ಸರ್ಕಾರದ ವಿರುದ್ಧ ಡೆತ್‌ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ.!

ಜನಸ್ಪಂದನ ನ್ಯೂಸ್, ರಾಯಚೂರು : ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಶಿಕ್ಷಕನಾಗುವ ಕನಸು ಹೊತ್ತಿದ್ದ ಯುವಕನೊಬ್ಬ ಅದು ಕೈಗೂಡದೆ ಹೋದ ಹಿನ್ನೆಲೆ ಬೇಸರದಲ್ಲಿ ಸರ್ಕಾರದ ವಿರುದ್ಧ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತಪಟ್ಟ ಯುವಕ ಚಿಕ್ಕ ಬೂದೂರಿನ ಯುವಕ ಚನ್ನಬಸವ (25) ಎಂದು ತಿಳಿದುಬಂದಿದೆ.

ಇವರು ಜ್ಞಾನಗಂಗಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಡೆತ್ ನೋಟ್ ಸಹ ಪತ್ತೆಯಾಗಿದೆ.

6-8ನೇ ತರಗತಿ ಶಿಕ್ಷಕರ ಹುದ್ದೆಗೆ ಚನ್ನಬಸವ ಆಯ್ಕೆಯಾಗಿದ್ದು, 2022ರಲ್ಲಿ ನೇಮಕಾತಿ ಲಿಸ್ಟ್‌ನಲ್ಲಿ ಅವರ ಹೆಸರು ಸಹ ಇತ್ತು. ಆದರೆ ಕೊನೆ ಕ್ಷಣದಲ್ಲಿ ಹೊರಬಿದ್ದ ಮತ್ತೊಂದು ಲಿಸ್ಟ್‌ನಲ್ಲಿ ಅವರ ಹೆಸರು ಇರಲಿಲ್ಲ. ಬಳಿಕ ಮತ್ತೊಂದು ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದರೂ ಆದರೆ ಅದರಲ್ಲಿ ಫೇಲಾಗಿದ್ದರು. ಇದರಿಂದ ತೀವ್ರ ಬೇಸರಗೊಂಡಿದ್ದ ಚನ್ನಬಸವ ಜೀವನದಲ್ಲಿ ಆಸಕ್ತಿ ಕಳೆದುಕೊಂಡಿದ್ದ ಎನ್ನಲಾಗಿದೆ.

ಯಾರೋ ಮಾಡಿದ ತಪ್ಪಿಗೆ ವ್ಯವಸ್ಥೆ ನನಗೆ ಶಿಕ್ಷೆ ನೀಡಿದೆ. ಆಡಳಿತ ವ್ಯವಸ್ಥೆಗೆ ನನ್ನ ಧಿಕ್ಕಾರವಿರಲಿ ಎಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.