ಬೆಳಗಾವಿ : ಭೀಕರ ರಸ್ತೆ ಅಪಘಾತ, ಅಣ್ಣ-ತಂಗಿಯ ದಾರುಣ ಸಾವು.!

ಜನಸ್ಪಂದನ ನ್ಯೂಸ್, ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಲಿಕವಾಡ-ನಣದಿವಾಡಿ ರಸ್ತೆಯಲ್ಲಿ ಕಾರು ಹಾಗೂ ಸ್ಕೂಟಿ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಕೂಟಿ ಮೇಲಿದ್ದ ಅಣ್ಣ-ತಂಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತಪಟ್ಟವರು ಪ್ರಶಾಂತ ನಾಗರಾಜ ತುಳಸಿಕಟ್ಟಿ (21), ಪ್ರಿಯಾಂಕ ನಾಗರಾಜ ತುಳಸಿಕಟ್ಟಿ (19) ಎಂದು ತಿಳಿದು ಬಂದಿದೆ. ಇವರು ಮೂಲತಃ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದವರು.

ಮಧ್ಯಾಹ್ನ 12 ಗಂಟೆಗೆ ಚಿಕ್ಕೋಡಿಯ ಪರಟಿನಾಗಲಿಂಗೇಶ್ವರ ದೇವಾಲಯಕ್ಕೆ ಸ್ಕೂಟಿಯ ಮೇಲೆ ತೆರಳುತ್ತಿರುವ ವೇಳೆ ಕಾರು ಹಾಗೂ ಸ್ಕೂಟಿ ಮುಖಾಮುಖಿ ಡಿಕ್ಕಿಯಾಗಿವೆ.

ಪರಿಣಾಮ ಬೈಕ್ ಮೇಲಿದ್ದ ಅಣ್ಣ ಪ್ರಶಾಂತ ತುಳಸಿಕಟ್ಟಿ, ತಂಗಿ ಪ್ರಿಯಾಂಕ ತುಳಸಿಕಟ್ಟಿ ರಸ್ತೆ ಪಕ್ಕಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯ ಮೂಲಕ ಕೊಲ್ಲಾಪೂರದ ಕನ್ನೇರಿಯ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.

ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.