ನದಿಯಲ್ಲಿ ಮುಳುಗಿದ ದೋಣಿ ; ಶಾಲೆಗೆ ಹೋಗುತ್ತಿದ್ದ 18 ಮಕ್ಕಳು ನೀರುಪಾಲು.?

ಜನಸ್ಪಂದನ ನ್ಯೂಸ್, ಡೆಸ್ಕ್ : ಶಾಲಾ ಮಕ್ಕಳ ದೋಣಿಯೊಂದು ಬಾಗಮತಿ ನದಿಯಲ್ಲಿ ಮುಳುಗಿರುವ ಘಟನೆ ಬಿಹಾರದ ಮುಜಾಫರ್‌ಪುರದಲ್ಲಿ ಗುರುವಾರ (ಸೆಪ್ಟೆಂಬರ್ 14) ಬೆಳಗ್ಗೆ ನಡೆದಿದೆ.

ಈ ದುರಂತದಲ್ಲಿ ಕನಿಷ್ಠ 18 ಮಕ್ಕಳು ನೀರುಪಾಲಾಗಿದ್ದಾರೆ ಎಂದು ಶಂಕಿಸಲಾಗಿದೆ.

ಇಂದು (ಸೆಪ್ಟೆಂಬರ್ 14) ಬೆಳಗ್ಗೆ ದೋಣಿಯಲ್ಲಿ ಸುಮಾರು 34 ಮಕ್ಕಳು ಸಂಚರಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ದುರ್ಘಟನೆ ನಡೆದಿದ್ದು, ಸ್ಥಳೀಯರ ನೆರವಿನಿಂದ ಸುಮಾರು 20 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ನಿಖರ ಅಂಕಿಅಂಶಗಳು ದೊರೆತಿಲ್ಲ.

ಹೀಗಾಗಿ ಸುಮಾರು 18 ಮಂದಿ ಮಕ್ಕಳು ನೀರುಪಾಲಾಗಿದ್ದಾರೆ ಎಂದು ಶಂಕಿಸಲಾಗಿದೆ. ಈ ಮಕ್ಕಳು ಸ್ಥಳೀಯ ಗ್ರಾಮದಿಂದ ನದಿಯಾಚೆಗಿನ ಶಾಲೆಗೆ ತೆರಳುತ್ತಿದ್ದರು.

ಬಿಹಾರದ ಮುಜಾಫರ್‌ಪುರದ ಬೆನಿಯಾಬಾದ್ ಒಪಿ ಪ್ರದೇಶದ ಭಟ್ಗಾಮಾ ಗ್ರಾಮದ ಮಧುರಪಟ್ಟಿ ಘಾಟ್ ಬಳಿ ಈ ಘಟನೆ ನಡೆದಿದೆ. ನಾಪತ್ತೆಯಾಗಿರುವ ಮಕ್ಕಳಿಗಾಗಿ ಶೋಧ ನಡೆಸಲಾಗುತ್ತಿದೆ.

SDRF ತಂಡ ಸ್ಥಳಕ್ಕೆ ತಲುಪಿದೆ. ಸ್ಥಳೀಯ ಮುಳುಗುಗಾರರು ಕೂಡ ಮಕ್ಕಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನಷ್ಟು ವಿವರಗಳು ದೊರೆಯಬೇಕಿದೆ. (ಎಜೇನ್ಸಿಸ್)