ಬೆಳಗಾವಿ : ರಾ.ಹೆ. 4 ರಲ್ಲಿ ಪಲ್ಟಿಯಾದ ಲಾರಿ ; ಚಾಲಕ ಸಾವು, ಕ್ಲೀನರ್’ಗೆ ಗಂಭೀರ ಗಾಯ.!

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಸ್ತವಂದಿ ಘಾಟಿನಲ್ಲಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ರಲ್ಲಿ, ಸ್ಟೀಲ್‌ ಪೈಪುಗಳನ್ನು ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಸಾಯಂಕಾಲ ನಡೆದಿದೆ.

ಮೃತ ದುರ್ದೈವಿ ಚಾಲಕನನ್ನು ಪ್ರದೀಪ್ (50) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಕ್ಲೀನರ್ ರಂಗನಾಥನ್ (20) ಗಾಯಗೊಂಡಿದ್ದು, ಅವರನ್ನು ಸಮೀಪದ ನಿಪ್ಪಾಣಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಈ ಅಪಘಾತದ ರಭಸಕ್ಕೆ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ಹೇಳಲಾಗುತ್ತಿದೆ.

ಸ್ಟೀಲ್ ಪೈಪ್ ತುಂಬಿದ ಈ ಲಾರಿ ಬೆಂಗಳೂರಿನಿಂದ ಮುಂಬೈಗೆ ಹೊರಟಿತ್ತು. ನಿಪ್ಪಾಣಿ ಸಮೀಪವಿರುವ ಸ್ತವಂದಿ ಗ್ರಾಮದ ಬಳಿ ಅಪಾಯಕಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆ ವಿಭಜಕದ ಮೇಲೆ ಏರಿ ಪಲ್ಟಿಯಾಗಿದೆ.

ಅಪಘಾತದಿಂದ ಲಾರಿಯಲ್ಲಿದ್ದ ಅಪಾರ ಸಂಖ್ಯೆಯ ಸ್ಟೀಲ್‌ ಪೈಪ್‌ಗಳು ರಸ್ತೆಯ ತುಂಬ ಬಿದ್ದ ಪರಿಣಾಮ ಎರಡೂ ಬದಿಯ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.

ನಿಪ್ಪಾಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.