ಜನಸ್ಪಂದನ ನ್ಯೂಸ್, ಡೆಸ್ಕ್ : ವಾರಣಾಸಿ ಕೋರ್ಟ್, ಸರ್ವೇ ವರದಿ ಬಹಿರಂಗವಾದ ಬೆನ್ನಲ್ಲೇ ಹಿಂದೂಗಳಿಗೆ ಜ್ಞಾನವಾಪಿ ಮಸೀದಿಯ ಒಳಗಡೆ ಸಿಕ್ಕ ಮೂರ್ತಿಗಳಿಗೆ ಪೂಜೆ ಮಾಡಲು ಅನುಮತಿ (Permission) ನೀಡಿದೆ.
ಮುಂದಿನ 7 ದಿನಗಳಲ್ಲಿ ಮಸೀದಿಯ ನೆಲ ಮಹಡಿಯಲ್ಲಿ ಸಿಕ್ಕ ವಿಗ್ರಹಗಳಿಗೆ (Idol) ಪೂಜೆ ಆರಂಭವಾಗಲಿದೆ.
ವಾರಾಣಸಿ ನ್ಯಾಯಾಲಯವು ಬುಧವಾರ ಹಿಂದೂ ಭಕ್ತರಿಗೆ ಜ್ಞಾನವಾಪಿ ಮಸೀದಿಯ ಮೊಹರು ಮಾಡಿದ ನೆಲಮಾಳಿಗೆಯೊಳಗೆ ಪೂಜೆ ಮಾಡಲು ಅನುಮತಿ ನೀಡಿದೆ. ನ್ಯಾಯಾಲಯದ ಆದೇಶದ ಪ್ರಕಾರ, ವಾರಾಣಸಿಯ ಜ್ಞಾನವಾಪಿ ಮಸೀದಿಯೊಳಗಿನ ನಿರ್ಬಂಧಿತ ಪ್ರದೇಶವಾದ ‘ವ್ಯಾಸ್ ಕಾ ತೆಖಾನಾ’ದಲ್ಲಿ ಹಿಂದೂ ಭಕ್ತರು ಈಗ ಪ್ರಾರ್ಥನೆ ಸಲ್ಲಿಸಬಹುದು.
ನ್ಯಾಯಾಲಯವು ಪೂಜೆ ಮಾಡಲು ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತು ಮತ್ತು ಅದಕ್ಕಾಗಿ ಪೂಜಾರಿಯನ್ನು ನಾಮನಿರ್ದೇಶನ ಮಾಡುವಂತೆ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟಿಗೆ ಸೂಚಿಸಿತು.
ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂಗಳಿಗೆ ಸಿಕ್ಕ ದೊಡ್ಡ ಜಯ (Victory) ಇದಾಗಿದೆ ಎಂದು ಹಿಂದೂಗಳ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು ಬಣ್ಣಿಸಿದ್ದಾರೆ.
ಜ್ಞಾನವಾಪಿ ಮಸೀದಿಯ ಮೊಹರು ಮಾಡಿದ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ 31 ವರ್ಷದ ಬಳಿಕ ಪೂಜೆ ಮಾಡಲು ಅವಕಾಶ ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ.
ಅಂಜುಮನ್ ಇಂತೆಜಾಮಿಯಾ ಮಸ್ಜಿದ್ ಸಮಿತಿಯ ವಕೀಲ ಅಖ್ಲಾಕ್ ಅಹ್ಮದ್ ಅವರು ಈ ಆದೇಶವನ್ನು ಉನ್ನತ ನ್ಯಾಯಾಲಯದಲ್ಲಿ (High court) ಪ್ರಶ್ನಿಸುವುದಾಗಿ ಹೇಳಿದ್ದಾರೆ.
ಹಿನ್ನೆಲೆ :
ನಾಲ್ಕು ಮಹಿಳಾ ಫಿರ್ಯಾದಿಗಳು ಮಸೀದಿಯ ಉತ್ಖನನ ಮತ್ತು ಮೊಹರು ವಿಭಾಗದ ಸಮೀಕ್ಷೆಯನ್ನು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ದಿನಗಳ ನಂತರ ವಾರಾಣಸಿ ನ್ಯಾಯಾಲಯದ ಆದೇಶ ಬಂದಿದೆ.
ವಾರಾಣಸಿ(ಕಾಶಿ)ಯಲ್ಲಿ ಜ್ಞಾನವಾಪಿ ಮಸೀದಿ ನಿರ್ಮಾಣಕ್ಕೂ ಮುನ್ನ ದೊಡ್ಡ ಹಿಂದೂ ದೇವಾಲಯವಿತ್ತು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ವರದಿ ನೀಡಿದ ನಂತರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.