ತಾನೂ ಮುಳುಗಿದ್ರೂ ಭಕ್ತನನ್ನು ಮುಳುಗಿಸದೇ ಬದುಕಿಸಿದ ಗಣೇಶ ; ಪವಾಡಸದೃಶ ಬದುಕುಳಿದ ಬಾಲಕ.!

 

ಜನಸ್ಪಂದನ ನ್ಯೂಸ್, ಡೆಸ್ಕ್ : ಗಣೇಶ ವಿಸರ್ಜನೆ ವೇಳೆ 13 ವರ್ಷದ ಬಾಲಕನೋರ್ವ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿ 36 ಗಂಟೆಗಳ ಬಳಿಕ ಜೀವಂತವಾಗಿ ಪತ್ತೆಯಾದ ಪವಾಡ ಸದೃಶ ಘಟನೆ ಸೂರತ್‌ನಲ್ಲಿ ನಡೆದಿದೆ.

ಸೂರತ್‌ನ ನಿವಾಸಿ ಲಖನ್ ದೇವಿಪೂಜಕ್ (13) ಎಂಬ ಬಾಲಕ ತನ್ನ ಅಜ್ಜಿ ಮತ್ತು ಸಹೋದರರ ಜೊತೆ ಬೀಚ್‌ನಲ್ಲಿ ಗಣೇಶ ವಿಸರ್ಜನೆಯನ್ನು ನೋಡಲೆಂದು ಹೋಗಿದ್ದನು. ಅಲ್ಲಿ ಸಹೋದರರ ಜೊತೆ ಸಮುದ್ರದಲ್ಲಿ ಈಜಲು ತೆರಳಿದ್ದಾನೆ. ಈ ವೇಳೆ ಲಖನ್ ಮತ್ತು ಅವನ ಸಹೋದರ ಸಮುದ್ರದಲ್ಲಿ ಮುಳುಗಲು ಪ್ರಾರಂಭಿಸಿದರು. ಲಖನ್ ಸಹೋದರನನ್ನು ಜನರು ರಕ್ಷಿಸಿದರೆ, ಲಖನ್ ನಾಪತ್ತೆಯಾಗಿದ್ದ.

ತೀವ್ರ ಶೋಧ ನಡೆಸಿದರೂ ಬಾಲಕ ಪತ್ತೆಯಾಗಿರಲಿಲ್ಲ. ಮರುದಿನ ಸಹ ಹುಡುಕಾಟ ಮುಂದುವರೆದಿತ್ತು. ಆದರೆ ಸಮುದ್ರದಲ್ಲಿ ಮೀನುಗಾರರು ಲಖನ್‌ನನ್ನು ರಕ್ಷಿಸಿದ್ದಾರೆ ಎಂಬ ಮಾಹಿತಿ ಪೊಲೀಸರಿಂದ ಕುಟುಂಬಸ್ಥರಿಗೆ ತಿಳಿದುಬಂದಿದೆ.

ಬಾಲಕ ಬದುಕಿದ್ಹೇಗೆ.?
ಸಮುದ್ರಕ್ಕೆ ದೋಣಿಯಲ್ಲಿ ಸುಮಾರು ಎಂಟು ಮೀನುಗಾರರು ಹೋಗಿದ್ದರು. ಈ ವೇಳೆ ಅವರು ಸಮುದ್ರದ ಮಧ್ಯ ಮರದ ಹಲಗೆಯ ಮೇಲೆ ಬಾಲಕ ಕುಳಿತುಕೊಂಡಿರುವುದು ಗಮನಕ್ಕೆ ಬಂದಿದೆ. ಸಹಾಯಕ್ಕಾಗಿ ಆತ ಕೈಗಳನ್ನು ಎತ್ತಿ ಸಿಗ್ನಲ್‌ ಕೊಡುತ್ತಿದ್ದ. ಮೀನುಗಾರರು ಕೂಡಲೇ ಆತನ ಬಳಿಗೆ ಹೋಗಿ ದೋಣಿಯೊಳಗೆ ಕರೆದುಕೊಂಡು ಬಂದಿದ್ದಾರೆ.

ಬಾಲಕ ಗಣೇಶ ಮೂರ್ತಿಯ ಅವಶೇಷ ಬಳಿ ಮರದ ಹಲಗೆಯ ಸಹಾಯದಿಂದ ಬಚಾವಾಗಿದ್ದು, ಜೀವಂತವಾಗಿ ಬದುಕಿದ್ದಾನೆ ಎಂದು ತಿಳಿದುಬಂದಿದೆ. ಬಾಲಕ ಸಮುದ್ರದಲ್ಲಿ ಪತ್ತೆಯಾದ ಸ್ಥಳವು ಸಮುದ್ರ ತೀರದಿಂದ ಸುಮಾರು 14 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದೆ. ಮೀನುಗಾರರು ಬಾಲಕನೊಂದಿಗೆ ಬಿಳಿಮೊರಾ ತಲುಪಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವರದಿಯಾಗಿದೆ.