2 ತಿಂಗಳ ಗರ್ಭಿಣಿ ಅನುಮಾನಾಸ್ಪದ ಸಾವು; ಗಂಡನಿಂದಲೇ ಕೊಲೆಯಾದ್ಳಾ.?

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ (Bengaluru) ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಮೂರು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನವ ವಿವಾಹಿತೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.

ಮೃತ ಯುವತಿ ಕೃಷ್ಣವೇಣಿ (26) ಎಂದು ತಿಳಿದುಬಂದಿದೆ. ಮೂರು ತಿಂಗಳ ಹಿಂದಷ್ಟೇ ಕೃಷ್ಣವೇಣಿಯನ್ನು ವಿವಾಹ ಮಾಡಿಕೊಡಲಾಗಿತ್ತು.

ಕುಟುಂಬಸ್ಥರು ಕೃಷ್ಣವೇಣಿಯನ್ನು ಕೋಲಾರ ಮೂಲದ ಪೃಥ್ವಿರಾಜ್ (30) ಎಂಬಾತನ ಜೊತೆಗೆ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಪತಿ ಪೃಥ್ವಿರಾಜ್​​ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು ಎನ್ನಲಾಗಿದೆ.

ಪ್ರೀತಿಯ ಮಗಳನ್ನು ಕಳೆದುಕೊಂಡ ಯುವತಿಯ ಪೋಷಕರು, ತಮ್ಮ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಅಳಿಯನ ಕುಟುಂಬಸ್ಥರ ವಿರುದ್ಧ ಆರೋಪ ಮಾಡಿದ್ದಾರೆ.

ಮದುವೆಯಾದ ಎರಡೇ ತಿಂಗಳಿಗೆ ಪತಿ ಕಿರಿಕಿರಿ ಶುರು ಮಾಡಿದ್ದ. ಮೂರು ತಿಂಗಳಿಗೆ ನಾಲ್ಕೈದು ಬಾರಿ ಜಗಳ ಮಾಡಿ ಕೃಷ್ಣವೇಣಿಯನ್ನು ತವರಿಗೆ ಕಳುಹಿಸಿದ್ದ. ಗುರುವಾರವು ಕುಡಿದು ಬಂದು ಗಲಾಟೆ ಮಾಡಿ ಮಗಳನ್ನು ಹತ್ಯೆ ಮಾಡಿದ್ದಾನೆ. ಕೃಷ್ಣವೇಣಿ ಎರಡು ತಿಂಗಳ ಗರ್ಭಿಣಿ ಆಗಿದ್ದಳು ಎಂದು ಆರೋಪಿಸಿದ್ದಾರೆ.

ಘಟನೆ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.