ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ತಾಲೂಕಿನ ಧಾಮಣೆ ಗ್ರಾಮದಲ್ಲಿ ಕಿತ್ತೂರು ಚನ್ನಮ್ಮ ಮೂರ್ತಿಯನ್ನು ಅನುಮತಿ ಪಡೆಯದೆ ಪ್ರತಿಷ್ಠಾಪಿಸಿದ್ದಾರೆಂದು ಪೊಲೀಸರು ತೆರವು ಮಾಡಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ರಾಣಿ ಚೆನ್ನಮ್ಮ ಮೂರ್ತಿಯನ್ನು ತೆರವುಗೊಳಿಸುತ್ತಿರುವುದನ್ನು ವಿಡಿಯೋ ಮಾಡುತ್ತಿದ್ದ ಯುವಕರನ್ನು ಪೊಲೀಸರು ಅಟ್ಟಾಡಿಸಿ ಹೊಡೆದಿದ್ದಾರೆ ಎನ್ನಲಾಗಿದೆ.
ನಾಲ್ಕು ವರ್ಷದಿಂದ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡುವಂತೆ ಗ್ರಾ.ಪಂ ಗೆ ಅರ್ಜಿ ಸಲ್ಲಿಸಲಾಗುತ್ತಿದೆ. ಮರಾಠಿಗರ ಪ್ರಾಬಲ್ಯವಿರುವ ಧಾಮಣೆ ಗ್ರಾಮದಲ್ಲಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆಗೆ ವಿರೋಧ ಮಾಡಲಾಗುತ್ತಿದೆ ಎಂದು ಕನ್ನಡಿಗರು ಆರೋಪಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಕನ್ನಡಿಗರು ಏಕಾಏಕಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಮೂರ್ತಿ ಪ್ರತಿಷ್ಠಾಪಿಸಿದ್ದ ಯುವಕರನ್ನು ವಶಕ್ಕೆ ಪಡೆದ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಮೂರ್ತಿ ತೆರವು ಮಾಡಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ.
ಸ್ಥಳದಲ್ಲಿ ಡಿಸಿಪಿ, ಮೂವರು ಪಿಐ ಸೇರಿ ಐವತ್ತಕ್ಕೂ ಹೆಚ್ಚು ಪೊಲೀಸರು ಮೊಕ್ಕಾಂ ಹೂಡಿದ್ದಾರೆ ಎಂದು ತಿಳಿದುಬಂದಿದೆ.