ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ ಪಾರಾಗಿದ್ದ ಯುವತಿ, ಅಪಾರ್ಟ್‌ಮೆಂಟ್‌ನಿಂದ ಬಿದ್ದು ಸಾವು.!

ಜನಸ್ಪಂದನ ನ್ಯೂಸ್, ಬೆಂಗಳೂರು : ಧರ್ಮಸ್ಥಳದ ಸಮೀಪ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯನ್ನು ಆ ದಿನ ಸ್ಥಳೀಯರು ರಕ್ಷಿಸಿದ್ದರು.

ಆದರೆ ಅದೇ ಯುವತಿ ಇದೀಗ ಅಪಾರ್ಟ್‌ಮೆಂಟ್‌ ಮೇಲಿಂದ ಬಿದ್ದು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವತಿ ಹದಿನೇಳು ವರ್ಷದ ವಿಜಯಲಕ್ಷ್ಮೀ ಎಂದು ತಿಳಿದುಬಂದಿದೆ. ಈಕೆ ಖಿನ್ನತೆಗೆ ಒಳಗಾಗಿದ್ದು, ಕೆಲ ದಿನಗಳ ಹಿಂದೆ ನೇತ್ರಾವತಿಗೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು.

ಆದರೆ ಅದನ್ನು ಕಂಡ ಸ್ಥಳೀಯರು ಆಕೆಯನ್ನು ರಕ್ಷಣೆ ಮಾಡಿದ್ದರು. ಅನಂತರ ವಿಜಯಲಕ್ಷ್ಮೀಗೆ ಬುದ್ಧಿವಾದ ಹೇಳಿದ್ದರು. ಅನಂತರ ಆಕೆಯ ಪೋಷಕರಿಗೆ ಕರೆ ಮಾಡಿ ತಿಳಿಸಿ, ವಿಜಯಲಕ್ಷ್ಮೀಯನ್ನು ಬೆಂಗಳೂರಿಗೆ ಕಳುಹಿಸಿದ್ದರು.

ಧರ್ಮಸ್ಥಳದಿಂದ ಬೆಂಗಳೂರಿಗೆ ಬಂದಿದ್ದ ವಿಜಯಲಕ್ಷ್ಮೀ ಮತ್ತೆ ಅದೇ ಕೆಲಸ ಮಾಡಿದ್ದಾಳೆ. ಬ್ಯಾಟರಾಯನಪುರದ ಬ್ರೈಡ್‌ ಅಪಾರ್ಟ್‌ಮೆಂಟ್‌ನ ಟೆರೇಸ್‌ಗೆ ಹೋಗಿ ಅಲ್ಲಿಂದ ಹಾರಿ ಪ್ರಾಣ ಬಿಟ್ಟಿದ್ದಾಳೆ.