ಪ್ರೀತಿಸಿ ಮದ್ವೆಯಾಗಿದ್ದ ಯುವತಿ ಅನುಮಾನಾಸ್ಪದ ಸಾವು.!

ಜನಸ್ಪಂದನ ನ್ಯೂಸ್, ಮಂಡ್ಯ : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದಲ್ಲಿ ಪ್ರೀತಿಸಿದ ಯುವಕನ ಜೊತೆ ಒಂದೂವರೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ನಡೆದಿದೆ.

ದರ್ಶಿನಿ (21) ಎಂಬುವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ದರ್ಶಿನಿ ಒಂದೂವರೆ ವರ್ಷದ ಹಿಂದೆ ಬೆಳಗೊಳ ಗ್ರಾಮದ ಸೂರ್ಯ ಎಂಬಾತನನ್ನು ಪ್ರೀತಿಸಿ ಮದುವೆ ಆಗಿದ್ದಳು. ಆದರೆ ಮದುವೆಯಾದ ನಾಲ್ಕೇ ತಿಂಗಳಿಗೆ ವರದಕ್ಷಿಣೆ ತರುವಂತೆ ಮಗಳನ್ನು ಪೀಡಿಸುತ್ತಿದ್ದರು ಎಂದು ದರ್ಶಿನಿ ಪೋಷಕರು ಆರೋಪಿಸಿದ್ದಾರೆ. ಇನ್ನು ಗಂಡ ಸೂರ್ಯನೇ ಕೊಲೆ ಮಾಡಿರುವುದಾಗಿ ದರ್ಶಿನಿ ಕುಟುಂಬಸ್ಥರ ಆರೋಪಿಸುತ್ತಿದ್ದಾರೆ.

ಪತಿ ಸೂರ್ಯ ಪತ್ನಿ ದರ್ಶಿನಿಯನ್ನು ತಂದು ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಬಳಿಕ ಮನೆಯವರಿಗೆ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ದರ್ಶಿನಿ ಸಾವಿನ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಕೆಆರ್ ಎಸ್ ಪೊಲೀಸ್​ ಠಾಣೆಯಲ್ಲಿ ದರ್ಶಿನಿಯ ಪೋಷಕರು ಗಂಡನ ಮನೆಯವರ ವಿರುದ್ಧ ದೂರು ನೀಡಿದ್ದಾರೆ. ಇನ್ನು ಈ ಸಾವಿನ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ಹಾಗೂ ಪೊಲೀಸರ ತನಿಖೆ ಬಳಿಕ ಸತ್ಯಾಸತ್ಯತೆ ಹೊರ ಬರಲಿದೆ.