ಜನಸ್ಪಂದನ ನ್ಯೂಸ್, ಬೆಳಗಾವಿ : ಹಠಯೋಗಿ ಎಂದು ಹೇಳಿಕೊಂಡಿದ್ದ ಲೋಕೇಶ್ವರ ಮಹಾಸ್ವಾಮಿ (30) ಮೇಲೆ ಬಾಲಕಿ ಅಪಹರಣ ಮತ್ತು ಅತ್ಯಾಚಾರ ಆರೋಪ ಸಾಬೀತಾಗಿದೆ.
ಬೆಳಗಾವಿಯ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯ-01 ಶನಿವಾರ (ದಿ.20) ತೀರ್ಪು ಪ್ರಕಟಿಸಿದೆ. ಆರೋಪಿಗೆ ಒಟ್ಟು 35 ವರ್ಷಗಳ ಕಠಿಣ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲಾಗಿದೆ.
ಅಪಹರಣ ಮತ್ತು ಅತ್ಯಾಚಾರ ಹಿನ್ನಲೆ :
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಮೇಖಳಿ ಗ್ರಾಮದಲ್ಲಿ, ಕಲಬುರ್ಗಿ ಜಿಲ್ಲೆ ಚಿತ್ತಾಪುರ ಮೂಲದ ಲೋಕೇಶ್ವರ ಮಹಾಸ್ವಾಮಿ 2025 ರ ಮೇ 13ರಂದು 17 ವರ್ಷದ ಅಪ್ರಾಪ್ತ ಬಾಲಕಿಯನ್ನು ತಮ್ಮ ಕಾರಿನಲ್ಲಿ “ನಿಮ್ಮ ಮನೆಗೆ ಬಿಡುತ್ತೇನೆ” ಎಂದು ತಪ್ಪು ಆಶ್ವಾಸನೆ ನೀಡಿ, ಕರೆದುಕೊಂಡು ಹೋಗಿ ಅಪಹರಣ ಮಾಡಿದ್ದ.
ನಂತರ, ಮಹಾಲಿಂಗಪುರ ಮಾರ್ಗದಿಂದ ಬಾಗಲಕೋಟೆ ಮತ್ತು ಆಂಧ್ರಪ್ರದೇಶದ ಲಾಡ್ಜ್ಗಳಿಗೆ ಕರೆದೊಯ್ದು, ಬಾಲಕಿಯ ಮೇಲೆ ಒತ್ತಾಯ ಪೂರ್ವಕವಾಗಿ ಲೈಂಗಿಕ ಅತ್ಯಾಚಾರ ನಡೆಸಿದ್ದನೆಂದು ತನಿಖೆಯಲ್ಲಿ ಖಚಿತವಾಗಿದೆ.
ಈ ವೇಳೆ, ಬಾಲಕಿಗೆ ಜೀವ ಬೆದರಿಕೆ ಹಾಕಿ, “ಈ ಬಗ್ಗೆ ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವಂತ ಬಿಡುವುದಿಲ್ಲ” ಎಂದು ಹೇಳಿದ್ದರು. ಈ ಪ್ರಕರಣವು ಬೆಳಗಾವಿ ಜಿಲ್ಲೆಯ ಮೂಡಲಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಪೊಲೀಸರು ಮತ್ತು ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯದ ತನಿಖಾಧಿಕಾರಿಗಳು ಸಮಗ್ರ ತನಿಖೆ ನಡೆಸಿದರು.
ಇದನ್ನು ಓದಿ : Home ಬಾಡಿಗೆದಾರರಿಗೆ ʼಮನೆ ಸ್ವಾಧೀನʼ ಹೊಂದುವ ಹಕ್ಕಿಲ್ಲ : ಸುಪ್ರೀಂ ಕೋರ್ಟ್ ತೀರ್ಪು.!
ಶಿಕ್ಷೆಯ ವಿವರ :
ಇದೀಗ ನ್ಯಾಯಾಲಯವು ಒಟ್ಟು 8 ಸಾಕ್ಷಿಗಳ ವಿಚಾರಣೆ, 78 ದಾಖಲೆ ಮತ್ತು 9 ಮುದ್ದೆ ಮಾಲುಗಳ ಆಧಾರದ ಮೇಲೆ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿತು. ಶಿಕ್ಷೆಯ ವಿವರಗಳು ಈ ಕೆಳಗಿನಂತಿವೆ,
- 35 ವರ್ಷಗಳ ಕಠಿಣ ಶಿಕ್ಷೆ.
- 1 ಲಕ್ಷ ರೂ. ದಂಡ (ತಪ್ಪಿದರೆ 2 ವರ್ಷ ಕಾರಾಗೃಹ).
- ಬಿಎನ್ಎಸ್ ಕಲಂ 137 (2) ಪ್ರಕಾರ 7 ವರ್ಷ, ರೂ. 25,000 ದಂಡ.
- ಕಲಂ 351 ಪ್ರಕಾರ 2 ವರ್ಷ, ರೂ. 3,000 ದಂಡ.
- ಕಲಂ 64 ಪ್ರಕಾರ 10 ವರ್ಷ, ರೂ. 50,000 ದಂಡ. ನ್ಯಾಯಾಲಯವು ನೋಂದ ಬಾಲಕಿಗೆ ಜಿಲ್ಲಾಧಿಕಾರದ ಮೂಲಕ 4 ಲಕ್ಷ ರೂ. ಪರಿಹಾರ ಹಣ ನೀಡಲು ಆದೇಶಿಸಿದೆ. ಪರಿಹಾರ ಹಣವನ್ನು ಐದು ವರ್ಷಗಳ ಕಾಲ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿ ಇರಿಸಲು ಸೂಚಿಸಲಾಗಿದೆ.
ಇದನ್ನು ಓದಿ : Attendance ಕೊರತೆಯಿಂದ ಪರೀಕ್ಷೆಗೆ ತಡೆ ಬೇಡ ; ಹೈಕೋರ್ಟ್ನಿಂದ ಮಹತ್ವದ ತೀರ್ಪು.!
ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ಸರಕಾರದ ಪರವಾಗಿ ವಾದ ಮಂಡಿಸಿದ್ದರು. ಪ್ರಕರಣವು ಮಕ್ಕಳ ಸುರಕ್ಷತೆ, ಕಾನೂನು ಅನುಷ್ಠಾನ ಮತ್ತು ನ್ಯಾಯನಿಷ್ಠೆಯ ಕುರಿತು ಪ್ರಜಾ ಜಾಗೃತಿ ಮೂಡಿಸುವಂತಾಗಿದೆ.






