ದೇಶದಲ್ಲಿ 2024ರ ಯುಗಾದಿ ವೇಳೆಗೆ ಮತ್ತೊಂದು ದುರ್ಘಟನೆ, ರಾಷ್ಟ್ರದ ಮಹಾನ್ ವ್ಯಕ್ತಿಗಳಿಗೆ ದೊಡ್ಡ ಕಂಟಕ : ಕೋಡಿಮಠ ಶ್ರೀ..!

ಜನಸ್ಪಂದನ ನ್ಯೂಸ್, ಹಾಸನ : ಬರುವ 2024ರ ಯುಗಾದಿ ವೇಳೆಗೆ ದೇಶದಲ್ಲಿ ಮತ್ತೊಂದು ದುರ್ಘಟನೆ ಸಂಭವಿಸುತ್ತದೆ ಎಂದು ಕೋಡಿಮಠದ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಭವಿಷ್ಯ ನುಡಿದಿದ್ದಾರೆ.

ರಾಷ್ಟ್ರದ ಮಹಾನ್ ವ್ಯಕ್ತಿಗಳಿಗೆ ದೊಡ್ಡ ಕಂಟಕವಿದ್ದು, ಆಳುವವರು ಎಚ್ಚರ ವಹಿಸಿದರೆ ಅದನ್ನು ತಪ್ಪಿಸಬಹುದು ಎಂದು ಸ್ವಾಮಿಜೀ ಹೇಳಿದ್ದಾರೆ.

ಅವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿಯಲ್ಲಿರುವ ಕೋಡಿಮಠದಲ್ಲಿ ಮಾತನಾಡಿ, “ದೇಶದಲ್ಲಿ ಮತ್ತೊಂದು ದುರ್ಘಟನೆ ನಡೆಯುತ್ತದೆ, ಜಗತ್ತಿನ ಸಾಮ್ರಾಟರೆಲ್ಲಾ ತಲ್ಲಣವಾಗುವ ಕಾಲ ಬರುತ್ತದೆ. ದೊಡ್ಡ ಪಟ್ಟಣಗಳಿಗೆ ಅಪಾಯದ ಸೂಚನೆಯಿದ್ದು, ದೊಡ್ಡ ದೊಡ್ಡ ಕಟ್ಟಡಗಳು ಕುಸಿಯುವ ಸಾಧ್ಯತೆಯಿದೆ. ಅಲ್ಲದೇ, 2024ರ ಯುಗಾದಿಯೊಳಗೆ ಮೂರು ಮಂದಿ ಮಹಾನ್ ವ್ಯಕ್ತಿಗಳಿಗೆ ಅಪಾಯವಿದೆ. ನಮ್ಮನ್ನು ಆಳುವವರು ಎಚ್ಚರ ವಹಿಸಿದರೆ ಈ ದುರ್ಘಟನೆ ತಪ್ಪಿಸಬಹುದು. ಕಾಲ ಬಂದಾಗ ನಾನೇ ಎಲ್ಲವನ್ನು ವಿವರಿಸುತ್ತೇನೆ. ಜೀವನ ಆಡಂಬರ ರಹಿತವಾಗಿರಬೇಕು. ಆಧ್ಯಾತ್ಮಿಕವಾದ ಚಿಂತನೆ ನಮ್ಮಲ್ಲಿರಬೇಕು”. ಎಂದು ಸ್ವಾಮಿಜೀ ತಿಳಿಸಿದ್ದಾರೆ.

ಇನ್ನು ” ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಆದ್ರೆ, ಕೆಲವರು ಬಹುಬೇಗ ಹಣ ಮಾಡುವ ಆಸೆ ಹೊಂದಿದ್ದಾರೆ. ಅದೇ ಅವರಿಗೆ ಆಪತ್ತು ತಂದುಕೊಡುತ್ತದೆ. ಆಘಾತಗಳು ಸಂಭವಿಸಲಿದೆ, ಆದ್ರೆ ಯಾವುದೇ ತೊಂದರೆಯಿಲ್ಲ. ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಆಗುವ ಸಂಭವವಿದೆ. ಹೀಗಾಗಿ, ಸರ್ಕಾರ ಜನರ ಹಿತಕ್ಕಾಗಿ ಬದಲಾಗಬೇಕಿದೆ ” ಎಂದವರು ಹೇಳಿದರು.

ಮುಂದಿನ ಪ್ರಧಾನಿ ಯಾರಾಗಬೇಕೆಂಬ ಮಾಧ್ಯಮಗಳ ಪ್ರಶ್ನಗೆ ಉತ್ತರ ನೀಡಿದ ಅವರು, ಇಂತಹ ಪ್ರಶ್ನೆಗೆ ಉತ್ತರ ನೀಡುವುದು ಸಾಮಾನ್ಯವಾದ ಸಂಗತಿಯಲ್ಲ. ಅದನ್ನು ಸುಮ್ಮನೆ ಹೇಳುವುದಕ್ಕಾಗುವುದಿಲ್ಲ. ಅದರ ಬಗ್ಗೆ ಜಪ-ತಪಗಳನ್ನು ಮಾಡಬೇಕು. ಆಧ್ಯಾತ್ಮ ಚಿಂತನೆ ಮಾಡಬೇಕಿದೆ. ಪಂಚಾಗ್ನಿ, ಜಲಾಗ್ನಿ, ವಾಯಾಗ್ನಿ ಸೇರಿದಂತೆ 4 ಕಡೆ ಬೆಂಕಿಯನ್ನಿಟ್ಟು, ತಲೆಯ ಮೇಲೆ ಬೆಂಕಿಕುಂಡವಿಟ್ಟು ಧ್ಯಾನ ಮಾಡಬೇಕು.

ಮೊನ್ನೆ ಹಿಮಾಲಯದ ಜೋಶಿಮಠ ಮುಳುಗುವ ಮುನ್ನ ಧ್ಯಾನ ಮಗ್ನನಾಗಿದ್ದೆ. ಏಕಾಏಕಿ ಬೆಂಕಿ ನನ್ನ ಉದರದ ಮೇಲೆ ಬಿದ್ದು, ಗಾಯವಾಯ್ತು. ಆಗ ನನಗೆ ಗೌರಿಶಂಕರ ಶಿಖರಕ್ಕೆ ಮತ್ತು ಜೋಶಿಮಠಕ್ಕೆ ಕಂಟಕವಿದೆ ಎಂದು ಗೊತ್ತಾಯ್ತು. ಹೀಗಾಗಿ ಇಂತಹ ಪ್ರಶ್ನೆಗಳಿಗೆ ಸುಮ್ಮನೆ ಉತ್ತರ ನೀಡಲು ಸಾಧ್ಯವಿಲ್ಲ. ಸಮಯ ಬಂದಾಗ ನಾನೇ ಹೇಳುತ್ತೇನೆ ಎಂದು ಸ್ವಾಮಿಜೀ ತಿಳಿಸಿದರು. (ಏಜನ್ಸೀಸ್​)