ಜನಸ್ಪಂದನ ನ್ಯೂಸ್, ತುಮಕೂರು : ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ಹೊರಟಿದ್ದ ಕಾರೊಂದು ಕೆರೆಗೆ ಬಿದ್ದ ಪರಿಣಾಮ ಒಂದೇ ಕುಟುಂಬ ಮೂವರು ಸಾವನ್ನಪ್ಪಿ, ಓರ್ವ ಪಾರಾದ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬುಕ್ಕಾಪಟ್ಟಣ ಸಮೀಪದ ರಾಮಲಿಂಗಾಪುರ (Ramalingapur) ಬಳಿ ನಡೆದಿದೆ.
ಮಾರುತಿ ಆಲ್ಟೊ ಕಾರಿನಲ್ಲಿ ವೀರಾಪುರ ಗ್ರಾಮದಿಂದ ನಾಲ್ವರೂ ಮಂಜುನಾಥನ ದರ್ಶನಕ್ಕಾಗಿ ಧರ್ಮಸ್ಥಳಕ್ಕೆ ತೆರಳುತ್ತಿದ್ದರು. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಕಾರಿನಲ್ಲಿ ಇದ್ದ ನಾಲ್ವರು ಪ್ರಯಾಣಿಕರಲ್ಲಿ, ಮೂವರು ನೀರುಪಾಲಾಗಿದ್ದು, ಓರ್ವ ಮಾತ್ರ ಬದುಕುಳಿದಿದ್ದಾನೆ.
ಇದನ್ನು ಓದಿ : ಬೆಳಗಾವಿ : ಕರ್ನಾಟಕ ರಾಜ್ಯೋತ್ಸವಕ್ಕೆಂದು ಧ್ವಜಸ್ಥಂಭ ನೆಡುತ್ತಿದ್ದ ವೇಳೆ ವಿದ್ಯುತ್ ಶಾಕ್‌ಗೆ ಯುವಕ ಬಲಿ.!
ಈ ದುರ್ಘಟನೆಯಲ್ಲಿ ಪ್ರವೀಣ ಎನ್ನುವವರು ಪಾರಾಗಿದ್ದು, ಅವರ ಪತ್ನಿ ಯಮುನಾ, ಮಾವ ದೊಡ್ಡಣ್ಣ, ಅತ್ತೆ ಸಣ್ಣಮ್ಮ ಮೃತಪಟ್ಟಿದ್ದಾರೆ. ಇನ್ನೂ ಇವರು ಶಿರಾ ತಾಲೂಕಿನ ವೀರಾಪುರ ಗ್ರಾಮದವರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಘಟನೆ ಬಗ್ಗೆ ಮಾಹಿತಿ ದೊರೆತ ಕೂಡಲೇ ಶಿರಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಅಗ್ನಿಶಾಮಕ ದಳದ ಸಿಬ್ಬಂದಿಯು ಮೂವರ ಶವಗಳನ್ನು ಹೊರೆತೆಗೆದಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕಾರನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.