ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರು ಗ್ರಾಹಕ ನ್ಯಾಯಾಲಯವು, ವಧು ಹುಡುಕಿ ಕೊಡದ ಮ್ಯಾಟ್ರಿಮೋನಿ ಪೋರ್ಟಲ್ಗೆ ದಂಡ ವಿಧಿಸಿದ ಘಟನೆ ನಡೆದಿದೆ.
ಮ್ಯಾಟ್ರಿಮೋನಿ ಪೋರ್ಟಲ್ ವಧು ಹುಡುಕಿ ಕೊಡಲು ವಿಫಲವಾದ ಹಿನ್ನೆಲೆ ಗ್ರಾಹಕ ನ್ಯಾಯಾಲಯ 60 ಸಾವಿರ ದಂಡ ವಿಧಿಸಿದೆ.
ಬೆಂಗಳೂರಿನ ಎಂಎಸ್ ನಗರದ ನಿವಾಸಿ ಕೆಎಸ್ ವಿಜಯಕುಮಾರ್ ಎಂಬವರು ತಮ್ಮ ಮಗ ಬಾಲಾಜಿಗೆ ಮದುವೆ ಮಾಡಲು ಹೆಣ್ಣು ಹುಡುಕಾಡುತ್ತಿದ್ದರು. ಹೀಗಾಗಿ ದಿಲ್ಮಿಲ್ ಮ್ಯಾಟ್ರಿಮೋನಿ ಪೋರ್ಟಲ್ಗೆ ಅವರು ಭೇಟಿ ನೀಡಿದ್ದರು. ಈ ವೇಳೆ 45 ದಿನಗಳಲ್ಲಿ ವರನಿಗೆ ವಧು ಹುಡುಕುವುದಾಗಿ ಸಂಸ್ಥೆ ಭರವಸೆ ನೀಡಿತ್ತು ಎಂದು ತಿಳಿದು ಬಂದಿದೆ.
ವಿಜಯಕುಮಾರ್ ಮಾರ್ಚ್ 17ರಂದು ತಮ್ಮ ಮಗನ ಪೋಟೋ, ಎಲ್ಲಾ ದಾಖಲೆಗಳನ್ನು ನೀಡಿದ್ದರು. ವಧು ಹುಡುಕಲು ಶುಲ್ಕ ಎಂದು 30 ಸಾವಿರ ಪಡೆದಿದ್ದರು. ಆದರೆ, ದಿಲ್ಮಿಲ್ ಮ್ಯಾಟ್ರಿಮೋನಿ, 45 ದಿನಗಳಲ್ಲಿ ಹೆಣ್ಣು ಹುಡುಕುವಲ್ಲಿ ವಿಫಲವಾಯಿತು.
ಬಾಲಾಜಿ ಕೂಡ ಮ್ಯಾಟ್ರಿಮೋನಿ ಕಚೇರಿಗೆ ಸಾಕಷ್ಟು ಬಾರಿ ಅಲೆದಾಡಿ, ಹಣ ವಾಪಸ್ ಕೊಡುವಂತೆ ಕೇಳಿದ್ದರು. ಆದರೆ, ಕಚೇರಿಯ ಸಿಬ್ಬಂದಿ ಹಣವನ್ನು ಪಾವತಿಸಲು ನಿರಾಕರಿಸಿ, ನಿಂದಿಸಿದ್ದಾರೆ. ಇದರಿಂದ ಬಾಲಾಜಿ ಅವರು ಮನನೊಂದಿದ್ದರು ಎನ್ನಲಾಗಿದೆ.
ಮೇ 9ರಂದು ಬಾಲಾಜಿ ಅವರು, ಹೆಣ್ಣು ಹುಡುಕಲು ವಿಫಲವಾದ ದಿಲ್ಮಿಲ್ ಮ್ಯಾಟ್ರಿಮೋನಿಗೆ ಲೀಗಲ್ ನೋಟಿಸ್ ಕಳುಹಿಸಿದ್ದರು. ಆದರೆ ಮ್ಯಾಟ್ರಿಮೋನಿ ಪ್ರತಿಕ್ರಿಯೆ ನೀಡದ ಹಿನ್ನೆಲೆ ನ್ಯಾಯಾಲಯ ದಂಡ ವಿಧಿಸಿ ಆದೇಶ ಹೊರಡಿಸಿದೆ.
ದೂರುದಾರರು ನೀಡಿದ 30,000 ರೂ. ಜೊತೆಗೆ ಸೇವಾ ಕೊರತೆಗೆ 20 ಸಾವಿರ ರೂ., ವ್ಯಾಜ್ಯಕ್ಕೆ 5,000 ರೂ., ಮಾನಸಿಕ ಸಂಕಟಕ್ಕೆ 5,000 ರೂ.ನ್ನು ಮರುಪಾವತಿಸಲು ನ್ಯಾಯಾಲಯ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ