ಜನಸ್ಪಂದನ ನ್ಯೂಸ್, ಬೆಂಗಳೂರು : ಆರೋಪಿಗಳನ್ನು ಅರೆಸ್ಟ್ ಮಾಡಲು ತೆರಳಿದ್ದ ಪೊಲೀಸರನ್ನು ಗ್ರಾಮಸ್ಥರು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ ಘಟನೆ ಬಿಹಾರದ ಪುರ್ಬಿ ಸರಿಯಾ ಪಂಚಾಯತ್ ವಾರ್ಡ್ ನಂ.3ರಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಈ ಘಟನೆಯಲ್ಲಿ ಸಬ್ ಇನ್ಸ್ಪೆಕ್ಟರ್ ಸೋನು ಕುಮಾರ್ ಅವರ ತಲೆಬುರುಡೆಗೆ ಮೂಳೆ ಮುರಿತವಾಗಿದೆ. ಹೋಂಗಾರ್ಡ್ ಜವಾನ್ ಮುನ್ನಾ ಪಾಸ್ವಾನ್ ಎಂಬುವವರು ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಪೊಲೀಸರು, ಶಂಭು ಭಗತ್ ಅವರ ಮಗನನ್ನು ಬಂಧಿಸಲು ಹೋಗಿದ್ದರು. ಅವರ ವಿರುದ್ಧ ಕಿಡ್ನ್ಯಾಪ್ ಕೇಸ್ ದಾಖಲಾಗಿತ್ತು. ಆರೋಪಿಗಳಿಬ್ಬರು, ಇಬ್ಬರು ಬಾಲಕಿಯರನ್ನು ಅಪಹರಿಸಿದ್ದಾರೆ ಎಂ ಆರೋಪ ಕೇಳಿಬಂದಿತ್ತು.
ಹೀಗಾಗಿ ಯುವಕನ ಬಗ್ಗೆ ವಿಚಾರಿಸಲು ಬಂದ ವೇಳೆ ಅವನ ಕುಟುಂಬ ಮತ್ತು ಅಕ್ಕಪಕ್ಕದ ಮನೆಯವರ ತಂಡವು ರಾಡ್ ಮತ್ತು ಕೋಲುಗಳಿಂದ ಪೊಲೀಸರನ್ನು ಥಳಿಸಿದರು.
ಘಟನೆಯ ಹಿನ್ನೆಲೆ :
ಮೋತಿಹರಿಯ ಪಹರ್ಪುರದ ಪೊಲೀಸ್ ಠಾಣೆಯಲ್ಲಿ ಇಬ್ಬರು ಬಾಲಕಿಯರ ಅಪಹರಣ ಪ್ರಕರಣ ದಾಖಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಓರ್ವ ಬಾಲಕಿಯನ್ನು ಬೆಟ್ಟಿಯಾದಲ್ಲಿ ರಕ್ಷಿಸಲಾಗಿದೆ.
ಆಕೆಯ ಹೇಳಿಕೆಯ ಆಧರಿಸಿ, ಪೊಲೀಸರು ಶಂಕಿತನನ್ನು ಅರೆಸ್ಟ್ ಮಾಡಲು ಪಹರ್ಪುರಕ್ಕೆ ತಲುಪಿದರು. ಆದರೆ ಶಂಕಿತನ ಕುಟುಂಬವು ಆತನನ್ನು ಪೊಲೀಸರು ಬಂಧಿಸಿ ಕರೆದುಕೊಂಡು ಹೋಗುತ್ತಾರೆ ಎಂದು ಅವರ ಮೇಲೆ ದಾಳಿ ನಡೆಸಿದರು.