆ ಡಿ-ಡಾಲರೈಸೇಶನ್ ಅಭಿಯಾನಕ್ಕೆ ದೊಡ್ಡ ಹೊಡೆತ ಬೀಳಬಹುದು.
ಇದುವರೆಗೆ ಚಿನ್ನವನ್ನು ಹೆಚ್ಚಾಗಿ ಖರೀದಿಸುತ್ತಿದ್ದ ಕೇಂದ್ರ ಬ್ಯಾಂಕ್‌ಗಳು, ಮುಂದಿನ ದಿನಗಳಲ್ಲಿ ಚಿನ್ನದ ಮೇಲಿನ ಹೂಡಿಕೆಯನ್ನು ಕಡಿಮೆ ಮಾಡಿ ಮಾರಾಟಕ್ಕೆ ಮುಂದಾದರೆ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಾಗುವ ಸಾಧ್ಯತೆ ಇದೆ. ಆಗ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಸಂಭವಿಸಬಹುದು ಎನ್ನಲಾಗಿದೆ.
ಜಾಗತಿಕ ಆರ್ಥಿಕ ತಜ್ಞರ ಪ್ರಕಾರ, ಮುಂದಿನ ಎರಡು ವರ್ಷಗಳಲ್ಲಿ ಚಿನ್ನದ ಬೆಲೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಂಡುಬರುವ ಸಾಧ್ಯತೆ ಇದೆ. 2027ರ ಅಂತ್ಯದ ವೇಳೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಒಂದು ಔನ್ಸ್‌ಗೆ ಸುಮಾರು 3,000 ಡಾಲರ್ ಮಟ್ಟಕ್ಕೆ ಇಳಿಯಬಹುದು ಎಂದು ಅಂದಾಜಿಸಲಾಗಿದೆ.
ಭಾರತದಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂಪಾಯಿಗಿಂತ ಕೆಳಗೆ, ಅಂದರೆ 90 ಸಾವಿರದಿಂದ 1 ಲಕ್ಷ ರೂಪಾಯಿ ನಡುವಿನ ಮಟ್ಟದಲ್ಲಿ ಸ್ಥಿರವಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.
ಇದನ್ನು ಓದಿ : ಚಿನ್ನಾಭರಣ ದರೋಡೆ ಪ್ರಕರಣ : ಓರ್ವ PSI ವಜಾ, ಇನ್ನೋರ್ವ ಸಸ್ಪೆಂಡ್.
ಆದರೆ ಈ ಕುಸಿತ ಒಂದೇ ಬಾರಿ ಸಂಭವಿಸುವುದಿಲ್ಲ. ಮಧ್ಯೆ ಮಧ್ಯೆ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡರೂ, ದೀರ್ಘಾವಧಿಯಲ್ಲಿ ಇಳಿಕೆಯ ಧೋರಣೆ ಮುಂದುವರಿಯುವ ಸಾಧ್ಯತೆ ಇದೆ. ಇತ್ತೀಚೆಗೆ ದಾಖಲೆ ಮಟ್ಟ ತಲುಪಿದ್ದ ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಎಲ್ಲಿ ನಿಲ್ಲಲಿದೆ ಎಂಬುದನ್ನು ಮಾರುಕಟ್ಟೆ ಕಾದು ನೋಡುತ್ತಿದೆ. (ಏಜೇನ್ಸಿಸ್)
Disclaimer : ಈ ಸುದ್ದಿಯಲ್ಲಿ ನೀಡಿರುವ ಮಾಹಿತಿಗಳು ಜಾಗತಿಕ ಮಾರುಕಟ್ಟೆ ವರದಿಗಳು ಹಾಗೂ ಆರ್ಥಿಕ ತಜ್ಞರ ವಿಶ್ಲೇಷಣೆಗಳ ಆಧಾರಿತವಾಗಿವೆ. ಚಿನ್ನದ ಬೆಲೆಗಳು ಮಾರುಕಟ್ಟೆಯ ಸ್ಥಿತಿಗತಿಗಳ ಅನುಸಾರ ಏರಿಳಿತವಾಗುವ ಸಾಧ್ಯತೆ ಇದೆ. ಹೂಡಿಕೆ ಮಾಡುವ ಮುನ್ನ ವೈಯಕ್ತಿಕ ಆರ್ಥಿಕ ಸಲಹೆಗಾರರ ಸಲಹೆ ಪಡೆಯುವುದು ಒಳಿತು. ಸುದ್ದಿ ಪ್ರಕಟಣೆ ಮಾಹಿತಿ ಉದ್ದೇಶಕ್ಕಾಗಿ ಮಾತ್ರ.




