ಜನಸ್ಪಂದನ ನ್ಯೂಸ್, ಬೆಂಗಳೂರು : ರಾಜ್ಯದಲ್ಲಿ ಮಾರಾಟವಾಗುತ್ತಿರುವ ಕೆಲವು ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾದ ಅನುಮಾನ ಹಿನ್ನೆಲೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ರಾಜ್ಯಾದ್ಯಂತ ಮೊಟ್ಟೆ (egg) ಗಳ ಮಾದರಿ ಸಂಗ್ರಹಿಸಿ ಲ್ಯಾಬ್ ಪರೀಕ್ಷೆ ನಡೆಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮೊಟ್ಟೆಗಳಲ್ಲಿ ನಿಷೇಧಿತ ಔಷಧೀಯ ಅಂಶಗಳಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ, ಆರೋಗ್ಯ ಇಲಾಖೆ ತಕ್ಷಣವೇ ಅಲರ್ಟ್ ಘೋಷಣೆ ಮಾಡಿದೆ.
ಒಂದು ವೇಳೆ ಪರೀಕ್ಷೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ದೃಢಪಟ್ಟರೆ, ಸಂಬಂಧಪಟ್ಟ ಮೊಟ್ಟೆ ಉತ್ಪಾದಕರು ಹಾಗೂ ಮಾರಾಟಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ : ದಂತ ಕುಳಿ, ಒಸಡು ನೋವು, ಬಾಯಿಯ ದುರ್ವಾಸನೆಗೆ ಜಾಮುನ್ ಬೀಜವೇ ಪರಿಹಾರ.
ಮೊಟ್ಟೆಗಳಲ್ಲಿ ಯಾವ ಅಂಶ ಪತ್ತೆಯಾಗಿದೆ?
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೆಲವು ಮೊಟ್ಟೆಗಳಲ್ಲಿ ನೈಟ್ರೋಫ್ಯುರಾನ್ (Nitrofuran) ಎಂಬ ನಿಷೇಧಿತ ಪ್ರತಿಜೀವಕದ ಅಂಶ ಪತ್ತೆಯಾಗಿದೆ. ಈ ಅಂಶ ಮಾನವ ದೇಹದಲ್ಲಿ ಜೀವಕೋಶ ಹಾನಿ, ರೋಗನಿರೋಧಕ ಶಕ್ತಿ ಕುಗ್ಗುವಿಕೆ ಹಾಗೂ ದೀರ್ಘಾವಧಿಯಲ್ಲಿ ಕ್ಯಾನ್ಸರ್ ಅಪಾಯ ಉಂಟುಮಾಡುವ ಸಾಧ್ಯತೆ ಇದೆ ಎಂದು ಆಹಾರ ತಜ್ಞ ಡಾ. ಕೀರ್ತಿ ಹಿರೀಸಾವೆ ತಿಳಿಸಿದ್ದಾರೆ.
ನೈಟ್ರೋಫ್ಯುರಾನ್ ಒಂದು ಕಾಲದಲ್ಲಿ ಪ್ರಾಣಿಗಳಲ್ಲಿ ಬಳಸಲಾಗುತ್ತಿದ್ದ ವಿಶಾಲ ಸ್ಪೆಕ್ಟ್ರಮ್ ಪ್ರತಿಜೀವಕವಾಗಿದ್ದು, ಸಂಭಾವ್ಯ ಕ್ಯಾನ್ಸರ್ ಕಾರಕ ಗುಣಗಳ ಕಾರಣದಿಂದ ಹಲವು ವರ್ಷಗಳ ಹಿಂದೆಯೇ ನಿಷೇಧಿಸಲಾಗಿದೆ.
ಇದನ್ನು ಓದಿ : Heart-Attack ಕ್ಕೂ 30 ನಿಮಿಷ ಮುನ್ನ ದೇಹ ನೀಡುವ ಈ ಎಚ್ಚರಿಕೆ ಸೂಚನೆಗಳು
ಯೂಟ್ಯೂಬ್ ವಿಡಿಯೋದಿಂದ ಆರಂಭವಾದ ವಿವಾದ :
ಪ್ರಿಮಿಯಂ ಮೊಟ್ಟೆಗಳನ್ನು ಮಾರಾಟ ಮಾಡುತ್ತಿರುವ ಒಂದು ನ್ಯೂಟ್ರಿಷನ್ ಕಂಪನಿಯ ವಿರುದ್ಧ ವಿವಾದ ಆರಂಭವಾಗಿದ್ದು, ಯೂಟ್ಯೂಬ್‌ನಲ್ಲಿ ವೈರಲ್ ಆದ ವಿಡಿಯೋ ಒಂದರಲ್ಲಿ, ಆ ಕಂಪನಿಯ ಮೊಟ್ಟೆಗಳ ಮಾದರಿ ನೈಟ್ರೋಫ್ಯುರಾನ್‌ಗೆ ಧನಾತ್ಮಕ ಪರೀಕ್ಷೆ ನೀಡಿದೆ ಎಂದು ಹೇಳಲಾಗಿದೆ.
‘ಟ್ರಸ್ಟಿಫೈಡ್’ ಎಂಬ ವೇದಿಕೆ ಈ ವಿಷಯವನ್ನು ಬಹಿರಂಗಪಡಿಸಿದ ಬಳಿಕ, ಮೊಟ್ಟೆಗಳ ಗುಣಮಟ್ಟ ಮತ್ತು ಪೌಷ್ಟಿಕ ಮೌಲ್ಯದ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.
ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಅರ್ಪಿತ್ ಮಂಗಲ್, ಎಗ್ಗೋಜ್ ಬ್ರ್ಯಾಂಡ್ ಅಡಿಯಲ್ಲಿ ಮಾರಾಟವಾದ ಮೊಟ್ಟೆಗಳಲ್ಲಿ AOZ (ನೈಟ್ರೋಫ್ಯುರಾನ್‌ನ ಮೆಟಾಬೊಲೈಟ್) ಪತ್ತೆಯಾಗಿದೆ ಎಂದು ವರದಿ ಮಾಡಿದ್ದಾರೆ.
ಇದನ್ನು ಓದಿ : Iron content ಕೊರತೆಯ ಲಕ್ಷಣಗಳು : ಮಕ್ಕಳ ಮತ್ತು ವಯಸ್ಕರ ಆರೋಗ್ಯಕ್ಕೆ ಅಪಾಯ.
ತಜ್ಞರ ಸ್ಪಷ್ಟನೆ: ಜನರು ಆತಂಕ ಪಡಬೇಕಾ?
ಈ ಕುರಿತು ಪ್ರತಿಕ್ರಿಯಿಸಿರುವ ಅಪೋಲೋ ಆಸ್ಪತ್ರೆಯ ಹಿರಿಯ ಸಲಹೆಗಾರ ನರರೋಗ ತಜ್ಞ ಡಾ. ಸುಧೀರ್ ಕುಮಾರ್, “ಸದ್ಯ ಪತ್ತೆಯಾದ ಪ್ರಮಾಣ ಅನುಮತಿತ ಮಿತಿಯೊಳಗಿದ್ದರೆ, ತಕ್ಷಣದ ಕ್ಯಾನ್ಸರ್ ಅಪಾಯ ಇರುವುದಿಲ್ಲ. ಆದರೆ ಇಂತಹ ವಿಷಯಗಳನ್ನು ವೈಜ್ಞಾನಿಕ ದೃಷ್ಟಿಯಿಂದ ಪರಿಶೀಲಿಸುವುದು ಅಗತ್ಯ” ಎಂದು ಹೇಳಿದ್ದಾರೆ.
ಅವರು ಮುಂದುವರೆದು, “ಮೊಟ್ಟೆಗಳು ಪ್ರೋಟೀನ್ ಮತ್ತು ವಿಟಮಿನ್ B12 ಸೇರಿದಂತೆ ಹಲವಾರು ಪೌಷ್ಟಿಕಾಂಶಗಳ ಉತ್ತಮ ಮೂಲ. ಜನರು ಅವುಗಳನ್ನು ಸೇವಿಸಬಹುದು, ಆದರೆ ವಿಶ್ವಾಸಾರ್ಹ ಮೂಲ ಮತ್ತು ಬ್ರ್ಯಾಂಡ್ ಆಯ್ಕೆ ಮಾಡುವುದು ಅತ್ಯಂತ ಮುಖ್ಯ” ಎಂದು ಸಲಹೆ ನೀಡಿದ್ದಾರೆ.
ಆರೋಗ್ಯ ಇಲಾಖೆ ಎಚ್ಚರಿಕೆ :
ಆರೋಗ್ಯ ಇಲಾಖೆ ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೊಟ್ಟೆಗಳ ಮಾದರಿ ಸಂಗ್ರಹ ಕಾರ್ಯ ಆರಂಭಿಸಿದ್ದು, ಲ್ಯಾಬ್ ವರದಿಗಳ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಿದೆ. ಸಾರ್ವಜನಿಕರು ಅಪಾಯಕಾರಿ ವದಂತಿಗಳಿಗೆ ಕಿವಿಗೊಡದೆ, ಅಧಿಕೃತ ವರದಿಗಳಿಗೆ ಕಾಯುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇದನ್ನು ಓದಿ : ಬೆಳಿಗ್ಗೆ ಮೂತ್ರದಲ್ಲಿ ಈ ಲಕ್ಷಣಗಳಿದ್ದರೆ ಎಚ್ಚರ.! ಕೊಲೆಸ್ಟ್ರಾಲ್ ಹೆಚ್ಚಾಗಿರಬಹುದು.?
ಸೂಚನೆ :
ಈ ಸುದ್ದಿ ಲಭ್ಯವಿರುವ ವರದಿಗಳು, ತಜ್ಞರ ಅಭಿಪ್ರಾಯ ಮತ್ತು ಸರ್ಕಾರಿ ಮಾಹಿತಿಯನ್ನು ಆಧರಿಸಿದೆ. ಯಾವುದೇ ಆರೋಗ್ಯ ಸಂಬಂಧಿತ ಆತಂಕಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ






