ಜನಸ್ಪಂದನ ನ್ಯೂಸ್, ಮಂಗಳೂರು : ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಎಆರ್ ಪೊಲೀಸ್ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಕೊನೆಯುಸಿರೆಳೆದ ಘಟನೆ ನಡೆದಿದೆ.
ಮೃತ ದುರ್ದೈವಿ ಸೋಮನಗೌಡ ಚೌಧರಿ (31) ಎಂದು ತಿಳಿದುಬಂದಿದೆ.
ಇವರು ಮಂಗಳೂರು ಸಿಎಆರ್ ತುಕಡಿಯ ಹೆಡ್ ಕಾನ್ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಸೋಮನಗೌಡ ಅವರು ತಮ್ಮ ಮೇಲಾಧಿಕಾರಿಗೆ ಅನಾರೋಗ್ಯದ ಕಾರಣ ಅವರನ್ನು ಆಸ್ಪತ್ರೆಗೆ ಬಿಟ್ಟು ಜೀಪ್ ಬಳಿ ಬಂದ ವೇಳೆ ಹೃದಯಾಘಾತವಾಗಿದೆ ಎನ್ನಲಾಗಿದೆ. ತಕ್ಷಣ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ರವಾನಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸೋಮನಗೌಡ ಸ್ವಂತ ಹಣದಿಂದ ಕೊರೊನಾ ಸಂದರ್ಭದಲ್ಲಿ ಬಡವರಿಗೆ ಸಹಾಯ ಮಾಡಿದ್ದರು. ಅಲ್ಲದೆ, ವರ್ಷಕ್ಕೆ ಎರಡು ಬಾರಿ ರಕ್ತದಾನ ಸಹ ಮಾಡುತ್ತಿದ್ದರು ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.
ಇಂದು ಮಂಗಳೂರಿನಲ್ಲೇ ಸೋಮನಗೌಡ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.