ಲೈವ್ ವಿಡಿಯೋ ಮಾಡಿ, ಅಂತ್ಯಕ್ರಿಯೆಗೆ ಬರುವಂತೆ ಪ್ರಿಯತಮೆಗೆ ಆಹ್ವಾನಿಸಿ ಪ್ರಾಣ ಬಿಟ್ಟ ಪ್ರೇಮಿ.!

ಜನಸ್ಪಂದನ ನ್ಯೂಸ್, ಬೆಂಗಳೂರು ಗ್ರಾಮಾಂತರ : ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಪ್ರೇಮಿಯೊಬ್ಬ ವಿಡಿಯೋ ರೆಕಾರ್ಡ್ ಮಾಡಿ ತನ್ನ ಅಂತ್ಯಕ್ರಿಯೆಗೆ ಲವ್ವರ್’ನ್ನು ಆಹ್ವಾನ ನೀಡಿ ಲೈವ್​ನಲ್ಲೇ ಕೊನೆಯಸಿರೆಳೆದ ಘಟನೆ ನಡೆದಿದೆ.

ಲೈವ್ ವಿಡಿಯೋ ಮಾಡಿ ಪ್ರಾಣ ಬಿಟ್ಟ ಯುವಕ ಕಿರಣ್ (22) ಎಂದು ತಿಳಿದುಬಂದಿದೆ.

ಯುವಕ ಕಿರಣ್ ತನ್ನ ಲೈವ್ ವಿಡಿಯೋದಲ್ಲಿ, ಹಾಯ್ ಬಂಗಾರಿ ನಿಮ್ಮನ್ನೆಲ್ಲ ಬಿಟ್ಟು ಹೋಗುತ್ತಿದ್ದೇನೆ ಕಣೆ, ನಿಮ್ಮ ಅಪ್ಪ ಹೇಳಿದ ಹಾಗೆ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಆಗು. ನಿನಗೆ ಹುಟ್ಟಿದ ಮಗುವಿಗೆ ನನ್ನ ಹೆಸರೇ ಇಡಬೇಕು. ಇದು ನನ್ನ ಆಕಸ್ಮಿಕ ಸಾವು. ದಯವಿಟ್ಟು ಅಂತ್ಯಕ್ರಿಯೆಗೆ ಬಂದು ಹೋಗು. ನನ್ನ ಸಾವಿಗೆ ನಿನ್ನ ತಂಗಿಯನ್ನು ಕರೆದುಕೊಂಡು ಬಾ. ಒಳ್ಳೆಯದಾಗಲಿ ನಿಮ್ಮ ಕುಟುಂಬಕ್ಕೆ. ಹೀಗೆ ಚೆನ್ನಾಗಿರಿ ಎಂದು ಕಿರಣ್ ಲೈವ್​​ನಲ್ಲೇ ಕೈ ಮುಗಿದು ಪ್ರಾಣ ಕಳೆದುಕೊಂಡಿದ್ದಾನೆ‌.

ಮೃತ ಕಿರಣ್, ಆಗಸ್ಟ್ 3ರಂದು ತಾನೂ ಪ್ರೀತಿಸುತ್ತಿದ್ದ ಹುಡುಗಿಗೆ ರಿಂಗ್, ಕಾಲು ಚೈನ್ ಕೊಡಿಸಿದ್ದನು. ಈ ವಿಷಯ ತಿಳಿದ ಯುವತಿಯ ತಂದೆ ಇವರಿಬ್ಬರ ಪ್ರೀತಿಯನ್ನು ನಿರಾಕರಿಸಿದ್ದರು. ಹೀಗಾಗಿ ಯುವತಿ ಮನೆಯವರೆ ಏನೋ ಮಾಡಿ ನನ್ನ ಮಗನ ಸಾವಿಗೆ ಕಾರಣರಾಗಿದ್ದಾರೆಂದು ಕಿರಣ್ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಇನ್ನು ರೇಬೀಸ್ ರೋಗ ಉಲ್ಬಣಗೊಂಡು ಯುವಕ ನಿಮಾನ್ಸ್ ಸೇರಿದ್ದ. ನಿಮಾನ್ಸ್ ಆಸ್ಪತ್ರೆಯ ಬೆಡ್ ಮೇಲೆಯೇ ವಿಡಿಯೋ ಮಾಡುತ್ತ ಪ್ರಾಣಬಿಟ್ಟಿದ್ದಾನೆ.