ಜನಸ್ಪಂದನ ನ್ಯೂಸ್, ಮೂಡಲಗಿ : ಮೂಡಲಗಿ ಪಟ್ಟಣದ ಆರ್‍ಡಿಎಸ್ ಶಿಕ್ಷಣ ಸಂಸ್ಥೆ ಆವರಣದ ಪ್ರೊ. ಕೆ.ಜಿ. ಕುಂದಣಗಾರ ವೇದಿಕೆಯಲ್ಲಿ ಆರಂಭವಾದ ಬೆಳಗಾವಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡಾಭಿಮಾನಿಗಳ ಸಮ್ಮುಖದಲ್ಲಿ ವಿದ್ಯುಕ್ತವಾಗಿ ಚಾಲನೆ ದೊರೆಯಿತು.
ಪ್ರೊ. ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ಚಂದ್ರಶೇಖರ ಅಕ್ಕಿ ಮಾತನಾಡಿ, ಯಾವುದೇ ಒಂದು ಭಾಷೆಯ ಅಳಿವು-ಉಳಿವಿನ ಮೂಲ ಸಮಸ್ಯೆ ಶಿಕ್ಷಣ ಮಾಧ್ಯಮದಲ್ಲಿಯೇ ಇರುತ್ತದೆ. ಇಂಗ್ಲಿಷ್ ಭಾಷೆಗೆ ಈಗಾಗಲೇ ಜಗತ್ತಿನ ಬಹಳಷ್ಟು ಭಾಷೆಗಳು ಬಲಿಯಾಗಿವೆ. ಈಗ ಕನ್ನಡವೂ ಈ ಆತಂಕದಲ್ಲಿ ಇರುವುದು ದುರಂತ.
ಇಂಗ್ಲಿಷ್ ಭಾಷೆಯಲ್ಲಿ ಸಾಹಿತ್ಯ ರಚನೆಯಾಗುವ 400 ವರ್ಷಗಳ ಪೂರ್ವದಲ್ಲಿಯೇ ಕನ್ನಡ ಭಾಷೆಯ ಸಾಹಿತ್ಯ ವ- ಸಂಸ್ಕೃತಿ ಶ್ರೀಮಂತಿಕೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಉದ್ಯೋಗದ ಹಪಾಹಪಿಯನ್ನು ಹೆಚ್ಚಿಸುವ ಮೂಲಕ ಕನ್ನಡ ಸೇರಿದಂತೆ ಇತರ ಭಾಷಿಕರ ಬದುಕನ್ನೇ ಇಂದು ಇಂಗ್ಲೀಷ ಕಸಿದುಕೊಳ್ಳುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.
ಮಾತೃಭಾಷೆಯಲ್ಲಿ ಓದುವ, ಬರೆಯುವ, ಮಾತನಾಡುವ ಮಗು ಸಹಜವಾಗಿಯೇ ಕಲಿತದ್ದನ್ನೆಲ್ಲ ಅರಗಿಸಿಕೊಂಡು ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳಲ್ಲಿ ನೈಜ ನೈಪುಣ್ಯತೆ ಮೆರೆಯುತ್ತದೆ. ಸೃಜನಾತ್ಮಕ ಶಕ್ತಿಯನ್ನೂ ಪಡೆಯುತ್ತದೆ.ಇವರಿಂದ ಕನ್ನಡ ಕಲಿಕಾ ಮಾಧ್ಯಮವನ್ನೇ ಕಸಿದುಕೊಂಡರೆ ಭಾಷೆ ಇಲ್ಲ; ಭಾಷೆ ಇಲ್ಲವಾದರೆ ಸಂಸ್ಕೃತಿ ಅಲ್ಲ; ಸಂಸ್ಕೃತಿ ಇಲ್ಲವಾದರೆ ಬದುಕೇ ಇಲ್ಲ. ಅದು ಇದ್ದೂ ಸತ್ತಂತಹ ಸ್ಥಿತಿ. ಹೀಗಾಗಿ ಕನ್ನಡ ಭಾಷೆ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಂಭೀರವಾಗಿ ಚಿಂತನೆ ಮಾಡಬೇಕಿದೆ ಎಂದು ಹೇಳಿದರು.
ಖಾಸಗಿ ಶಾಲೆಗಳ ಆಂಗ್ಲಭಾಷಾ ವ್ಯಾಮೋಹವೇ ಈ ಎಲ್ಲ ಸಮಸ್ಯೆಯ ಮೂಲ. ಅದಕ್ಕೆ ಭಾಷಾ ಮಾಧ್ಯಮಗಳು ಹಿಡಿದ ವಿವಾದದ ಹಾದಿಯೂ ಕಾರಣ. 1ರಿಂದ 4ನೇ ತರಗತಿವರೆಗೆ ಕನ್ನಡವೇ ಕಡ್ಡಾಯವಾಗಿ ಶಿಕ್ಷಣ ಮಾಧ್ಯಮವಾಗಬೇಕು. ಆದರೆ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಕನ್ನಡ ಕಡ್ಡಾಯದ ವಿರುದ್ಧ ಬಂದಿರುವ ಸುಪ್ರೀಂ ಕೋರ್ಟ್ ತೀರ್ಪು ಕರ್ನಾಟಕದ ಪಾಲಿಗೆ ಮರಣ ಶಾಸನವಾಗಿ ಬಂತು ಎಂದು ಕಳವಳ ವ್ಯಕ್ತಪಡಿಸಿದರು.
ಕನ್ನಡ ನಾಡಿಗೆ ವಲಸೆ ಬಂದವರು ಕನ್ನಡವನ್ನು ಕಲಿಯಲೇಬೇಕು. ಬೇರೆ ರಾಜ್ಯಗಳಿಂದ ಬಂದ ಐ.ಎ.ಎಸ್ ಅಧಿಕಾರಿಗಳು ಕನ್ನಡ ವಿರೋಧಿಗಳಾಗಿದ್ದರೆ ಅಂಥವರನ್ನು ತಿರಸ್ಕರಿಸಿ ಹಿಂದಿರುಗಿ ಕಳಿಸುವ ಕೆಚ್ಚನ್ನು ಸರ್ಕಾರ ತೋರಬೇಕು. ಕರ್ನಾಟಕದಲ್ಲಿ ಅಸಂಖ್ಯಾತ ಉದ್ಯಮಗಳು ಸ್ಥಾಪಿಸಲ್ಪಟ್ಟಿದ್ದು, ಬಹುಪಾಲು ಉದ್ಯಮಗಳು ಹೊರಗಿನವರವುಗಳೇ ಆಗಿವೆ. ಆದರೆ ಕನ್ನಡಿಗರು ಅಲ್ಲಿ ಉದ್ಯೋಗ ವಂಚಿತರಾಗಿದ್ದಾರೆ. ಇದನ್ನು ಸರಿಪಡಿಸಿ ಆಯೋಗಗಳು ನೀಡಿರುವ ವರದಿಯನ್ನು ಕಟ್ಟುನಿಟ್ಟಾಗಿ ಅಲ್ಲದಿದ್ದರೂ ತುಸು ಮಟಟೊಗಾದರೂ ಅನುಷ್ಠಾನಕ್ಕೆ ತರಬೇಕು ಎಂದು ಹೇಳಿದರು.
1ರಿಂದ 4ನೇ ತರಗತಿಯವರೆಗೆ ಶಿಕ್ಷಣ ಮಾಧ್ಯಮ ಕಡ್ಡಾಯವಾಗಿ ಕನ್ನಡದಲ್ಲಿಯೇ ಇರಬೇಕು. ಒಂದನೇ ತರಗತಿಯಿಂದ ಇಂಗ್ಲೀಷನ್ನು ಒಂದು ಭಾಷೆಯನ್ನಾಗಿ ಬೋಧಿಸಬೇಕು. ಕನ್ನಡ ನಾಡು ನುಡಿ, ಸಂಸ್ಕøತಿ ಪರಂಪರೆಯ ಪರಿಚಯ ಮಾಡಿಸಲು ಉನ್ನತ ತಾಂತ್ರಿಕ ಶಿಕ್ಷಣದಲ್ಲಿ ಕನ್ನಡ ವಿಷಯವನ್ನು ಕಡ್ಡಾಯಗೊಳಿಸಬೇಕು. ನಮ್ಮ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳು ಸುಧಾರಣೆಗೊಳ್ಳಬೇಕು. ಅವು ಅತ್ಯುತ್ತಮ ಗುಣಮಟ್ಟದಿಂದ ಕೂಡಿರಬೇಕು.ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಅತಿಯಾಗಿದ್ದು, ಆ ಕೊರತೆಯನ್ನು ನೀಗಿಸಲು ಶಿಕ್ಷಣ ಇಲಾಖೆ ತುರ್ತುಕ್ರಮ ಕೈಗೊಳ್ಳಬೇಕು ಎಂದರು.
ಕನ್ನಡದಲ್ಲಿ ತಂತ್ರಾಂಶ ಬಳಕೆ ಸಮರ್ಪಕವಾಗಿ ಆಗಬೇಕು. ಕನ್ನಡಕ್ಕೆ ಪೂರಕವಾಗಿ ತಂತ್ರಾಂಶಗಳ ಅಭಿವೃದ್ಧಿಯಲ್ಲಿ ಇನ್ನೂ ಸಂಶೋಧನೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ತಂತ್ರಜ್ಞರು ಗಮನಹರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿಯ ನಾಮ ಫಲಕಗಳು ಕನ್ನಡದಲ್ಲಿರಬೇಕೆಂಬ ಹಾಗೂ ಕನ್ನಡ ಅಂಕಿಗಳ ಬಳಕೆ ಕಡ್ಡಾಯಗೊಳ್ಳಬೇಕೆಂಬ ಕನಸು ಈವರೆಗೂ ನನಸಾಗಿಲ್ಲ. ಆ ದಿಸೆಯಲ್ಲಿ ಸಾರ್ವಜನಿಕರು ಕಾರ್ಯಪ್ರವೃತ್ತರಾಗಬೇಕು ಎಂದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಬಾಳಾಸಾಹೇಬ ಲೋಕಾಪುರ ಮಾತನಾಡಿ, ಕನ್ನಡ ಭಾಷೆಯು ಇಂದು ಬಿಕ್ಕಟ್ಟಿನಲ್ಲಿದೆ. ವ್ಯವಹಾರ, ಸಂವಹನದಲ್ಲಿ ಕನ್ನಡ ಮರೆಯಾಗುತ್ತಿದೆ. ಯಾಔ ಭಾಷೆಯಲ್ಲಿ ತನ್ನ ಶಬ್ದಗಳು ಬಿಟ್ಟು ಬೇರೆ ಶಬ್ದಗಳು ಬಳಕೆಯಲ್ಲಿವೆ ಎಂದರೆ ಆ ಭಾಷೆ ಪತನದ ಹಾದಿಯಲ್ಲಿದೆ ಎಂದರ್ಥ. ನಮ್ಮಭಾಷೆಯ ಪದಗಳು ನುಡಿಗಟ್ಟುಗಳ ಮೂಲಕ ಜನರಾಡುವ ಭಾಷೆಯಲ್ಲಿ ಕನ್ನಡ ಮರೆಯಾಗುತ್ತಿರುವುದು ಆತಂಕ ಎಂದರು.
ಕನ್ನಡದಲ್ಲಿ ಬೇರೆ ಭಾಷೆಗಳು ನುಸುಳುತ್ತಿವೆ. ಕೃಷಿ ಸಂಸ್ಕೃತಿಯಲ್ಲಿ ಅನೇಕ ಶಬ್ದಗಳನ್ನು ಕಳೆದುಕೊಂಡಿದ್ದೇವೆ. ನಮ್ಮ ಊಟದ ವಿಧಾನಗಳು ಬದಲಾಗಿವೆ. ನಾವಾಡುವ ಮಾತಿನಲ್ಲಿ ಇಂಗ್ಲೀಷ ನುಸುಳಿದೆ. ಉದ್ಯೋಗ ಬದಲಾದಂತೆ, ನಡೆ ನುಡಿ ಬದಲಾಗಿದೆ, ನುಡಿಗಟ್ಟುಗಳು ಬದಲಾಗಿವೆ. ಆತಂಕ ಆಗುವಷ್ಟು ಬದಲಾಗಿದೆ. ಉತ್ತರ ಕರ್ನಾಟಕದ ಭಾಷೆಯನ್ನು ಹಾಸ್ಯ ಪಾತ್ರಗಳಿಗೆ ಬಳಸುತ್ತಿರುವುದು ದುರಂತ. ಹೀಗಾಗಿ ನಾವೆಲ್ಲರೂ ಹಠದಿಂದ ಕನ್ನಡ ಉಳಿಸೋಣ ಎಂದು ಹೇಳಿದರು.
ಸಂಸದ ಜಗದೀಶ ಶೆಟ್ಟರ ಮಾತನಾಡಿ, ನಮ್ಮ ಭಾಷೆಯ ಬಗ್ಗೆ ಅಭಿಮಾನ ಇರಬೇಕು. ತಮಿಳುನಾಡು, ತೆಲಗು, ಆಂಧ್ರಪ್ರದೇಶ, ಮಹಾರಾಷ್ಟ್ರ ಆಯಾ ಭಾಷೆಗಳು ಹೇಗೆ ಮುಖ್ಯವಾಗಿಯೋ ಅದೇ ರೀತಿ ಕರ್ನಾಟಕದಲ್ಲಿ ಕನ್ನಡ ಮುಖ್ಯ. ಇತರೆ ಭಾಷೆಗಳನ್ನೂ ಕಲಿಯಬೇಕು. ಆಡಳಿತ ವ್ಯವಹಾರ ಕನ್ನಡದಲ್ಲಿ ಇರುವಂತೆ ನೋಡಿಕೊಳ್ಳಬೇಕು. ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಕನ್ನಡ ಬಳಕೆ ಆಗಬೇಕು. ಕನಿಷ್ಠ ಶೇ. 50-60ರಷ್ಟು ಕನ್ನಡ ಬಳಕೆಯಾದರೆ ಅನುಕೂಲ ಆಗಲಿದೆ. ಪುಸ್ತಕ ಹಾಗೂ ಕನ್ನಡ ದಿನಪತ್ರಿಕೆಗಳನ್ನು ಓದುವ ಚಟ ಬೆಳೆಸಿಕೊಳ್ಳಬೇಕು ಎಂದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನೇಕ ವಿಷಯಗಳ ಮಧ್ಯೆ ಕನ್ಮಡ ಭಾಷೆಯನ್ನು ಮರೆಯುವಂತಾಗಬಾರದು. ಮೂಡಲಗಿ ತಾಲೂಕಿನಲ್ಲಿ ಅನೇಕ ಸಾಹಿತಿಗಳು ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕನ್ನಡ ಭಾಷೆ ನಮ್ಮ ಜೀವನಕ್ಕೆ ದಾರಿದೀಪ. ನಾವು ಬೇರೆ ಭಾಷೆ ಮಾತನಾಡಬೇಕಾದ ಅನಿವಾರ್ಯತೆ ಇದೆ. ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡುವುದರ ಜತೆಗೆ ಉಳಿದ ಭಾಷೆಗಳನ್ನು ಕಲಿಯಬೇಕು. ಕನ್ನಡ ಶಿಕ್ಷಣ ಸಂಸ್ಥೆಗಳನ್ನು ಉಳಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಆಶಯ ನುಡಿಗಳನ್ನಾಡಿದರು. ತಾಲೂಕು ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪುರಸಭೆ ಅಧ್ಯಕ್ಷೆ ಖುರ್ಷಾದಬೇಗಂ ನದಾಫ, ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಶ ಢವಳೇಶ್ವರ, ಸಂತೋಷ ಪಾರ್ಶಿ, ತಹಶೀಲದಾರ ಶಿವಾನಂದ ಬಬಲಿ, ಬಿಇಓಗಳಾದ ಅಜೀತ ಮನ್ನಿಕೇರಿ, ಜಿ.ಬಿ.ಬಳಗಾರ, ತಾ.ಪಂ ಇಓ ಎಫ್.ಜಿ.ಚಿನ್ನನವರ, ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಜಿಲ್ಲೆಯ ವಿವಿಧ ತಾಲೂಕುಗಳ ಕಸಾಪ ಅಧ್ಯಕ್ಷರು, ಅನೇಕ ಸಾಹಿತಿಗಳು, ಲೇಖಕರು, ಕವಿಗಳು, ಕನ್ನಡ ಪರ ಸಂಘಟನೆಗಳ ಪ್ರಮುಖರು, ಪುರಸಭೆ ಸದಸ್ಯರು, ಗಣ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕನ್ನಡ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಮೂಡಲಗಿ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ 4 ಗುಂಟೆ ನಿವೇಶನವನ್ನು ಪುರಸಭೆಯಿಂದ ನೀಡುವುದಾಗಿ ಶಾಸಕ ಮತ್ತು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಘೋಷಿಸಿದರು.
ಶನಿವಾರದಂದು ಇಲ್ಲಿಯ ಆರ್‍ಡಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೂಡಲಗಿ ಘಟಕದಿಂದ ಹಮ್ಮಿಕೊಂಡ 16ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಸಾಹಿತ್ಯಿಕ ಚಟುವಟಿಕೆಗಳಿಗೆ ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ತಿಳಿಸಿದರು.
ಅವಿಭಜಿತ ಗೋಕಾಕ ತಾಲೂಕಿನಲ್ಲಿ ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಈಗಾಗಲೇ ಯಶಸ್ವಿಯಾಗಿ ಮಾಡಲಾಗಿದೆ. ಶಿವಾಪೂರ (ಹ), ಬೆಟಗೇರಿ, ಕೌಜಲಗಿ ಮುಂತಾದ ಗ್ರಾಮಗಳಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡ ನಾಡು,ನುಡಿ, ನೆಲ,ಜಲದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ. ಈಗಾಗಲೇ ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಮ್ಮೇಳನಗಳನ್ನು ಆಯೋಜಿಸಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನವನ್ನು ನಮ್ಮ ಗೋಕಾಕ-ಮೂಡಲಗಿ ತಾಲೂಕುಗಳಲ್ಲಿ ಆಯೋಜಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.
ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ, ಜೊತೆಗೆ 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ನಮ್ಮ ಕನ್ನಡ ಭಾಷೆಯು ಈ ಜಗತ್ತಿನಲ್ಲಿಯೇ ಸುಂದರವಾದ ಭಾಷೆಯಾಗಿದೆ. ಕನ್ನಡವನ್ನು ಬರೆಯುವುದಕ್ಕೂ ಮತ್ತು ಮಾತನಾಡುವುದಕ್ಕೂ ಸರಳವಾಗಿದೆ. ಕನ್ನಡದ ಸೊಗಡು ಜಾಗತೀಕವಾಗಿ ಹರಡಿದೆ. ಕನ್ನಡ ಭಾಷೆಯ ಉಳಿವಿಗೆ ನಾವೆಲ್ಲರೂ ಕಟಿಬದ್ಧರಾಗಿ ದುಡಿಯಬೇಕಾಗಿದೆ. ಕನ್ನಡದ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ.
ಈ ದಿಸೆಯಲ್ಲಿ ಮೂಡಲಗಿ ತಾಲೂಕಿನಲ್ಲಿ ಕನ್ನಡ ಬಗ್ಗೆ ಅರಿವು ಮೂಡಿಸಲು ಕನ್ನಡ ಪರ ಸಂಘಟನೆಗಳ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಮೂಲಕ ನಮ್ಮ ಸೇವೆಯು ಸದಾ ನಾಡಿಗಾಗಿ ಮೀಸಲಿದೆ ಕನ್ನಡ ಪರ ಹೋರಾಟಕ್ಕೆ ನಾನು ಸದಾ ಸಿದ್ದ ಎಂದು ಅವರು ತಿಳಿಸಿದರು.
ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಸರ್ಕಾರವು ಹೆಚ್ಚಿನ ಪ್ರಮಾಣದಲ್ಲಿ ಅನುದಾನ ನೀಡುತ್ತಿಲ್ಲ ಆದರೂ ಸಾಹಿತ್ಯಿಕ ಚಟುವಟಿಕೆಗಳು ನಿಂತಿಲ್ಲ. ಕನ್ನಡ ಕೆಲಸಗಳಿಗೆ ನನ್ನಿಂದಾಗುವ ಕೈಲಾದ ಸಹಾಯವನ್ನು ಮಾಡುತ್ತೇನೆ. ಈ ಮೂಲಕ ಗ್ರಾಮೀಣ ಭಾಗದಲ್ಲಿ ಸಾಹಿತ್ಯಿಕ ಚಟುವಟಿಕೆಗಳು ನಿರಂತವಾಗಿ ನಡೆಯಲಿಕ್ಕೆ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಕನ್ನಡ ಭಾಷೆಯ ಹೋರಾಟಕ್ಕಾಗಿ ಅನೇಕ ಮಹನೀಯರು ಸಾಕಷ್ಟು ಪರಿಶ್ರಮಪಟ್ಟಿದ್ದಾರೆ. ವರನಟ ಡಾ|| ರಾಜಕುಮಾರ್ ಆದಿಯಾಗಿ ಹಲವರು ಹೋರಾಟ ಮಾಡಿದ್ದಾರೆ. ಡಾ|| ರಾಜಕುಮಾರ್ ಅವರ ಕಂಠಸಿರಿಯಿಂದ ಮೂಡಿಬರುವ ಕನ್ನಡ ಹಾಡುಗಳನ್ನು ಸವಿಯಲು ಚೆಂದ, ಕನ್ನಡ ನಾಡು-ನುಡಿ ವಿಚಾರ ಬಂದಾಗ ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಹೋರಾಡಬೇಕು.
ಈ ಸಂದರ್ಭದಲ್ಲಿ ಜಾತಿ ಮತ್ತು ಪಕ್ಷಗಳನ್ನು ಹೊರಗಿಟ್ಟು ಕನ್ನಡ ನಾಡಿನ ಸೇವೆಗೆ ಕಟಿಬದ್ಧರಾಗಿ ದುಡಿಯುವಂತೆ ಅವರು ಕರೆ ನೀಡಿದರು. ಕನ್ನಡ ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ. ಕನ್ನಡವು ನಮ್ಮ ಅಸ್ಮಿತೆಯಾಗಿದ್ದು, ನಮ್ಮ ಸಂಸ್ಕøತಿ ಪರಂಪರೆಯನ್ನು ಮುಂದುವರೆಸಲು ಎಲ್ಲರೂ ಬದ್ಧರಾಗಬೇಕು. ಕನ್ನಡ ಭಾಷೆಯ ಮೇಲೆ ಆಂಗ್ಲ ಭಾಷೆ ಸೇರಿದಂತೆ ಅನ್ಯಭಾಷೆಗಳ ಅಪಾಯವಿದ್ದು, ಎರಡು ಸಾವಿರ ಪೂರ್ವ ಇತಿಹಾಸದ ಕನ್ನಡದ ಭಾಷೆಯನ್ನು ವಿಶ್ವವ್ಯಾಪ್ತಿಯಲ್ಲಿ ಬೆಳೆಸುವ ಕಾರ್ಯವನ್ನು ನಾವಿಂದು ಮಾಡಬೇಕಿದೆ. ತಂತ್ರಜ್ಞಾನ, ಜಾಗತೀಕರಣ, ಒತ್ತಡದಲ್ಲಿ ಕನ್ನಡ ಭಾಷೆಯ ಬಳಕೆಯೂ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಇಂತಹ ಸಂದಿಗ್ಧದ ಅಪಾಯಗಳನ್ನು ಎದುರಿಸುವಂತೆ ಸಾಹಿತಿ, ಚಿಂತಕರಲ್ಲಿ ಗಂಭೀರ ಚಿಂತನೆಗಳು ನಡೆಯಬೇಕಾದ ಅಗತ್ಯತೆಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರತಿಪಾದಿಸಿದರು.
ಆರ್‍ಡಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೂಡಲಗಿ ಘಟಕದಿಂದ ಹಮ್ಮಿಕೊಂಡ 16ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಮೃತಭೋದ ಮಹಾಸ್ವಾಮಿಗಳು, ಶಿವಾಪೂರ (ಹ) ಮಹಾಸ್ವಾಮಿಗಳು, ಶಾಸಕ ಬಾಲಚಂದ್ರ ಜಾರಕಿಹೊಳಿ, ಸಂಸದ ಈರಣ್ಣಾ ಕಡಾಡಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಚಂದ್ರಶೇಖರ ಅಕ್ಕಿ, ಮಂಗಲಾ ಮೆಟಗುಡ್ಡ ಅನೇಕರು ಉಪಸ್ಥಿತರಿದ್ದರು.
ಆರ್‍ಡಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೂಡಲಗಿ ಘಟಕದಿಂದ ಹಮ್ಮಿಕೊಂಡ 16ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿದರು.
ಆರ್‍ಡಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೂಡಲಗಿ ಘಟಕದಿಂದ ಹಮ್ಮಿಕೊಂಡ 16ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ಚಂದ್ರಶೇಖರ ಅಕ್ಕಿ ದಂಪತಿಯನ್ನು ಸತ್ಕರಿಸುತ್ತಿರುವುದು.
ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರು 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ಚಂದ್ರಶೇಖರ ಅಕ್ಕಿ ಅವರಿಗೆ ನಾಡ ಧ್ವಜ ಹಸ್ತಾಂತರಿಸುತ್ತಿರುವುದು.