ಜನಸ್ಪಂದನ ನ್ಯೂಸ್, ಬೆಂಗಳೂರು : ರಾಜ್ಯದಲ್ಲಿ ಅನರ್ಹವಾಗಿ ಬಿಪಿಎಲ್ (BPL ಕಾರ್ಡ್) ಪಡಿತರ ಚೀಟಿ ಹೊಂದಿರುವವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಮುಂದುವರಿಸಿದೆ. ಕಳೆದ ಐದು ತಿಂಗಳಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಡೆಸಿದ ವಿಶೇಷ ಪರಿಶೀಲನಾ ಕಾರ್ಯಾಚರಣೆಯಲ್ಲಿ ಲಕ್ಷಾಂತರ ಕಾರ್ಡ್‌ಗಳ ಮೇಲೆ ಕ್ರಮ ಕೈಗೊಳ್ಳಲಾಗಿದ್ದು, ಅನರ್ಹ ಫಲಾನುಭವಿಗಳಿಗೆ ಭಾರಿ ಆಘಾತ ಎದುರಾಗಿದೆ.
ಸರ್ಕಾರದ ಮಾಹಿತಿಯ ಪ್ರಕಾರ, ಕಳೆದ 5 ತಿಂಗಳ ಅವಧಿಯಲ್ಲಿ ಒಟ್ಟು 15.12 ಲಕ್ಷಕ್ಕೂ ಹೆಚ್ಚು ಜನರಿಗೆ ಸಂಬಂಧಿಸಿದ ಪಡಿತರ ಕಾರ್ಡ್‌ಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಅನರ್ಹರಾಗಿರುವವರನ್ನು ಗುರುತಿಸಿ ಕೆಲವು ಕಾರ್ಡ್‌ಗಳನ್ನು ಶಾಶ್ವತವಾಗಿ ರದ್ದುಪಡಿಸಲಾಗಿದ್ದು, ಹಲವು ಕಾರ್ಡ್‌ಗಳನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ (APL) ಪರಿವರ್ತಿಸಲಾಗಿದೆ.
5 ತಿಂಗಳ ಕಾರ್ಯಾಚರಣೆ – ಪ್ರಮುಖ ಅಂಕಿಅಂಶಗಳು :
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಿರುವ ವಿವರಗಳ ಪ್ರಕಾರ:
- ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತನೆಗೊಂಡ ಕಾರ್ಡ್‌ಗಳು: 4.09 ಲಕ್ಷ (14,68,540 ಫಲಾನುಭವಿಗಳು).
- ಶಾಶ್ವತವಾಗಿ ರದ್ದಾದ ಬಿಪಿಎಲ್ ಕಾರ್ಡ್‌ಗಳು: 5,632 (9,826 ಫಲಾನುಭವಿಗಳು).
- ತಾತ್ಕಾಲಿಕವಾಗಿ ಅಮಾನತ್ತಾದ ಬಿಪಿಎಲ್ ಕಾರ್ಡ್‌ಗಳು: 23,068 (34,617 ಫಲಾನುಭವಿಗಳು).
ಈ ಕ್ರಮದಿಂದ ರಾಜ್ಯದಲ್ಲಿ ಪಡಿತರ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕವಾಗಿಸಲು ಸರ್ಕಾರ ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದಾಯ ಮಿತಿ ಪರಿಷ್ಕರಣೆ ಬಗ್ಗೆ ಚರ್ಚೆ :
ಇದಕ್ಕೂ ಮೊದಲು ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ. ಹೆಚ್. ಮುನಿಯಪ್ಪ ಅವರು BPL ಕಾರ್ಡ್ ಪಡೆಯಲು ಇರುವ ಆದಾಯ ಮಿತಿಯನ್ನು ಪರಿಷ್ಕರಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದ್ದರು.
ಪ್ರಸ್ತುತ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಬಿಪಿಎಲ್ ಕಾರ್ಡ್ ಪಡೆಯಲು ವಾರ್ಷಿಕ ಆದಾಯ ಮಿತಿ ₹1.20 ಲಕ್ಷ ಎಂದು ನಿಗದಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೂಲಿ ಕಾರ್ಮಿಕರಿಗೆ ದಿನಕ್ಕೆ ಸುಮಾರು ₹500 ವರೆಗೆ ಸಂಬಳ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಅವರ ವಾರ್ಷಿಕ ಆದಾಯವೂ ₹1.80 ಲಕ್ಷದಷ್ಟಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಆದಾಯ ಮಿತಿಯನ್ನು ಪರಿಷ್ಕರಿಸುವ ಕುರಿತು ಚರ್ಚೆ ನಡೆಯುತ್ತಿರುವುದಾಗಿ ಸಚಿವರು ಹೇಳಿದ್ದರು. ಇದರಿಂದ ಮಿತಿಗಿಂತ ಸ್ವಲ್ಪ ಹೆಚ್ಚು ಆದಾಯ ಹೊಂದಿದ್ದರೂ ಬಿಪಿಎಲ್ ಕಾರ್ಡ್ ಪಡೆದಿರುವ ಹಲವರಲ್ಲಿ ಆಶಾಭಾವನೆ ಮೂಡಿತ್ತು.
ಅನರ್ಹರಿಗೆ BPL ಕಾರ್ಡ್ ಅವಕಾಶ ಇಲ್ಲ – ಸರ್ಕಾರದ ಸಂದೇಶ :
ಆದರೆ ಇತ್ತೀಚಿನ ಕಾರ್ಯಾಚರಣೆಯಿಂದ ಅಕ್ರಮವಾಗಿ ಅಥವಾ ಅನರ್ಹವಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸರ್ಕಾರ ಯಾವುದೇ ರಿಯಾಯಿತಿ ನೀಡುವುದಿಲ್ಲ ಎಂಬ ಸಂದೇಶ ಸ್ಪಷ್ಟವಾಗಿದೆ. ಅಧಿಕಾರಿಗಳು ರಾಜ್ಯದ ವಿವಿಧ ಭಾಗಗಳಲ್ಲಿ ಪರಿಶೀಲನೆ ನಡೆಸಿ ಅನರ್ಹರನ್ನು ಗುರುತಿಸುವ ಕಾರ್ಯವನ್ನು ಮುಂದುವರೆಸಿದ್ದಾರೆ.
ಅರ್ಹರಿಗೆ ಕಾರ್ಡ್ ಸಿಗುತ್ತಿಲ್ಲ BPL ಕಾರ್ಡ್ ; ಜನರ ಆಕ್ರೋಶ :
ಇದಕ್ಕೆ ಸಂಬಂಧಿಸಿದಂತೆ ಜನಸಾಮಾನ್ಯರಿಂದಲೂ ಅಸಮಾಧಾನ ವ್ಯಕ್ತವಾಗುತ್ತಿದೆ. ನಿಜವಾಗಿಯೂ ಬಡತನದಲ್ಲಿ ಜೀವನ ನಡೆಸುತ್ತಿರುವ ಹಲವರಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ. ಆದರೆ ಕಾರು, ಬಂಗಲೆ, ಜಮೀನು ಸೇರಿದಂತೆ ಉತ್ತಮ ಆಸ್ತಿ ಹೊಂದಿರುವ ಕೆಲವರು ಇನ್ನೂ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಹೀಗಾಗಿ ಸರ್ಕಾರ ಅನರ್ಹರನ್ನು ಕಟ್ಟುನಿಟ್ಟಾಗಿ ಗುರುತಿಸಿ ಅವರ ಕಾರ್ಡ್‌ಗಳನ್ನು ರದ್ದುಪಡಿಸಬೇಕು. ಜೊತೆಗೆ ಕಡು ಬಡವರು, ದಿನಗೂಲಿ ದುಡಿದು ಜೀವನ ನಡೆಸುವವರಿಗೆ ಆದ್ಯತೆಯಾಗಿ ಬಿಪಿಎಲ್ ಕಾರ್ಡ್ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಇದನ್ನು ಓದಿ : ಲಿಫ್ಟ್ ಯಾಂತ್ರಿಕ ದೋಷದಿಂದ ಅಪ್ಪಚ್ಚಿಯಾದ ವ್ಯಕ್ತಿ: ಆಘಾತಕಾರಿ ವಿಡಿಯೋ ವೈರಲ್.
ಬಡವರ ಹಕ್ಕು ಕಾಪಾಡಲು ಕ್ರಮ ಅಗತ್ಯ :
ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಪಡಿತರ ವ್ಯವಸ್ಥೆ ಬಡವರಿಗೆ ನೆರವಾಗುವ ಪ್ರಮುಖ ಯೋಜನೆಯಾಗಿದೆ. ಆದ್ದರಿಂದ ಕಾರ್ಯಾಚರಣೆ ನಡೆಸುವಾಗ ನಿಜವಾದ ಬಡವರ ಕಾರ್ಡ್ ಕಿತ್ತುಕೊಳ್ಳದೆ, ಅನರ್ಹವಾಗಿ ಸೌಲಭ್ಯ ಪಡೆಯುತ್ತಿರುವವರ ಮೇಲೆ ಮಾತ್ರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ರಾಜ್ಯ ಸರ್ಕಾರದ ಈ ಕಾರ್ಯಾಚರಣೆ ಮುಂದುವರಿದರೆ ಪಡಿತರ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚುವುದರ ಜೊತೆಗೆ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ತಲುಪುವ ನಿರೀಕ್ಷೆ ವ್ಯಕ್ತವಾಗಿದೆ.




