ಶಾಲೆಯಿಂದ ಮನೆಗೆ ಹೊರಟಿದ್ದ ಬಾಲೆಯ ಮೇಲೆ ಪದೇಪದೇ ದಾಳಿ ಮಾಡಿದ ಹಸು : ಭಯಾನಕ ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಡೆಸ್ಕ್ : ಶಾಲೆಯಿಂದ ಮನೆಗೆ ಹೋಗುತ್ತಿದ್ದ ಒಂಬತ್ತು ವರ್ಷದ ಶಾಲಾ ಬಾಲಕಿಯ ಮೇಲೆ ಎರಡು ಹಸುಗಳು ಆಕ್ರಮಣಕಾರಿಯಾಗಿ ದಾಳಿ ಮಾಡಿರುವ ಭಯಾನಕ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ ವರದಿಯಾಗಿದೆ.

ಈ ಆಘಾತಕಾರಿ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹಲ್ಲೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಬಾಲಕಿಯು ತನ್ನ ತಾಯಿ ಮತ್ತು ಕಿರಿಯ ಸಹೋದರನೊಂದಿಗೆ ಮದ್ರಾಸ್ ಮೆಟ್ರೋಪಾಲಿಟನ್ ಡೆವಲಪ್‌ಮೆಂಟ್ ಅಥಾರಿಟಿ ಕಾಲೋನಿ ಪ್ರದೇಶದ ಇಳಂಗೋ ಸ್ಟ್ರೀಟ್‌ನಲ್ಲಿ ನಡೆದುಕೊಂಡು ಹೊರಟಿದ್ದಳು.

ಈ ವೇಳೆ ಬಾಲಕಿ ಎರಡು ಹಸುಗಳ ಹಿಂದೆ ಹೋಗುತ್ತಿದ್ದಾಗ ಒಂದು ಹಸು ತಿರುಗಿ ಕೊಂಬುಗಳಿಂದ ಪದೇ ಪದೇ ದಾಳಿ ಮಾಡಿದೆ.

ತಾಯಿಯ ಕಿರುಚಾಟ ಕೇಳಿ ಸ್ಥಳೀಯರು ಹಾಗೂ ದಾರಿಹೋಕರು ಜಮಾಯಿಸಿ ಕಲ್ಲು ಎಸೆದು, ಶಬ್ಧ ಮಾಡಿ ಹಸುವನ್ನು ಓಡಿಸಲು ಯತ್ನಿಸಿದರು. ಕೊನೆಗೆ ಕೋಲಿನಿಂದ ವ್ಯಕ್ತಿಯೊಬ್ಬ ಹೊಡೆದ ನಂತರ, ಹಸು ಸ್ಥಳದಿಂದ ಹೊರಟು ಹೋಗಿದೆ.

ಹಸುವಿನ ದಾಳಿಯಿಂದಾಗಿ ಬಾಲಕಿಯ ತಲೆಗೆ ತೀವ್ರ ಗಾಯಗಳಾಗಿದ್ದು, ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ‘ಹಸುಗಳನ್ನು ಹಿಡಿದಿದ್ದು, ಇವುಗಳ ಮಾಲೀಕರಿಗೆ ದಂಡ ವಿಧಿಸಲಾಗುವುದು. ನಗರ ವ್ಯಾಪ್ತಿಯಲ್ಲಿ ಜಾನುವಾರು ಸಾಕಣೆಯ ಇತರ ನಿಯಮಗಳ ಉಲ್ಲಂಘನೆಯಾಗಿದೆ’ ಎಂದು ಚೆನ್ನೈ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.