ಜನಸ್ಪಂದನ ನ್ಯೂಸ್, ಡೆಸ್ಕ್ : ನಾನು ಎಸ್ಐ ಅಂತ ಹೇಳಿಕೊಂಡು ಪೊಲೀಸ್ ಸಮವಸ್ತ್ರದಲ್ಲಿ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ಗೆ ಬಂದಿದ್ದ ಯುವತಿಯನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬಂಧಿತ ಯುವತಿ ಅಭಿಪ್ರಭಾ (34) ಎಂದು ವರದಿಯಿಂದ ತಿಳಿದು ಬಂದಿದೆ. ಥೇನಿ ಪೆರಿಯಕುಲಂ ಮೂಲದ ನಿವಾಸಿಯಾಗಿರುವ ಈಕೆ ಪೊಲೀಸರ ಹೆಸರಿನಲ್ಲಿ ಹಲವರಿಗೆ ವಂಚಿಸಿದ್ದಾಳೆ.
ಪಾರ್ವತಿಪುರಂ ನಿವಾಸಿಯಾಗಿರುವ ವೆಂಕಟೇಶ್ ಎಂಬುವವರು ನೀಡಿದ ದೂರಿನ ಮೇರೆಗೆ ವಡಸೇರಿ ಪೊಲೀಸರು ಅಭಿಪ್ರಭಾಳನ್ನು ಅರೆಸ್ಟ್ ಮಾಡಿದ್ದಾರೆ. ಪೊಲೀಸರ ವೇಷದಲ್ಲಿ ವಂಚನೆ ಆರೋಪದ ಮೇಲೆ ಯುವತಿಯನ್ನು ಬಂಧಿಸಲಾಗಿದೆ.
ವಡಸೇರಿಯಲ್ಲಿರುವ ದೂರುದಾರ ವೆಂಕಟೇಶ್ ಪತ್ನಿಯ ಬ್ಯೂಟಿ ಪಾರ್ಲರ್ಗೆ ಆರೋಪಿ ಅಭಿಪ್ರಭಾ ತೆರಳಿದ್ದಳು. ಬಳಿಕ ಅಲ್ಲಿ ಫೇಶಿಯಲ್ ಮಾಡಿಸಿಕೊಂಡು ದುಡ್ಡು ಕೊಡದೇ ಅಲ್ಲಿಂದ ಹೋಗಿದ್ದಳು. ದುಡ್ಡು ಕೊಡಿ ಎಂದು ಕೇಳಿದ್ದಕ್ಕೆ ನಾನು ವಡಸೇರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಎಂದು ಗದರಿಸಿದ್ದಳು. ವೆಂಕಟೇಶ್ ಆಕೆಯ ವರ್ತನೆಯಿಂದ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದರು.
ಇನ್ನೂ ಪೊಲೀಸರ ವಿಚಾರಣೆ ವೇಳೆ ಪೊಲೀಸ್ ವೇಷ ಧರಿಸಿ ಸಾಕಷ್ಟು ಜನರಿಗೆ ವಂಚಿಸಿರುವುದಾಗಿ ಅಭಿಪ್ರಭಾ ಬಾಯ್ಬಿಟ್ಟಿದ್ದಾಳೆ.
ಮಹಿಳಾ ಎಸ್‌ಐ ವೇಷದಲ್ಲಿ ಚೆನ್ನೈ, ತಿರುನಲ್ವೇಲಿ ಸೇರಿದಂತೆ ಅನೇಕ ನಗರಗಳಲ್ಲಿ ಅಭಿಪ್ರಭಾ ಸುತ್ತಾಡಿದ್ದಾಳೆ. ಈ ವೇಳೆ ಸಾಕಷ್ಟು ಮಂದಿಗೆ ವಂಚನೆ ಮಾಡಿರುವುದು ಗೊತ್ತಾಗಿದೆ