ಜನಸ್ಪಂದನ ನ್ಯೂಸ್, ಧಾರವಾಡ : ಧಾರವಾಡ ಜಿಲ್ಲೆಯ ಹೊರವಲಯದಲ್ಲಿ ಯುವತಿಯೊಬ್ಬರನ್ನು ಭೀಕರ ಹತ್ಯೆ ಮಾಡಿ, ಶವವನ್ನು ಬೇರೆ ಸ್ಥಳಕ್ಕೆ ತಂದು ಎಸೆದಿರುವ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ 19 ವರ್ಷದ ಝಕಿಯಾ ಎಂಬ ಯುವತಿ ಮೃತಪಟ್ಟಿರುವುದು ದೃಢಪಟ್ಟಿದೆ.
ಮೃತ ಯುವತಿ ಧಾರವಾಡ ನಗರದ ಗಾಂಧಿ ಚೌಕ್ ಪ್ರದೇಶದ ನಿವಾಸಿ ಆಗಿದ್ದು, ಪ್ಯಾರಾಮೆಡಿಕಲ್ ಶಿಕ್ಷಣ ಮುಗಿಸಿ ಉದ್ಯೋಗ ಹುಡುಕುತ್ತಿದ್ದಳು ಎಂದು ತಿಳಿದುಬಂದಿದೆ.
ಘಟನೆ ಹೇಗೆ ನಡೆಯಿತು?
ಮಂಗಳವಾರ ಸಂಜೆ ಝಕಿಯಾ “ಲ್ಯಾಬ್‌ಗೆ ಹೋಗಿ ಬರುತ್ತೇನೆ” ಎಂದು ಮನೆಯಿಂದ ಹೊರಟಿದ್ದಳು. ಆದರೆ ರಾತ್ರಿ ಆದರೂ ಮನೆಗೆ ಹಿಂದಿರುಗದ ಕಾರಣ ಕುಟುಂಬಸ್ಥರು ಆತಂಕಗೊಂಡು ಹುಡುಕಾಟ ಆರಂಭಿಸಿದ್ದರು.
ಇಂದು ಮುಂಜಾನೆ ಮನಸೂರು ರಸ್ತೆಯಲ್ಲಿರುವ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಸೇರಿದ ವಿನಯ್ ಡೈರಿ ಸಮೀಪ ಯುವತಿಯ ಶವ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಯುವತಿಯನ್ನು ಬೇರೆಡೆ ಬರ್ಬರವಾಗಿ ಹತ್ಯೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವವನ್ನು ಇಲ್ಲಿ ತಂದು ಬಿಸಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಪೊಲೀಸ್ ತನಿಖೆ ಆರಂಭ :
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವಿದ್ಯಾಗಿರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಯುವತಿಯ ಮೊಬೈಲ್ ಕರೆ ವಿವರಗಳು ಹಾಗೂ ಕೊನೆಯಾಗಿ ಸಂಪರ್ಕಿಸಿದ ವ್ಯಕ್ತಿಗಳ ಮಾಹಿತಿ ಆಧರಿಸಿ ತನಿಖೆ ಚುರುಕುಗೊಂಡಿದೆ.
ಇದನ್ನು ಓದಿ : ಧಾರವಾಡ : ಕ್ಷುಲ್ಲಕ ಜಗಳಕ್ಕೆ ಶಾಲಾ ಬಾಲಕರಿಂದ SSLC ವಿದ್ಯಾರ್ಥಿ ಹತ್ಯೆ.
ಭೀಕರ ಹತ್ಯೆ ; ಕುಟುಂಬಸ್ಥರ ಆಕ್ರಂದನ :
ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮನಕಲಕುವಂತಿತ್ತು. “ಕೆಲಸ ಹುಡುಕುತ್ತಿದ್ದ ಮಗಳಿಗೆ ಇಂತಹ ದುರಂತ ಆಗಬಾರದಿತ್ತು” ಎಂದು ಕಣ್ಣೀರಿಟ್ಟ ಕುಟುಂಬಸ್ಥರು, ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
Disclaimer: ಈ ವರದಿ ಪೊಲೀಸ್ ಮೂಲಗಳು ಮತ್ತು ಲಭ್ಯ ಮಾಹಿತಿಯ ಆಧಾರದ ಮೇಲೆ ತಯಾರಿಸಲಾಗಿದೆ. ತನಿಖೆ ಮುಂದುವರಿದಿರುವ ಕಾರಣ ಹೆಚ್ಚಿನ ಮಾಹಿತಿ ಬಳಿಕ ಲಭ್ಯವಾಗಲಿದೆ.





