ಫುಟ್‌ಪಾತ್ ಮೇಲೆ ಚಲಿಸಿದ ಕಾರು : ಓರ್ವ ಯುವತಿ ಸಾವು, ನಾಲ್ವರಿಗೆ ಗಂಭೀರ ಗಾಯ.!

ಜನಸ್ಪಂದನ ನ್ಯೂಸ್, ಮಂಗಳೂರು : ಮಂಗಳೂರು ನಗರದ ಲೇಡಿಹಿಲ್ ಬಳಿ ಫುಟ್‌ಪಾತ್ ಮೇಲೆ ನಡೆದು ಹೋಗುತ್ತಿದ್ದ ಐವರು ಯುವತಿಯರ ಮೇಲೆ ಕಾರು ಹರಿದ ಘಟನೆ ನಡೆದಿದೆ.

ಯುವತಿಯರ ಮೇಲೆ ಕಾರು ಹರಿದ ಪರಿಣಾಮ ಸ್ಥಳದಲ್ಲಿಯೇ ಓರ್ವ ಯುವತಿ ಮೃತಪಟ್ಟು, ಇನ್ನುಳಿದ ನಾಲ್ವರು ಯುವತಿಯರು ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾರೆ.

ಈ ದುರ್ಘಟನೆಯಲ್ಲಿ ಸುರತ್ಕಲ್‌ನ ರೂಪಶ್ರೀ (23) ಎಂಬುವವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ರೂಪಶ್ರೀ ಕುದ್ರೋಳಿ ದೇವಸ್ಥಾನದಿಂದ ವಾಪಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ರೂಪಶ್ರೀ ಜೊತೆಗಿದ್ದ ಇನ್ನುಳಿದ ಯುವತಿಯರನ್ನು ಸ್ವಾತಿ (26), ಹಿತ್ನವಿ (16), ಕೃತಿಕಾ(16) ಮತ್ತು ಯತಿಕಾ(12) ಎಂಬುವವರಿಗೆ ಗಂಭೀರ ಗಾಯಗಳಾಗಿವೆ.

ಈ ಯುವತಿಯರು ಬುಧವಾರ ಲೇಡಿಹಿಲ್‌ನಿಂದ ಮಣ್ಣಗುಡ್ಡ ಜಂಕ್ಷನ್ ಕಡೆಗೆ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಇದೆ ಸಮಯಕ್ಕೆ ಮಣ್ಣಗುಡ್ಡಯಿಂದ ಲೇಡಿಹಿಲ್ ಕಡೆಗೆ ಕಾರು ಚಾಲಕ ಕಮಲೇಶ್ ಬಲದೇವ್ ಎಂಬಾತ ಕಾರು ಚಲಾಯಿಸಿಕೊಂಡು ಬಂದ ಯುವತಿಯರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ನಂತರ ಸ್ವಲ್ಪ ದೂರ ಹೋದ ಬಳಿಕ ಕಾರನ್ನು ನಿಲ್ಲಿಸಿ ಟ್ರಾಫಿಕ್ ವೆಸ್ಟ್ ಪೊಲೀಸರಿಗೆ ಶರಣಾಗಿದ್ದಾನೆ.

ಇನ್ನು ಅಪಘಾತದ ಬೆಚ್ಚಿ ಬೀಳಿಸುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಹುಂಡೈ ಇಯಾನ್ ಕಾರು ಇದಾಗಿದ್ದು, ಆರೋಪಿ ಚಾಲಕ ರಿಯಲ್ ಎಸ್ಟೇಟ್ ಏಜೆಂಟ್ ಎಂದು ತಿಳಿದುಬಂದಿದೆ.