ರೈಲಿನಲ್ಲಿ ಸಿಲಿಂಡರ್ ಸ್ಪೋಟ : 10 ಜನರು ಸಜೀವ ದಹನ, ವಿಡಿಯೋ ವೀಕ್ಷಿಸಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ರೈಲ್ವೆ ಜಂಕ್ಷನ್ ಬಳಿ ನಿಂತಿದ್ದ ಪ್ರವಾಸಿ ಕೋಚ್ ನಲ್ಲಿ (ಪಾರ್ಟಿ ಕೋಚ್) ಸಂಭವಿಸಿದ ಬೆಂಕಿ ಅವಘಡದಲ್ಲಿ ಮೂವರು ಮಹಿಳೆಯರು ಸೇರಿದಂತೆ ಹತ್ತು ಪ್ರಯಾಣಿಕರು ಸಜೀವ ದಹನಗೊಂಡ ಘಟನೆ ಮಧುರೈನಲ್ಲಿ ‌ನಡೆದಿದೆ.

ಇಂದು (ಅ.26) ಬೆಳಗಿನ ಜಾವ 5.15ರ ಸುಮಾರಿಗೆ ಕೋಚ್ ನಲ್ಲಿದ್ದ ಪ್ರಯಾಣಿಕರೊಬ್ಬರು ಎಲ್ಪಿಜಿ ಸಿಲಿಂಡರ್ ಬಳಸಿ ಟೀ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದ್ದು, ಎಲ್ಲೆಡೆ ಬೆಂಕಿ ಹೊತ್ತಿಕೊಂಡಿದೆ.

ಈ ವೇಳೆ ಐವರು ಪುರುಷರು ಮತ್ತು ಮೂವರು ಮಹಿಳೆಯರು ಸುಟ್ಟು ಕರಕಲಾಗಿದ್ದಾರೆ ಎಂದು ವರದಿಯಾಗಿದೆ.

ಈ ದುರ್ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಚ್ ನಿಂದ 55 ಜನರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.

ಮಧುರೈನಲ್ಲಿ ನಿಲ್ಲಿಸಿದ್ದ ಈ ರೈಲು ತಿರುಪತಿ-ರಾಮೇಶ್ವರಂ-ಕನ್ಯಾಕುಮಾರಿ ಮುಂತಾದ ಸ್ಥಳಗಳಿಗೆ ಪ್ರಯಾಣಿಸಬೇಕಿತ್ತು. ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ ಎಂದು ದಕ್ಷಿಣ ರೈಲ್ವೆ ಇಂದು ಪ್ರಕಟಿಸಿದೆ.

ಘಟನೆ ನಡೆದ ಸ್ಥಳಕ್ಕೆ ಮದುರೈ ಜಿಲ್ಲಾಧಿಕಾರಿ ಎಂ.ಎಸ್. ಸಂಗೀತಾ ಧಾವಿಸಿ ವಿಚಾರಣೆ ನಡೆಸಿದ್ದಾರೆ.