ಜನಸ್ಪಂದನ ನ್ಯೂಸ್, ದಕ್ಷಿಣ ಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಆಡಳಿತಾಧಿಕಾರಿಯೊಬ್ಬ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬಂಧಿತ ಗ್ರಾಮ ಆಡಳಿತಾಧಿಕಾರಿ ಮಿಯಾಸಾಬ್ ಮುಲ್ಲಾ ಎಂದು ತಿಳಿದುಬಂದಿದೆ.
ಅರಂತೋಡು ಗ್ರಾಮದ ಅಡ್ತಲೆ ನಿವಾಸಿ ಹರಿಪ್ರಸಾದ್ ಎಂಬವರು ಹಕ್ಕು ಖುಲಾಸೆಗಾಗಿ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಲೇವಾರಿ ಮಾಡಲು ಎಂಟು ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು.
ಈ ಮುಂಚೆ ಹರಿಪ್ರಸಾದ್ ಮೂರು ಸಾವಿರ ರೂ. ಹಣ ನೀಡಿದ್ದರು. ಉಳಿದ 5 ಸಾವಿರವನ್ನು ಶನಿವಾರ ಸುಳ್ಯ ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಹರಿಪ್ರಸಾದ್ ಅವರಿಂದ ಸ್ವೀಕರಿಸುವ ವೇಳೆ ಮಿಯಾಸಾಬ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಹರಿಪ್ರಸಾದ್ ಎರಡು ದಿನಗಳ ಹಿಂದೆ ದೂರು ಸಲ್ಲಿಸಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಲಂಚ ಸ್ವೀಕರಿಸುತ್ತಿರುವ ಸಂದರ್ಭದಲ್ಲೇ ಅಧಿಕಾರಿಯನ್ನು ಬಲೆಗೆ ಕೆಡವಿದ್ದಾರೆ.
ಸದ್ಯ ಬಂಧಿತ ಅಧಿಕಾರಿಯನ್ನು ನ್ಯಾಯಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ತಿಳಿದುಬಂದಿದೆ.