ಜನಸ್ಪಂದನ ನ್ಯೂಸ್, ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ 19 ವರ್ಷದ ಖಾಸಗಿ ಕಾಲೇಜು ವಿದ್ಯಾರ್ಥಿನಿ ತನ್ನದೇ ಪರಿಚಿತ ಯುವಕರ ವಿರುದ್ಧ ಸಾಮೂಹಿಕ ಅತ್ಯಾಚಾರ ಆರೋಪ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇತ್ತೀಚೆಗೆ ಇದೇ ಯುವತಿಯ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಹನಿಟ್ರ್ಯಾಪ್ (Honeytrap) ಪ್ರಕರಣ ದಾಖಲಾಗಿದ್ದ ಹಿನ್ನೆಲೆಯಲ್ಲೇ ಇದೀಗ ಈ ಹೊಸ ದೂರು ಬೆಳಕಿಗೆ ಬಂದಿರುವುದು ಗಮನಾರ್ಹವಾಗಿದೆ.
ಜಕ್ಕೂರಿನ ವಿಲ್ಲಾದಲ್ಲಿ ಘಟನೆ ಆರೋಪ :
ಯುವತಿಯ ದೂರಿನ ಪ್ರಕಾರ, 2026ರ ಜನವರಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಡಿಕ್ಸನ್ ಸಾಂಡ್ರಾ (21) ಎಂಬಾತನ ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಫೆಬ್ರವರಿ 14ರಂದು ಡಿಕ್ಸನ್ ಜಕ್ಕೂರಿನಲ್ಲಿರುವ ವಿಲ್ಲಾವೊಂದರಲ್ಲಿ ನಡೆಯುವ ಪಾರ್ಟಿಗೆ ಆಹ್ವಾನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಫೆಬ್ರವರಿ 15ರ ಮುಂಜಾನೆ ಸುಮಾರು 1.15ರ ಹೊತ್ತಿಗೆ ತನ್ನ ಸ್ನೇಹಿತೆಯೊಂದಿಗೆ ವಿಲ್ಲಾಗೆ ತೆರಳಿದ್ದೆ. ಅಲ್ಲಿ ಡಿಕ್ಸನ್ ತನ್ನ ಗೆಳೆಯ ನಿಖಿಲ್ (35) ಎಂಬಾತನನ್ನು ಪರಿಚಯಿಸಿದ್ದ. ಪಾರ್ಟಿಯ ವೇಳೆ ಡಿಕ್ಸನ್ ಹಾಗೂ ನಿಖಿಲ್ ಸೇರಿ ಬಲವಂತವಾಗಿ ಗುಲಾಬಿ ಬಣ್ಣದ ಮಾತ್ರೆಯನ್ನು ಸೇವಿಸಲು ಒತ್ತಾಯಿಸಿದ್ದು, ಬಳಿಕ ತಾನು ಪ್ರಜ್ಞಾಹೀನಳಾಗಿದ್ದೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜ್ಞಾಹೀನ ಸ್ಥಿತಿಯಲ್ಲಿ ದೌರ್ಜನ್ಯ ಆರೋಪ :
ಪ್ರಜ್ಞಾಹೀನ ಸ್ಥಿತಿಯಲ್ಲಿ ತನ್ನನ್ನು ಕೊಠಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಯುವತಿ ಆರೋಪಿಸಿದ್ದಾರೆ. ಎಚ್ಚರವಾದಾಗ ತನ್ನ ಉಡುಪು ಅಸ್ತವ್ಯಸ್ತವಾಗಿದ್ದು, ಪಕ್ಕದಲ್ಲಿ ನಿಖಿಲ್ ಇದ್ದುದನ್ನು ಕಂಡು ಆತಂಕಗೊಂಡೆ ಎಂದು ತಿಳಿಸಿದ್ದಾರೆ.
ಇದರ ನಂತರ ಡಿಕ್ಸನ್ ಕೂಡ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಕುರಿತು ಯಾರಿಗೂ ಹೇಳಿದರೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
A 19-year-old private college student in Bengaluru was allegedly drugged and gang-raped by her boyfriend and his friend. The incident occurred in Jukkur, where the victim was laced with a pink tablet and sexually assaulted while unconscious. The accused, Dixin and Nikhil,…
— ANI (@ANI) February 23, 2026
ಎಫ್‌ಐಆರ್ ದಾಖಲು, ತನಿಖೆ ಆರಂಭ :
ಯುವತಿಯ ದೂರಿನ ಆಧಾರದ ಮೇಲೆ ನಿಖಿಲ್ ಹಾಗೂ ಡಿಕ್ಸನ್ ಸಾಂಡ್ರಾ ವಿರುದ್ಧ ಫೆಬ್ರವರಿ 22ರಂದು ಎಫ್‌ಐಆರ್ ದಾಖಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಮೃತಹಳ್ಳಿ ಪೊಲೀಸ್ ಠಾಣೆ ಪೊಲೀಸರು ವೈದ್ಯಕೀಯ ಪರೀಕ್ಷೆ ಸೇರಿದಂತೆ ವಿವಿಧ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.
ಆರೋಪಿಗಳ ಪೈಕಿ ನಿಖಿಲ್ ಹಾಸನ ಜಿಲ್ಲೆಯ ಮೂಲದವನು ಎಂಬ ಮಾಹಿತಿ ಲಭ್ಯವಾಗಿದೆ. ತನಿಖೆಯ ಭಾಗವಾಗಿ ಸಂಬಂಧಿತ ಸ್ಥಳದ ಪರಿಶೀಲನೆ, ಸಿಸಿಟಿವಿ ದೃಶ್ಯಗಳ ಸಂಗ್ರಹ ಮತ್ತು ಮೊಬೈಲ್ ಡೇಟಾ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ : ಮಹಿಳೆಗೆ ಬಲವಂತವಾಗಿ Drinks ಕುಡಿಸಿ ಸಾಮೂಹಿಕ ಅತ್ಯಾಚಾರ ; 4 ಜನರ ಬಂಧನ.
ಕಾನೂನು ಕ್ರಮಗಳು ಮುಂದುವರಿಕೆ :
ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದು, ಆರೋಪಿಗಳ ವಿಚಾರಣೆ ಪ್ರಗತಿಯಲ್ಲಿದೆ. ಪ್ರಕರಣದ ನಿಖರ ಸತ್ಯಾಸತ್ಯತೆ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Disclaimer : ಈ ಸುದ್ದಿಯಲ್ಲಿ ನೀಡಿರುವ ಮಾಹಿತಿಗಳು ಸಂಬಂಧಿತ ವ್ಯಕ್ತಿ ನೀಡಿದ ದೂರಿನ ಆಧಾರಿತವಾಗಿವೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಆರೋಪಗಳು ಇನ್ನೂ ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ. ಸಂಬಂಧಿತ ಎಲ್ಲ ವ್ಯಕ್ತಿಗಳು ನ್ಯಾಯಾಲಯದ ತೀರ್ಪು ಬರುವವರೆಗೆ ಕಾನೂನುಬದ್ಧವಾಗಿ ನಿರ್ದೋಷಿಗಳೆಂದು ಪರಿಗಣಿಸಲಾಗುತ್ತದೆ. ಸಂತ್ರಸ್ತೆಯ ಗೌಪ್ಯತೆ ಕಾಪಾಡುವ ಉದ್ದೇಶದಿಂದ ಯಾವುದೇ ವೈಯಕ್ತಿಕ ವಿವರಗಳನ್ನು ಪ್ರಕಟಿಸಲಾಗಿಲ್ಲ. ಹೆಚ್ಚಿನ ಅಧಿಕೃತ ಮಾಹಿತಿ ಲಭ್ಯವಾದಂತೆ ಸುದ್ದಿಯನ್ನು ನವೀಕರಿಸಲಾಗುತ್ತದೆ.




