ಜನಸ್ಪಂದನ ನ್ಯೂಸ್, ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ನಡೆದ ಭೀಕರ ಹತ್ಯೆಯೊಂದು ಇದೀಗ ಸಿನಿಮಾವನ್ನೇ ಮೀರಿಸುವ ರೀತಿಯಲ್ಲಿ ಬೆಳಕಿಗೆ ಬಂದಿದೆ. ಅಣ್ಣನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಆರೋಪದ ಹಿನ್ನಲೆಯಲ್ಲಿ ತಮ್ಮನನ್ನೇ ಕೊಂದು ಮಣ್ಣಿನಲ್ಲಿ ಹೂತು, ಬಳಿಕ ನಾಟಕೀಯವಾಗಿ ಮಿಸ್ಸಿಂಗ್ ದೂರು ನೀಡಿದ್ದ ಅಣ್ಣನ ಅಸಲಿ ಮುಖವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
28 ವರ್ಷದ ರಾಮಚಂದ್ರ ಎಂಬ ಯುವಕ ಈ ಹತ್ಯೆಯ ಬಲಿಯಾಗಿದ್ದು, ಆತನ ಸಹೋದರ ಮಾಲತೇಶ್‌ನೇ ಕೊಲೆ ಆರೋಪಿಯಾಗಿದ್ದಾನೆ. ರಾಮಚಂದ್ರ ಕೂಲಿ ಕೆಲಸ ಮಾಡಿಕೊಂಡಿದ್ದು, ಇನ್ನೂ ಮದುವೆಯಾಗಿರಲಿಲ್ಲ. ತನಿಖೆ ಪ್ರಕಾರ, ರಾಮಚಂದ್ರ ಮತ್ತು ಅಣ್ಣನ ಪತ್ನಿ ಭಾಗ್ಯ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ.
ಅನೈತಿಕ ಸಂಬಂಧಕ್ಕೆ ಎಚ್ಚರಿಕೆ ; ಆದರೂ ಮುಂದುವರಿದ ಸರಸ :
ತಮ್ಮನ ಮತ್ತು ಪತ್ನಿಯ ಸಂಬಂಧದ ಬಗ್ಗೆ ತಿಳಿದುಕೊಂಡಿದ್ದ ಮಾಲತೇಶ್, ಇಬ್ಬರಿಗೂ ಹಲವು ಬಾರಿ ಎಚ್ಚರಿಕೆ ನೀಡಿದ್ದ. ಆದರೆ ರಾಮಚಂದ್ರ ತನ್ನ ನಡತೆಯನ್ನು ಬದಲಾಯಿಸದೆ ಮುಂದುವರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ತೀವ್ರ ಕೋಪಗೊಂಡ ಮಾಲತೇಶ್, ತಮ್ಮನನ್ನು ದೂರಮಾಡುವ ನಿರ್ಧಾರ ಕೈಗೊಂಡಿದ್ದಾನೆ.
ಮದುವೆ ನೆಪದಲ್ಲಿ ಕರೆದುಕೊಂಡು ಹೋಗಿ ಹತ್ಯೆ :
ರಾಮಚಂದ್ರನಿಗೆ “ನಿನಗೆ ಬೇಗ ಮದುವೆ ಆಗಲಿ, ಸ್ವಾಮೀಜಿಯ ಬಳಿ ಪೂಜೆ ಮಾಡಿಸೋಣ” ಎಂದು ನಂಬಿಸಿ, ಮಾಲತೇಶ್ ಆತನನ್ನು ಮಂಜುನಾಥ್ ಎಂಬವರ ತೋಟಕ್ಕೆ ಕರೆದುಕೊಂಡು ಹೋಗಿದ್ದಾನೆ.
ಅಲ್ಲಿ ಮದ್ಯಪಾನ ಮಾಡಿಸಿ, ಕೈಕಾಲು ಕಟ್ಟಿ, ಕುಂಕುಮ ಹಾಗೂ ಲಿಂಬೆಹಣ್ಣು ನೀಡಿ ಪೂಜೆ ನೆಪದಲ್ಲಿ ಹಗ್ಗದಿಂದ ಕತ್ತು ಹಿಸುಕಿ ಕೊಂದಿರುವುದು ತನಿಖೆಯಿಂದ ತಿಳಿದುಬಂದಿದೆ. ಬಳಿಕ ಶವವನ್ನು ತೋಟದಲ್ಲೇ ಗುಂಡಿ ತೋಡಿ ಹೂತು ಹಾಕಲಾಗಿದೆ.
ಕೊಲೆ ಮಾಡಿ ಮಿಸ್ಸಿಂಗ್ ದೂರು – ಶಂಕೆ ತಪ್ಪಿಸಲು ಯತ್ನ :
ಕೊಲೆ ಬಳಿಕ ಮಾಲತೇಶ್ ತಾನೇ ಸೊರಬ ಪೊಲೀಸ್ ಠಾಣೆಗೆ ಹೋಗಿ “ತಮ್ಮ ರಾಮಚಂದ್ರ ಕಾಣೆಯಾಗಿದ್ದಾನೆ” ಎಂದು ದೂರು ನೀಡಿದ್ದ. ನಿತ್ಯ ಪೊಲೀಸ್ ಠಾಣೆಗೆ ತೆರಳಿ ವಿಚಾರಣೆ ನಡೆಸುತ್ತಿದ್ದಂತೆ ನಟಿಸಿದ್ದಾನೆ. ಇದರಿಂದ ಕುಟುಂಬದವರಿಗೂ ಆರಂಭದಲ್ಲಿ ಅನುಮಾನ ಬಂದಿರಲಿಲ್ಲ.
ಸೊಸೆಯ ಒಪ್ಪಿಗೆ – ಕೊಲೆ ರಹಸ್ಯ ಬಹಿರಂಗ :
45 ದಿನಗಳಾದರೂ ರಾಮಚಂದ್ರ ಮನೆಗೆ ವಾಪಸ್ ಆಗದ ಹಿನ್ನೆಲೆಯಲ್ಲಿ ತಾಯಿ ಗೌರಮ್ಮ ಆತಂಕಗೊಂಡು ಮತ್ತೊಮ್ಮೆ ಪೊಲೀಸರ ಮೊರೆ ಹೋಗಿದ್ದಾರೆ. ಈ ವೇಳೆ, ಸೊಸೆ ಭಾಗ್ಯ ತನ್ನ ಹಾಗೂ ರಾಮಚಂದ್ರನ ನಡುವಿನ ಅನೈತಿಕ ಸಂಬಂಧ ಮತ್ತು ಅದರಿಂದ ಮಾಲತೇಶ್‌ನೇ ಕೊಲೆ ಮಾಡಿರುವ ಶಂಕೆಯನ್ನು ಬಾಯಿಬಿಟ್ಟಿದ್ದಾಳೆ.
ತಾಯಿ ಗೌರಮ್ಮ ನೇರವಾಗಿ ಮಾಲತೇಶ್‌ನನ್ನು ಪ್ರಶ್ನಿಸಿದಾಗ, “ಅವನ ಕಥೆ ಮುಗಿದಿದೆ, ಇನ್ನೇನು ಕೇಳಬೇಡ” ಎಂದು ಹೇಳಿದ್ದಾನೆ ಎನ್ನಲಾಗಿದೆ. ಬಳಿಕ ಒತ್ತಡದ ವಿಚಾರಣೆಗೆ ಒಳಗಾದ ಮಾಲತೇಶ್, ಶವ ಹೂತಿದ್ದ ಸ್ಥಳವನ್ನು ಪೊಲೀಸರಿಗೆ ತೋರಿಸಿದ್ದಾನೆ.
ಪೊಲೀಸ್ ತನಿಖೆ ಮುಂದುವರಿಕೆ :
ಪೊಲೀಸರು ಸ್ಥಳದಿಂದ ಅವಶೇಷಗಳನ್ನು ಹೊರತೆಗೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅನೈತಿಕ ಸಂಬಂಧ, ಕುಟುಂಬದೊಳಗಿನ ವೈಮನಸ್ಸು ಮತ್ತು ಪೂರ್ವಯೋಜಿತ ಹತ್ಯೆ ಎಂಬ ಅಂಶಗಳ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
Courtesy : News 18 ಕನ್ನಡ






