ಜನಸ್ಪಂದನ ನ್ಯೂಸ್, ಡೆಸ್ಕ್ : ತಿಲಕ ಇಟ್ಟ ವ್ಯಕ್ತಿಯ ಮುಖವು ಅತಿ ಸುಂದರವಾಗಿ ಕಾಣುತ್ತದೆ. ಇದು ಹಿಂದೂ ಸಂಪ್ರದಾಯದಲ್ಲಿ ಕೇವಲ ಸಂಕೇತವಲ್ಲ. ಧೈರ್ಯ, ಸಕಾರಾತ್ಮಕತೆ ಮತ್ತು ರಕ್ಷಣೆಯ ಸಂಕೇತವೆಂದು ಪರಿಗಣಿಸಲಾಗಿದೆ.
ಪ್ರತಿಯೊಂದು ಬೆರಳಿನ ಮೂಲಕ ಕುಂಕುಮ ಹಚ್ಚಿಕೊಳ್ಳಲು ಒಂದು ವಿಭಿನ್ನ ಅರ್ಥವಿದೆ. ಅದು ಏನಂತಾ ಮುಂದೆ ಓದಿ.
ಉಂಗುರ ಬೆರಳು :
ಭಕ್ತಿ ಮತ್ತು ಬದ್ಧತೆಗೆ ಸಂಬಂಧಿಸಿದ ಉಂಗುರದ ಬೆರಳಿನಿಂದ ತಿಲಕವನ್ನು ಹಚ್ಚುವಾಗ ಅದು ಶಾಂತಿ, ಮಾನಸಿಕ ಸ್ಥಿರತೆ, ಬುದ್ಧಿವಂತಿಕೆಯ ಬಿಂದುಗಳನ್ನು ಸುಧಾರಿಸುತ್ತದೆ. ಅಲ್ಲದೇ ಬೌದ್ಧಿಕ ಯಶಸ್ಸಿಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ
ಈ ಬೆರಳಿನ ಸಹಾಯದಿಂದ ದೇವರಿಗೆ ತಿಲಕವನ್ನು ಇಟ್ಟರೆ ಜೀವನದಲ್ಲಿ ಸಮೃದ್ಧಿ ಮತ್ತು ಅದೃಷ್ಟ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಹಣೆಗೆ ತಿಲಕ ಅಥವಾ ಕುಂಕುಮ ಇಡುವ ವೇಳೆ ಉಂಗುರದ ಬೆರಳನ್ನು ಉಪಯೋಗಿಸಿದರೆ ಒಳ್ಳೆಯದು.
ಮಧ್ಯದ ಬೆರಳು :
ಶನಿ ಗ್ರಹವನ್ನು ಪ್ರತಿನಿಧಿಸುವ ಮಧ್ಯದ ಬೆರಳು, ನಮ್ಮ ಬದುಕಿನಲ್ಲಿ ಸಂಪತ್ತು, ಆರೋಗ್ಯ ಮತ್ತು ಸಮೃದ್ಧಿಯನ್ನು ನೀಡುತ್ತದೆ. ಸಾಮಾನ್ಯವಾಗಿ ತಮ್ಮ ಮನೆಯ ಮಕ್ಕಳಿಗೆ ಹಿರಿಯರು ಮಧ್ಯದ ಬೆರಳಿನಿಂದ ತಿಲಕವನ್ನು ಹಚ್ಚುತ್ತಾರೆ. ಈ ಬೆರಳಿನಿಂದ ಹಚ್ಚಿದರೆ ದೀರ್ಘಾಯುಷ್ಯ ಮತ್ತು ಸುರಕ್ಷತೆ ದೊರೆಯುತ್ತದೆ ಎಂಬ ನಂಬಿಕೆ ಅವರದ್ದು.
ತೋರು ಬೆರಳು :
ತೋರು ಬೆರಳನ್ನು ಬದುಕಿದವರಿಗೆ ಕುಂಕುಮ ಅಥವಾ ತಿಲಕ ಹಚ್ಚಲು ಎಂದಿಗೂ ಬಳಸುವುದಿಲ್ಲ. ಅಗಲಿದ ಅಥವಾ ಮರಣ ಹೊಂದಿದ ಜನರನ್ನು ಗೌರವಿಸುವ ವೇಳೆ ತೋರು ಬೆರಳನ್ನು ಮಾತ್ರ ಬಳಸಲಾಗುತ್ತದೆ. ಈ ತೋರುಬೆರಳು ಮೋಕ್ಷಕ್ಕೆ ಸಂಬಂಧಿಸಿದೆ. ಸಾಮಾನ್ಯವಾಗಿ ಮರಣದ ಆಚರಣೆಗಳನ್ನು ಮಾಡುವಾಗ ಅಥವಾ ತರ್ಪಣ ವಿಧಿಯಲ್ಲಿ ಇದನ್ನು ಬಳಸುತ್ತಾರೆ.
ಹೆಬ್ಬೆರಳು :
ಯಶಸ್ಸು, ವಿಜಯ ಮತ್ತು ಶಕ್ತಿಯ ಆಶೀರ್ವಾದವನ್ನು ಸ್ವೀಕರಿಸಲು ಅಥವಾ ನೀಡಲು ಅತ್ಯುತ್ತಮ ಬೆರಳು ಎಂದರೆ ಅದು ಹೆಬ್ಬೆರಳು. ಹಿಂದೆ ರಾಜರ ಕಾಲದಲ್ಲಿ ವಿಜಯ ಸಾಧಿಸಿ ಬರಲು ಈ ಹೆಬ್ಬೆರಳನ್ನು ಬಳಸಿ ಹಣೆಯ ಮೇಲೆ ತಿಲಕವನ್ನು ಹಚ್ಚುತ್ತಿದ್ದರು. ಜನರು ಯಾವುದಾದರೂ ಒಳ್ಳೆಯ ಕಾರ್ಯಕ್ಕೆ ಹೋಗುವ ಸಂದರ್ಭ ಈ ಹೆಬ್ಬೆರಳಿನಿಂದ ಕುಂಕುಮ ಹಚ್ಚಿಕೊಂಡು ತೆರಳುವರು. ಹಿಂದೂ ಸಂಪ್ರದಾಯವು ವ್ಯಕ್ತಿಯ ಹಣೆಗೆ ಈ ಬೆರಳಿನಿಂದ ತಿಲಕವಿಟ್ಟರೆ ತುಂಬಾ ಒಳ್ಳೆಯದು ಎಂದು ನಂಬಿಕೆ ಇಟ್ಟಿದೆ