ಪೊಲೀಸ್ ಠಾಣೆಯ ಎದುರೇ ಯುವತಿಗೆ ಚಾಕು ಇರಿದು ಹತ್ಯೆ ಮಾಡಿದ ಯುವಕ.!

ಜನಸ್ಪಂದನ ನ್ಯೂಸ್, ದಕ್ಷಿಣ ಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಮಹಿಳಾ ಪೊಲೀಸ್ ಠಾಣೆಯ ಎದುರೇ ಹಾಡಹಗಲೇ ಯುವತಿಯೊಬ್ಬಳಿಗೆ ಯುವಕನೊಬ್ಬ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ನಡೆದಿದೆ.

ಬಂಟ್ವಾಳ ತಾಲೂಕಿನ ವಿಟ್ಲ ಭಾಗದ ಅಳಿಕೆ ನಿವಾಸಿ ಗೌರಿ (18)ಯನ್ನು ಪದ್ಮರಾಜ್ ಎಂಬಾತ ಕೊಲೆ ಮಾಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮಹಾಲಿಂಗೇಶ್ವರ ದೇವಸ್ಥಾನದ ಬಳಿಯೇ ಯುವಕ ಯುವತಿಗೆ ಚಾಕುವಿನಿಂದ ಇರಿದಿದ್ದು, ಆಕೆ ಚಿಂತಾಜನಕ ಸ್ಥಿತಿಯಲ್ಲಿದ್ದಳು. ಯುವತಿಯನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾಳೆ.

ಇನ್ನು ಘಟನೆಗೆ ಪ್ರೇಮ ವೈಫಲ್ಯವೇ ಕಾರಣ ಎಂದು ತಿಳಿದು ಬಂದಿದೆ. ಕಳೆದ ಕೆಲ ವರ್ಷಗಳಿಂದ ಗೌರಿ ಹಾಗೂ ಪದ್ಮರಾಜ್‌ ಪ್ರೀತಿಸುತ್ತಿದ್ದು, ಇದೇ ವಿಚಾರವಾಗಿ ಗುರುವಾರ ಮಧ್ಯಾಹ್ನ ಪುತ್ತೂರು ಬಸ್‌ ನಿಲ್ದಾಣ ಬಳಿ ಇಬ್ಬರಿಗೂ ವಾಗ್ವಾದ ನಡೆದಿತ್ತು.

ಬಳಿಕ ಯುವತಿ ಗೌರಿ ಮಹಿಳಾ ಠಾಣೆಗೆ ದೂರು ನೀಡಲು ಬಂದಿದ್ದರು. ಈ ವೇಳೆ ಪದ್ಮರಾಜ್‌ ಚೂರಿ ಇರಿದಿದ್ದ ಎಂಬ ಮಾಹಿತಿ ಲಭ್ಯವಾಗಿದೆ.