ನೇಪಾಳದಲ್ಲಿ ಪ್ರಬಲ ಭೂಕಂಪಕ್ಕೆ 128 ಜನ ಬಲಿ ; ದೆಹಲಿಯಲ್ಲೂ ಕಂಪಿಸಿದ ಭೂಮಿ.!

ಜನಸ್ಪಂದನ ನ್ಯೂಸ್, ಡೆಸ್ಕ್‌ ಶುಕ್ರವಾರ ತಡರಾತ್ರಿ ನೇಪಾಳದಲ್ಲಿ ಪ್ರಬಲ ಭೂಕಂಪ (Earthquake) ವಾಗಿದ್ದು, ಕನಿಷ್ಠ 129 ಜನ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, 140ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಭೂಕಂಪದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ (Magnitude Richter) 6.4 ತೀವ್ರತೆ ದಾಖಲಾಗಿದೆ. ಇನ್ನು, ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ತಡರಾತ್ರಿ ನೇಪಾಳದ ರಿಮೋಟ್‌ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಹಲವು ಮನೆಗಳು ಹಾಗೂ ಕಟ್ಟಡಗಳು ಕುಸಿದಿದ್ದು, ಹಲವು ಬಿಲ್ಡಿಂಗ್‌ಗಳಿಗೆ ಹಾನಿಯಾಗಿದೆ. ತಡರಾತ್ರಿ ಭೂಕಂಪ ಸಂಭವಿಸಿರೋದರಿಂದ ಕತ್ತಲಲ್ಲಿ ಅವಶೇಷಗಳನ್ನು ಹೊರತೆಗೆಯಲಾಗಿದ್ದು, ಕುಸಿದ ಮನೆಗಳು ಮತ್ತು ಕಟ್ಟಡಗಳ ಅವಶೇಷಗಳಲ್ಲಿ ಬದುಕುಳಿದವರನ್ನು ಹುಡುಕುತ್ತಿದ್ದಾರೆ.

ಭೂಕಂಪದ ಕಂಪನಗಳು 500 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ನವದೆಹಲಿಯನ್ನು ಸಹ ತಲುಪಿದೆ. ರಾಷ್ಟ್ರ ರಾಜಧಾನಿ ದೆಹಲಿ – ಎನ್‌ಸಿಆರ್‌ ಸೇರಿ ಉತ್ತರ ಭಾರತದ ಹಲವೆಡೆ ಭೂಕಂಪದ ಅನುಭವವಾಗಿದ್ದು, ನಿದ್ರೆಯಲ್ಲಿದ್ದ ಜನತೆ ಗಾಬರಿಯಿಂದ ಎದ್ದು ಮನೆಯಿಂದ ಹೊರಬಂದಿದ್ದಾರೆ. ಇದನ್ನೂ ಓದಿ : ಪೋಷಕರ ವಿರೋಧ : ಮದುವೆಯಾದ ಮೂರೇ ದಿನಕ್ಕೆ ಪ್ರೇಮಿಗಳ ಭೀಕರ ಹತ್ಯೆ.!

ನೇಪಾಳದ ರುಕುಮ್ ವೆಸ್ಟ್‌ನಲ್ಲಿ ಕನಿಷ್ಠ 36 ಜನರು ಬಲಿಯಾಗಿದ್ದಾರೆ ಎಂದು ದೃಢಪಡಿಸಲಾಗಿದೆ ಮತ್ತು ಜಜರ್ಕೋಟ್‌ನಲ್ಲಿ ಕನಿಷ್ಠ 34 ಜನರು ಮೃತಪಟ್ಟಿದ್ದಾರೆ ಎಂದು ರುಕುಮ್‌ನ ಮುಖ್ಯ ಜಿಲ್ಲಾ ಅಧಿಕಾರಿ ಹರಿ ಪ್ರಸಾದ್ ಪಂತ್ ವೆಸ್ಟ್ ಎಎನ್‌ಐಗೆ ತಿಳಿಸಿದ್ದಾರೆ. ಈ ಮಧ್ಯೆ, ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರು ಭೀಕರ ಪ್ರಾಣಹಾನಿ ಮತ್ತು ಭೂಕಂಪದಿಂದ ಉಂಟಾದ ತೀವ್ರ ಮೂಲಸೌಕರ್ಯ ಹಾನಿಯ ಬಗ್ಗೆ ಸಂತಾಪ ಸೂಚಿಸಿದ್ದಾರೆ.

ಗೌರವಾನ್ವಿತ ಪ್ರಧಾನ ಮಂತ್ರಿ ಪುಷ್ಪ ಕಮಲ್ ದಹಲ್ “ಪ್ರಚಂಡ” ಅವರು ಶುಕ್ರವಾರ ರಾತ್ರಿ 11:47 ಕ್ಕೆ ಜಾಜರಕೋಟ್‌ನ ರಾಮಿದಂಡಾದಲ್ಲಿ ಭೂಕಂಪದಿಂದ ಉಂಟಾದ ಮಾನವ ಮತ್ತು ವಸ್ತು ಹಾನಿಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಗಾಯಗೊಂಡವರ ತಕ್ಷಣದ ರಕ್ಷಣೆ ಮತ್ತು ಪರಿಹಾರಕ್ಕಾಗಿ ಎಲ್ಲಾ 3 ಭದ್ರತಾ ಏಜೆನ್ಸಿಗಳನ್ನು ಸಜ್ಜುಗೊಳಿಸಿದ್ದಾರೆ ಎಂದು ನೇಪಾಳ ಪಿಎಂಒ ಎಕ್ಸ್‌ನಲ್ಲಿ (ಈ ಹಿಂದಿನ ಟ್ವಿಟ್ಟರ್‌) ಪೋಸ್ಟ್ ಮಾಡಿದೆ. ಇದನ್ನೂ ಓದಿ : ಆರೋಗ್ಯದ ಮೇಲೆ ಸ್ಲೋ ಪಾಯ್ಜನ್ ರೀತಿ ಪರಿಣಾಮ ಬೀರುವ ಎಣ್ಣೆಗಳಿವು.!

2015ರಲ್ಲಿ ನೇಪಾಳದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿ ವ್ಯಾಪಕ ವಿನಾಶಕ್ಕೆ ಕಾರಣವಾಗಿತ್ತು. ಆ ವೇಳೆ ಭೂಕಂಪವು ಸುಮಾರು 9,000 ಜನರನ್ನು ಬಲಿ ತೆಗೆದುಕೊಂಡಿದ್ದು, 22,000 ಕ್ಕೂ ಹೆಚ್ಚು ಜನರು ಗಾಯಗೊಂಡರು. ಅಲ್ಲದೆ, 5 ಲಕ್ಷಕ್ಕೂ ಹೆಚ್ಚು ಮನೆಗಳಳು ನಾಶವಾಗಿದ್ದು ಮತ್ತು ಸುಮಾರು 8,000 ಶಾಲೆಗಳು ಹಾನಿಗೊಳಗಾಗಿತ್ತು.

ಕೃಪೆ : ಸುವರ್ಣ ನ್ಯೂಸ್.