ಜನಸ್ಪಂದನ ನ್ಯೂಸ್, ಬೆಂಗಳೂರು : ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ರಾಜ್ಯಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಬರೋಬ್ಬರಿ 7,76,206 ಅನುಮಾನಾಸ್ಪದ ರೇಷನ್ ಕಾರ್ಡ್‌ಗಳನ್ನು ಪತ್ತೆಹಚ್ಚಿದ್ದು, ಈ ಪೈಕಿ 4.50 ಲಕ್ಷ ಅನರ್ಹ BPL ಕಾರ್ಡ್ (ಬಿಪಿಎಲ್) ಗಳನ್ನು ರದ್ದುಪಡಿಸಲಾಗಿದೆ. ಅನರ್ಹ ವ್ಯಕ್ತಿಗಳು ಬಿಪಿಎಲ್ ಸೌಲಭ್ಯ ಪಡೆಯುತ್ತಿರುವುದು ಇಲಾಖೆಯ ಪರಿಶೀಲನೆಯಲ್ಲಿ ಬಹಿರಂಗವಾಗಿದೆ.
ಆಹಾರ ಇಲಾಖೆಯ ಮಾಹಿತಿ ಪ್ರಕಾರ, ಹೆಚ್ಚಿನ ಆದಾಯ ಹೊಂದಿದ್ದರೂ, ಆದಾಯ ತೆರಿಗೆ ಪಾವತಿದಾರರಾಗಿದ್ದರೂ, ಜಿಎಸ್‌ಟಿ ನೋಂದಾಯಿತ ವ್ಯಾಪಾರಿಗಳಾಗಿದ್ದರೂ ಅನೇಕರು BPL ಕಾರ್ಡ್ ಪಡೆದು ಸರಕಾರದ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ವಿವಿಧ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಪಟ್ಟಿಯಿಂದ ಸುಮಾರು 14.50 ಲಕ್ಷ ಹೆಸರುಗಳನ್ನು ಕೈಬಿಡಲಾಗಿದೆ.
ಪರಿಶೀಲನೆ ವೇಳೆ ಮೃತ ವ್ಯಕ್ತಿಗಳ ಹೆಸರಿನಲ್ಲಿ ಹಾಗೂ ನಕಲಿ ದಾಖಲೆಗಳ ಆಧಾರದ ಮೇಲೆ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಿಂದ ಉಚಿತ ಪಡಿತರ ಪಡೆಯುತ್ತಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ.
ಈ ಕುಟುಂಬಗಳಿಗೆ ನೀಡಲಾಗುತ್ತಿದ್ದ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವೂ ಸ್ಥಗಿತಗೊಳಿಸಲಾಗಿದೆ. ಈ ಒಂದೇ ಯೋಜನೆಯಿಂದ ಸರ್ಕಾರಕ್ಕೆ ಪ್ರತಿ ತಿಂಗಳು ಸುಮಾರು 90 ಕೋಟಿ ರೂಪಾಯಿ ಉಳಿತಾಯವಾಗುತ್ತಿದೆ ಎಂದು ಇಲಾಖೆ ಅಂದಾಜಿಸಿದೆ.
ಈ ಅನರ್ಹ ಫಲಾನುಭವಿಗಳಿಗೆ ತಿಂಗಳಿಗೆ 72.50 ಲಕ್ಷ ಕ್ವಿಂಟಲ್ ಪಡಿತರ ವಿತರಿಸಲಾಗುತ್ತಿತ್ತು, ಇದಕ್ಕೆ ಸರ್ಕಾರಕ್ಕೆ ಸುಮಾರು 22 ಕೋಟಿ ರೂಪಾಯಿ ವೆಚ್ಚವಾಗುತ್ತಿತ್ತು. ಕಾರ್ಡ್‌ಗಳ ರದ್ದತಿಯಿಂದ ಈ ವೆಚ್ಚವೂ ತಪ್ಪಿದೆ.
BPL ಕಾರ್ಡ್ ರದ್ದುಗೊಳಿಸುವ ಪ್ರಮುಖ ಕಾರಣಗಳು :
ಆಹಾರ ಇಲಾಖೆಯು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಕೆಳಕಂಡವರ ವಿರುದ್ಧ ಕ್ರಮ ಕೈಗೊಂಡಿದೆ:
- ವಾರ್ಷಿಕ 1.20 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಹೊಂದಿರುವವರು.
- ಜಿಎಸ್‌ಟಿ ಪಾವತಿದಾರರು.
- ಹೊರ ರಾಜ್ಯಗಳಲ್ಲಿಯೂ ಪಡಿತರ ಚೀಟಿ ಹೊಂದಿರುವವರು.
- ಒಂದೇ ಕುಟುಂಬಕ್ಕೆ ಎರಡು ಪಡಿತರ ಚೀಟಿ ಹೊಂದಿರುವವರು.
- 7.5 ಎಕರೆಗಿಂತ ಹೆಚ್ಚು ಕೃಷಿಭೂಮಿ ಹೊಂದಿರುವವರು.
- ಶತಾಯುಷಿಗಳು.
- 6ರಿಂದ 12 ತಿಂಗಳ ಅವಧಿಯಲ್ಲಿ ಒಮ್ಮೆಯೂ ಪಡಿತರ ಪಡೆಯದವರು.
ಪ್ರತಿ ಪಡಿತರ ಅಂಗಡಿ ವ್ಯಾಪ್ತಿಯಲ್ಲಿ ಸರಾಸರಿ 10 BPL ಕಾರ್ಡ್‌ಗಳನ್ನು ರದ್ದುಪಡಿಸುವ ಕಾರ್ಯ ನಡೆಯುತ್ತಿದೆ.
ವಾಪಸ್ ಪಡೆಯಲು ಅವಕಾಶ :
ಅರ್ಹತೆ ಇದ್ದರೂ ಆದಾಯದ ಗೊಂದಲ ಅಥವಾ ದಾಖಲೆ ದೋಷದಿಂದ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ, ಸಂಬಂಧಿಸಿದವರು ಅಗತ್ಯ ದಾಖಲೆಗಳೊಂದಿಗೆ ಆಹಾರ ಇಲಾಖೆ ಕಚೇರಿ ಅಥವಾ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಬಹುದು.
ಪರಿಶೀಲನೆಯ ನಂತರ ಅರ್ಹತೆ ಸಾಬೀತಾದಲ್ಲಿ ಬಿಪಿಎಲ್ ಕಾರ್ಡ್ ಮರು ನೀಡಲು ಸರ್ಕಾರ ಸೂಚನೆ ನೀಡಿದೆ. ಜಿಲ್ಲೆಯಲ್ಲಿ ಈಗಾಗಲೇ 84 ಅರ್ಹರಿಗೆ ಬಿಪಿಎಲ್ ಕಾರ್ಡ್ ವಾಪಸ್ ನೀಡಲಾಗಿದೆ.
ಇನ್ನಷ್ಟು ರದ್ದು ಸಾಧ್ಯತೆ :
ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲೇ ಇದುವರೆಗೂ 13,427 BPL ಕಾರ್ಡ್ ಗಳನ್ನು ರದ್ದುಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ 3 ಸಾವಿರಕ್ಕೂ ಹೆಚ್ಚು ಕಾರ್ಡ್‌ಗಳು ರದ್ದಾಗುವ ಸಾಧ್ಯತೆ ಇದೆ. ಈ ಪ್ರಕ್ರಿಯೆ ನಿರಂತರವಾಗಿದ್ದು, ಕಾಲಕಾಲಕ್ಕೆ ಪರಿಶೀಲನೆ ಮುಂದುವರಿಯಲಿದೆ.
ಇದನ್ನು ಓದಿ : 3.65 ಲಕ್ಷ ಅನರ್ಹ BPL Ration Card ರದ್ದು ; ನೋಟಿಸ್ ನೀಡಲು ಆಹಾರ ಇಲಾಖೆ ಕ್ರಮ.!
ಬಿಪಿಎಲ್ ಕಾರ್ಡ್ ರದ್ದಾದರೆ ಸ್ವಯಂಚಾಲಿತವಾಗಿ ಅನ್ನಭಾಗ್ಯ, ಗೃಹಲಕ್ಷ್ಮಿ ಸೇರಿದಂತೆ ಹಲವು ಸರ್ಕಾರಿ ಯೋಜನೆಗಳ ಸೌಲಭ್ಯಗಳು ನಿಲ್ಲುತ್ತವೆ. ಹೀಗಾಗಿ ಅನರ್ಹ ಫಲಾನುಭವಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಅರ್ಹರಿಗೆ ನ್ಯಾಯ ಒದಗಿಸುವ ದಿಕ್ಕಿನಲ್ಲಿ ಆಹಾರ ಇಲಾಖೆ ಕಟ್ಟುನಿಟ್ಟಿನ ಕ್ರಮ ಮುಂದುವರೆಸಿದೆ.





