ಜನಸ್ಪಂದನ ನ್ಯೂಸ್, ಉತ್ತರ ಪ್ರದೇಶ : ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ಭಾನುವಾರ ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಹುಲ್ಲು ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಬೊಲೆರೊ ವಾಹನದ ಮೇಲೆ ಉರುಳಿ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಈ ಅಪಘಾತಕ್ಕೆ ಸಂಬಂಧಿಸಿದ ದೃಶ್ಯಾವಳಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ವಿವರಗಳ ಪ್ರಕಾರ, ರಾಂಪುರ ಜಿಲ್ಲೆಯ ನೈನಿತಾಲ್ ರಾಷ್ಟ್ರೀಯ ಹೆದ್ದಾರಿಯ ಪಹಾಡಿ ಗೇಟ್ ಛೇದಕದ ಬಳಿ ಇರುವ ಸ್ಥಳೀಯ ವಿದ್ಯುತ್ ಉಪಕೇಂದ್ರದ ಸಮೀಪ ಈ ಅಪಘಾತ ಸಂಭವಿಸಿದೆ.
ಬೊಲೆರೊ ಮೇಲೆ ಉರುಳಿದ ಟ್ರಕ್‌ನ ವಿಡಿಯೋ :
🚨 After-accident visuals
Traffic movement disrupted at the intersection after an overloaded lorry overturned on a Bolero. Police and locals seen managing the situation.#SupremeCourt pic.twitter.com/SUQ8844UJD
— Mohammed Faizan Shaikh (@king7851007) December 29, 2025
Courtesy : Social Media
ಬಿಲಾಸ್ಪುರ್ ಕಡೆಗೆ ಸಾಗುತ್ತಿದ್ದ ಹುಲ್ಲು ತುಂಬಿದ ಲಾರಿ ರಸ್ತೆ ವಿಭಜಕದ ಮೇಲೆ ಹತ್ತಿದ ಪರಿಣಾಮ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ. ಈ ವೇಳೆ ಪಕ್ಕದಲ್ಲೇ ಚಲಿಸುತ್ತಿದ್ದ ಬೊಲೆರೊ ವಾಹನದ ಮೇಲೆ ಲಾರಿ ಉರುಳಿ ಬಿದ್ದಿದೆ.
ಅಪಘಾತದ ಪರಿಣಾಮ ಬೊಲೆರೊ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದರ ಚಾಲಕ ಫಿರಾಸತ್ (54) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಗುಜರ್ತೋಲಾ ಗ್ರಾಮದ ನಿವಾಸಿ ಎಂದು ಪೊಲೀಸರು ಗುರುತಿಸಿದ್ದಾರೆ.
ಅಪಘಾತಕ್ಕೀಡಾದ ಬೊಲೆರೊ ವಾಹನವು ವಿದ್ಯುತ್ ಇಲಾಖೆಗೆ ಸೇರಿದ್ದು, ಅದರ ಮೇಲೆ “ಉತ್ತರ ಪ್ರದೇಶ ಸರ್ಕಾರ” ಎಂಬ ಬರಹವಿದ್ದುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದ್ವಿಚಕ್ರ ವಾಹನ ಸವಾರರು ಅಪಾಯದಿಂದ ಪಾರು :
ಅದೇ ಸಮಯದಲ್ಲಿ ಪಕ್ಕದ ರಸ್ತೆಯಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನ ಸವಾರರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಅಪಘಾತದ ಹೊಡೆತಕ್ಕೆ ಅವರ ಬೈಕ್‌ಗೆ ಹಾನಿಯಾಗಿದೆ ಎನ್ನಲಾಗಿದೆ.
ಘಟನೆಯ ಮಾಹಿತಿ ಲಭಿಸಿದ ತಕ್ಷಣ ಪೊಲೀಸರು, ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಜೆಸಿಬಿ ಮತ್ತು ಕ್ರೇನ್ ಸಹಾಯದಿಂದ ಬೊಲೆರೊ ಮೇಲೆ ಉರುಳಿದ್ದ ಲಾರಿಯನ್ನು ಮೇಲಕ್ಕೆ ಎತ್ತಿ, ರಸ್ತೆಯನ್ನು ತೆರವುಗೊಳಿಸಲಾಯಿತು.
ನಂತರ ಮೃತದೇಹವನ್ನು ಹೊರತೆಗೆದು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ರಾಂಪುರ ಪೊಲೀಸ್ ವರಿಷ್ಠಾಧಿಕಾರಿ ವಿದ್ಯಾಸಾಗರ್ ಮಿಶ್ರಾ, ಅಪಘಾತದ ಸ್ಥಳದಲ್ಲಿ ತಕ್ಷಣವೇ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಬೊಲೆರೊ ವಾಹನದೊಳಗೆ ಒಬ್ಬ ವ್ಯಕ್ತಿ ಮಾತ್ರ ಇದ್ದು, ಲಾರಿ ಅಥವಾ ಹುಲ್ಲಿನ ಕೆಳಗೆ ಇನ್ನಾರೂ ಸಿಲುಕಿಲ್ಲ ಎಂಬುದನ್ನು ಅವರು ದೃಢಪಡಿಸಿದ್ದಾರೆ.
ಇದನ್ನು ಓದಿ : Car – KSRTC ಬಸ್ ಭೀಕರ ಅಪಘಾತ ; ಮೂವರು ಯುವಕರ ದುರ್ಮರಣ.
ಪೊಲೀಸ್ ಎಚ್ಚರಿಕೆ :
ಹೆದ್ದಾರಿಗಳಲ್ಲಿ ಹೆಚ್ಚುತ್ತಿರುವ ಭಾರೀ ವಾಹನ ಸಂಚಾರ ಹಾಗೂ ನಿರ್ಲಕ್ಷ್ಯ ಚಾಲನೆ ಗಂಭೀರ ಅಪಾಯಕ್ಕೆ ಕಾರಣವಾಗುತ್ತಿದ್ದು, ಜನನಿಬಿಡ ಪ್ರದೇಶಗಳಲ್ಲಿ ವಾಹನ ಚಾಲಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣಗಳ ಕುರಿತು ತನಿಖೆ ಮುಂದುವರಿದಿದೆ.
ಇದನ್ನು ಓದಿ : Car – KSRTC ಬಸ್ ಭೀಕರ ಅಪಘಾತ ; ಮೂವರು ಯುವಕರ ದುರ್ಮರಣ.
Disclaimer : ಈ ಲೇಖನವು ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಆಧಾರದಲ್ಲಿದೆ. ತನಿಖೆ ಮುಂದುವರಿದಿರುವುದರಿಂದ ಮುಂದಿನ ಮಾಹಿತಿಯಲ್ಲಿ ಬದಲಾವಣೆ ಸಂಭವಿಸುವ ಸಾಧ್ಯತೆ ಇದೆ.





