ಕೆಪಿಎಸ್‍ಸಿ ಪರೀಕ್ಷೆ : ತಾಳಿ-ಕಾಲುಂಗುರ ತೆಗೆಸಿ ಯಡವಟ್ಟು ಮಾಡಿದ ಸಿಬ್ಬಂದಿ.!

ಜನಸ್ಪಂದನ ನ್ಯೂಸ್, ಕಲಬುರಗಿ : ಕೆಪಿಎಸ್‍ಸಿ ಪರೀಕ್ಷಾ (KPSC Exam) ಅಕ್ರಮ ತಡೆಗಟ್ಟುವ ಕ್ರಮವಾಗಿ ತಾಳಿ ಹಾಗೂ ಕಾಲುಂಗುರ ತೆಗೆಸಿ ಅಧಿಕಾರಿಗಳು ಯಡವಟ್ಟು ಮಾಡಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ತಾಳಿ ಹಾಗೂ ಕಾಲುಂಗುರ ತೆಗೆಸದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಗ್ರೂಪ್ ಸಿ ಹುದ್ದೆಗೆ ಕಲಬುರಗಿಯ (Kalaburagi) ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ಪರೀಕ್ಷೆಯಲ್ಲಿ ಅಕ್ರಮ ತಡೆಯಲು ತಾಳಿ, ಕಾಲುಂಗುರ ಹಾಗೂ ಕಿವಿಯಲ್ಲಿದ್ದ ಓಲೆಗಳನ್ನು ಅಧಿಕಾರಿಗಳು ತೆಗೆಸಿದ್ದರು. ಇದನ್ನೂ ಓದಿ : ಸರ್ಕಾರಿ ಮಹಿಳಾ ಅಧಿಕಾರಿಯ ಬರ್ಬರ ಹತ್ಯೆ.!

ಈ ವೇಳೆ ತಾಳಿ ತೆಗೆಯಲು ಹಿಂದೇಟು ಹಾಕಿದ ಮಹಿಳೆಯರಿಗೆ ಪರೀಕ್ಷೆ ಬರೆಯಲು ಅಧಿಕಾರಿಗಳು ಅವಕಾಶ ನಿರಾಕರಿಸಿದ್ದರು. ಅಲ್ಲದೇ ಕಿವಿ ಓಲೆ ತೆಗೆಯಲು ಬರದಿದ್ದಾಗ ಚಿನ್ನದಂಗಡಿಗೆ ಹೋಗಿ ಮಹಿಳೆಯರು ತೆಗೆಸಿಕೊಂಡು ಬಂದಿದ್ದರು. ರಾಯಚೂರು (Raichuru) ಮೂಲದ ಇಬ್ಬರು ಮಹಿಳೆಯರನ್ನು ಅಧಿಕಾರಿಗಳು ತೀವ್ರ ತಪಾಸಣೆ ಮಾಡಿ ತಾಳಿ ಹಾಗೂ ಕಾಲುಂಗುರ ತೆಗೆಯಲು ಹೇಳಿದ್ದರು.

ಈ ವೇಳೆ ಅನಿವಾರ್ಯವಾಗಿ ಮಹಿಳೆಯರು ತೆಗೆದು ಸಂಬಂಧಿಕರ ಬಳಿ ನೀಡಿ ಪರೀಕ್ಷಾ ಹಾಲ್‍ಗೆ ತೆರಳಿದ್ದರು. ಈ ಸುದ್ದಿಯನ್ನು `ಪಬ್ಲಿಕ್ ಟಿವಿ’ ಪ್ರಸಾರ ಮಾಡಿತ್ತು. ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಹಿರಿಯ ಅಧಿಕಾರಿಗಳು (Senior Officer) ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ತಾಳಿಯನ್ನು ವಾಪಸ್ ನೀಡುವಂತೆ ಸೂಚಿಸಿದ್ದಾರೆ.

(ಕೃಪೆ : ಪಬ್ಲಿಕ್‌ ಟಿವಿ)