ಕಬ್ಬು ತುಂಬಿದ ಲಾರಿಗೆ ತಗುಲಿದ ವಿದ್ಯುತ್ ತಂತಿ ; ಸ್ಥಳದಲ್ಲೇ ಇಬ್ಬರು ಸಾವು..!

ಜನಸ್ಪಂದನ ನ್ಯೂಸ್, ಚಾಮರಾಜನಗರ : ಚಾಮರಾಜನಗರ ಜಿಲ್ಲೆ (Chamarajanagar) ಕೊಳ್ಳೇಗಾಲ ತಾಲ್ಲೂಕಿನ ಗುಂಡಾಲ್ ಸಮೀಪ ಕಬ್ಬು ತುಂಬಿದ ಲಾರಿಗೆ ವಿದ್ಯುತ್ ತಂತಿ ತಗುಲಿ ಇಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ದಾರುಣ ನಡೆದಿದೆ.

ಈ ದುರ್ಘಟನೆ ಶನಿವಾರ ಮುಂಜಾನೆ ನಡೆದಿದ್ದು, ದುರಂತದಲ್ಲಿ ಲಾರಿಯಲ್ಲಿದ್ದ ಡ್ರೈವರ್ ಹಾಗೂ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಲಾರಿಯೊಂದು ಇಂದು ಮುಂಜಾನೆ ಕಬ್ಬು ತುಂಬಿಕೊಂಡು ಹಯೋಗುತ್ತಿದ್ದಾಗ, ಲಾರಿಯಲ್ಲಿದ್ದ ಕಬ್ಬಿನ ಭಾಗಕ್ಕೆ ವಿದ್ಯುತ್‌ ತಂತಿ ತಗುಲಿದೆ. ಕಬ್ಬು ಹಸಿಯಾದ ಹಿನ್ನಲೆಯಲ್ಲಿ ಇಡೀ ಲಾರಿಗೆ ವಿದ್ಯುತ್‌ ಪ್ರವಹಿಸಿದೆ. ಆಗ ಡ್ರೈವರ್‌ ಮತ್ತು ಕ್ಲೀನರ್‌ ವಿದ್ಯುತ್‌ ಆಘಾತಕ್ಕೆ ಒಳಗಾಗಿದ್ದಾರೆ. ಅವರು ಲಾರಿಯಿಂದ ಹೊರಗೆ ಜಿಗಿಯುವ ಪ್ರಯತ್ನ ಮಾಡಿದ್ದರೂ ಅಷ್ಟು ಹೊತ್ತಿಗೆ ಶಾಕ್‌ ಹೊಡೆದಿದೆ.

ವಿದ್ಯುತ್ ತಂತಿಗಳು ಜೋತು ಬಿದ್ದಿರುವುದರಿಂದ ಲಾರಿಗೆ ಹತ್ತಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅಷ್ಟೆ ಅಲ್ಲದೆ ಲಾರಿಯಲ್ಲಿ ಅತ್ಯಂತ ಎತ್ತರಕ್ಕೆ ಕಬ್ಬು ಕಟ್ಟಿಕೊಂಡು ಸಾಗಲಾಗುತ್ತಿದ್ದು, ಆ ಕಾರಣಕ್ಕಾಗಿ ಅದು ವಿದ್ಯುತ್‌ ತಂತಿಯನ್ನು ಸ್ಪರ್ಶಿಸಿದೆ ಎಂದೂ ಹೇಳಲಾಗುತ್ತಿದೆ.

ಇಲ್ಲಿರುವ ವಿದ್ಯುತ್‌ ತಂತಿಗಳ ಎತ್ತರವನ್ನು ಲೆಕ್ಕಿಸದೆ ಕಬ್ಬು ಲೋಡ್‌ ಮಾಡಿದ್ದೂ ಒಂದು ಕಾರಣ ಎಂಬ ಆಪಾದನೆ ಇದೆ.

ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ದೌಡಾಯಿಸಿದ್ದಾರೆ.