ಜನಸ್ಪಂದನ ನ್ಯೂಸ್, ಆರೋಗ್ಯ: ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡದ ಕಲ್ಲು (ಕಿಡ್ನಿ ಸ್ಟೋನ್ / Kidney Stone) ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಈ ಸಮಸ್ಯೆ ಎದುರಾದಾಗ ಹಲವರು ಮನೆಯಲ್ಲಿಯೇ ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತಾರೆ. ಅದರಲ್ಲೂ, “ಬಿಯರ್ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಕರಗುತ್ತದೆ” ಎಂಬ ಮಾತು ಜನಸಾಮಾನ್ಯರಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ಆದರೆ ಈ ಮಾತಿನಲ್ಲಿ ಎಷ್ಟು ಸತ್ಯವಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ವೈದ್ಯಕೀಯ ವಿಜ್ಞಾನದ ಪ್ರಕಾರ, ಬಿಯರ್ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ತಜ್ಞರ ಅಭಿಪ್ರಾಯದಂತೆ, ಬಿಯರ್ ಕಲ್ಲುಗಳನ್ನು ಕರಗಿಸುವುದಕ್ಕಿಂತಲೂ ಮೂತ್ರಪಿಂಡಕ್ಕೆ ಹೆಚ್ಚುವರಿ ಹಾನಿ ಉಂಟುಮಾಡುವ ಸಾಧ್ಯತೆ ಹೆಚ್ಚು ಎಂದು ಎಚ್ಚರಿಸಲಾಗಿದೆ.
ತಜ್ಞರ ವಿವರದಂತೆ, ಬಿಯರ್ ಒಂದು ಮೂತ್ರವರ್ಧಕ ಪಾನೀಯ. ಅಂದರೆ, ಬಿಯರ್ ಸೇವಿಸಿದ ನಂತರ ಹೆಚ್ಚು ಬಾರಿ ಮೂತ್ರ ವಿಸರ್ಜನೆ ಆಗುತ್ತದೆ. ಇದರಿಂದ ದೇಹದಲ್ಲಿನ ನೀರಿನ ಪ್ರಮಾಣ ವೇಗವಾಗಿ ಕಡಿಮೆಯಾಗುತ್ತದೆ ಮತ್ತು ನಿರ್ಜಲೀಕರಣ ಉಂಟಾಗುತ್ತದೆ.
ವಾಸ್ತವವಾಗಿ, ಕಿಡ್ನಿ ಸ್ಟೋನ್ ಹೊರಬರಲು ದೇಹದಲ್ಲಿ ಸಾಕಷ್ಟು ನೀರಿರಬೇಕು. ಆದರೆ ಬಿಯರ್ ದೇಹವನ್ನು ನೀರಿಲ್ಲದ ಸ್ಥಿತಿಗೆ ತಳ್ಳುವ ಮೂಲಕ ಕಲ್ಲುಗಳನ್ನು ಇನ್ನಷ್ಟು ಗಟ್ಟಿಯಾಗುವಂತೆ ಮಾಡುತ್ತದೆ.
ಇದಲ್ಲದೆ, ಬಿಯರ್‌ನಲ್ಲಿ ಪ್ಯೂರಿನ್ ಎಂಬ ಅಂಶ ಹೆಚ್ಚಾಗಿ ಇರುವುದರಿಂದ, ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟ ಹೆಚ್ಚಾಗುತ್ತದೆ. ನಿರಂತರವಾಗಿ ಬಿಯರ್ ಸೇವಿಸುವವರಲ್ಲಿ ಈ ಯೂರಿಕ್ ಆಸಿಡ್ ಹೆಚ್ಚಳ ಹೊಸ ಕಲ್ಲುಗಳ ರಚನೆಯನ್ನು ವೇಗಗೊಳಿಸುವ ಸಾಧ್ಯತೆ ಇರುತ್ತದೆ.
ವೈದ್ಯರ ಪ್ರಕಾರ, ಮೂತ್ರಪಿಂಡದ ಕಲ್ಲು 5 ಮಿಲಿಮೀಟರ್‌ಗಿಂತ ದೊಡ್ಡದಾಗಿದ್ದರೆ, ಯಾವುದೇ ಪಾನೀಯವನ್ನು ಕುಡಿಯುವುದರಿಂದ ಅದು ತಾನಾಗಿಯೇ ಹೊರಬರುವುದಿಲ್ಲ. ಬಿಯರ್ ಕುಡಿಯುವುದರಿಂದ ಮೂತ್ರದ ಒತ್ತಡ ಹೆಚ್ಚಾದರೆ, ಕಲ್ಲು ಮೂತ್ರನಾಳದಲ್ಲಿ ಸಿಲುಕಿಕೊಳ್ಳುವ ಅಪಾಯವಿದ್ದು, ಇದು ತೀವ್ರವಾದ ನೋವು ಹಾಗೂ ಸೋಂಕುಗಳಿಗೆ ಕಾರಣವಾಗಬಹುದು.
ತಾತ್ಕಾಲಿಕವಾಗಿ ಹೆಚ್ಚುವರಿ ಮೂತ್ರ ವಿಸರ್ಜನೆಯಿಂದ ಸಮಸ್ಯೆ ಕಡಿಮೆಯಾದಂತೆ ಭಾಸವಾದರೂ, ದೀರ್ಘಾವಧಿಯಲ್ಲಿ ಬಿಯರ್ ಯಕೃತ್ತು ಹಾಗೂ ಮೂತ್ರಪಿಂಡಗಳಿಗೆ ಗಂಭೀರ ಹಾನಿಯನ್ನುಂಟುಮಾಡುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಇದನ್ನು ಓದಿ : ಎಂದಿಗೂ ನಿರ್ಲಕ್ಷಿಸಬಾರದ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು.
ಆದ್ದರಿಂದ, ಕಿಡ್ನಿ ಸ್ಟೋನ್ ಸಮಸ್ಯೆ ಎದುರಾದಾಗ ಸ್ವಯಂ-ಔಷಧಿ ಅಥವಾ ತಪ್ಪು ನಂಬಿಕೆಗಳ ಬದಲು ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸರಿಯಾದ ಚಿಕಿತ್ಸೆ ಪಡೆಯುವುದು ಅತ್ಯಂತ ಅಗತ್ಯ.
ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟಲು ದಿನಕ್ಕೆ ಕನಿಷ್ಠ 3–4 ಲೀಟರ್ ನೀರು ಕುಡಿಯುವುದು, ನಿಂಬೆ ರಸ ಸೇವಿಸುವುದು ಹಾಗೂ ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ.
Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತಿರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.





