ಪುಸ್ತಕದ ಬ್ಯಾಗಿನಲ್ಲಿ ಕೈ ಹಾಕಿದ ವಿದ್ಯಾರ್ಥಿ ಸಾವು ; ಏನಿದು ಘಟನೆ.?

ಜನಸ್ಪಂದನ ನ್ಯೂಸ್, ಡೆಸ್ಕ್ : ಕ್ಲಾಸ್ ರೂಂನಲ್ಲಿ ಓದುತ್ತಾ ಕುಳಿತಿದ್ದ 9ನೇ ತರಗತಿ ವಿದ್ಯಾರ್ಥಿಯೋರ್ವ ಪಕ್ಕದಲ್ಲಿದ್ದ ಪುಸ್ತಕದ ಚೀಲಕ್ಕೆ ಕೈ ಹಾಕಿ ಪ್ರಾಣ ಕಳೆದುಕೊಂಡ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಪ್ರಕಾಶಂ ಜಿಲ್ಲೆ ಮಾರ್ಕಾಪುರಂ ಮಂಡಲ ರಾಯವರಂ ಜಿ.ಪಂ. ಹೈಸ್ಕೂಲ್‌ನ ವಿದ್ಯಾರ್ಥಿ ರವಿಕಿರಣ (14) ಮೃತಪಟ್ಟಿದ್ದು, ಈತನಿಗೆ ಚೇಳು ಕಚ್ಚಿತ್ತು ಎನ್ನಲಾಗಿದೆ.

9ನೇ ತರಗತಿಯ ವಿದ್ಯಾರ್ಥಿ ರವಿಕಿರಣ ಪುಸ್ತಕಗಳಿದ್ದ ಬ್ಯಾಗಿನೊಳಕ್ಕೆ ಕೈಹಾಕಿದ್ದಾನೆ. ಈ ವೇಳೆ ಬ್ಯಾಗಿನೊಳಗಿದ್ದ ಚೇಳು ರವಿ ಕೈಗೆ ಕುಟುಕಿದೆ. ತಕ್ಷಣ ಆತ ಭಯದಿಂದ ಚೀರಾಡಿದ್ದಾನೆ. ಆತನ ಕ್ಲಾಸ್ ಮೇಟ್ಸ್ ಸಹ ಗಾಬರಿಯಾಗಿದ್ದಾರೆ.

ಶಾಲೆಯ ಮುಖ್ಯೋಪಾಧ್ಯಾಯರು ತಕ್ಷಣ ರವಿಕಿರಣವನ್ನು ಆಸ್ಪತ್ರೆಗೆ ರವಾನಿಸಿ, ಇತ್ತ ಚೇಳನ್ನು ಕೊಂದಿದ್ದಾರೆ.

ಆದರೆ ರವಿಕಿರಣ ಚಿಂತಾಜನಕ ಸ್ಥಿತಿ ತಲುಪಿದ್ದಾನೆ. ಅಕ್ಷರಶಃ ಚೇಳಿನ ವಿಷ ಅವನ ಮೈಯೆಲ್ಲಾ ಹರಡಿದೆ. ಆದರೂ ಗುಂಟೂರು ಜಿಜಿಎಚ್‌ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರವಿಕಿರಣ ಕೊನೆಯುಸಿರೆಳೆದಿದ್ದಾನೆ ಎಂದು ವರದಿಯಿಂದ ತಿಳಿದುಬಂದಿದೆ.

ಮಾರ್ಕಾಪುರದ ಗ್ರಾಮೀಣ ಎಸ್ಐ ವೆಂಕಟೇಶ್ ನಾಯ್ಕ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.